
ಚಿತ್ರದುರ್ಗ(ಮಾ.30): ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಬಂಡಾಯದ ವಾತಾವರಣ ಸೃಷ್ಟಿಸಿದ್ದು, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಮ್ಮ ಪುತ್ರ ರಘು ಚಂದನ್ ರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ರಘುಚಂದನ್ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಶುಕ್ರವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ ನಡೆಸಿದ ಚಂದ್ರಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪುತ್ರ ರಘುಚಂದನ್ ಕಣಕ್ಕಿಳಿಸುವ ಇಂಗಿತ ವ್ಯಕ್ತಪಡಿಸಿದರು. ಪಕ್ಷ ಏನೇ ಶಿಸ್ತು ಕ್ರಮಕೈಗೊಂಡರೂ ಎದುರಿಸಲು ಸಿದ್ಧ. ಏ3ರಂದು ರಘುಚಂದನ್ ನಾಮಪತ್ರ ಸಲ್ಲಿಕೆಗೆ ಚಿಂತನೆ ನಡೆಸಲಾಗಿದೆ ಎಂದರು.
ಈಗಲೂ ಕಾಲ ಮಿಂಚಿಲ್ಲ. ಬಿಜೆಪಿ ಟಿಕೆಟ್ ಬದಲಿಸಿ ರಘುಚಂದನ್‌ಗೆ ನೀಡಲಿ. ಇಲ್ಲದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಅನಿವಾರ್ಯ. ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರದಲ್ಲಿರುವ ಬೆಂಬಲಿಗರು ನನ್ನ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಸಾಧಕ-ಬಾಧಕ ನೋಡಿಯೇ ಖಚಿತ ತೀರ್ಮಾನ ಕೈಗೊಂಡಿದ್ದೇನೆ. ನಮ್ಮ ನೋವು ವರಿಷ್ಠರಿಗೆ ಅರ್ಥ ಆಗಿದೆ ಎಂದು ಭಾವಿಸಿದ್ದೇನೆ. ಈ ಹಿಂದೆ ಕಾರಜೋಳ ಅವರೇ ನನ್ನ ಪುತ್ರನನ್ನು ಚುನಾವಣೆಗೆ ನಿಲ್ಲಿಸಲು ಹೇಳಿದ್ದರು. ಈಗ ಅವರೇ ಅಭ್ಯರ್ಥಿಯಾಗಿರುವುದು ಸರಿಯೇ ಎಂದು ಪ್ರಶ್ನಿಸಿದ ಚಂದ್ರಪ್ಪ, ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡರೆ ಕೈಗೊಳ್ಳಲಿ. ನನ್ನ ನಿಲುವು ಬದಲಿಸುವುದಿಲ್ಲವೆಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರ: ನನ್ನ ಮಗನಿಗೆ ಟಿಕೆಟ್ ತಪ್ಪಲು ಯಡಿಯೂರಪ್ಪ ಕಾರಣ, ಚಂದ್ರಪ್ಪ
ಟಿಕೆಟ್ ವಂಚಿತ ರಘುಚಂದನ್ ಮಾತನಾಡಿ, ಸಂಘ ಪರಿವಾರದ ಇಬ್ಬರು ಹಿರಿಯರು ನನ್ನ ಜತೆ ಮಾತಾಡಿದ್ದಾರೆ. ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಹೇಳಿದ್ದೇನೆ. ಕಾರಜೋಳ ಅವರಿಗೆ ಜಿಲ್ಲೆಯ ಪರಿಚಯವೇ ಇಲ್ಲ. ಮಾಜಿ ಶಾಸಕರೊಬ್ಬರ ಭರವಸೆ ಮೇರೆಗೆ ಕಾರಜೋಳ ಬಂದಿದ್ದಾರೆ. ಬಿಜೆಪಿಯಲ್ಲಿ ದಲಿತ ಮುಖ್ಯಮಂತ್ರಿ ಹೆಸರು ಪ್ರಸ್ತಾಪವಾದಾಗ ಕಾರಜೋಳ ಅವರ ಹೆಸರು ಬಂದಿದೆ. ಇಲ್ಲಿ ಸೋಲುಂಡರೆ ಅವರ ಸ್ಥಿತಿ ಏನಾಗುತ್ತದೆ ಎಂಬುದು ಅವರಿಗೆ ಅರಿವಿರಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.