
ಬೆಂಗಳೂರು(ಜ.22): ರಾಜ್ಯ ಘಟಕದಲ್ಲಿ ತಾರಕ್ಕೇರಿರುವ ಬಣ ರಾಜಕೀಯ ಹಾಗೂ ಪಕ್ಷದ ನಾಯಕರ ವಿರುದ್ಧದ ಬಹಿರಂಗ ಹೇಳಿಕೆಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರಿಗೆ ಪಕ್ಷದ ಶಾಸಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇಲ್ಲವೇ? ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ವರಿಷ್ಠರು ಯಾಕೆ ಖಡಕ್ ಎಚ್ಚರಿಕೆ ನೀಡುತ್ತಿಲ್ಲ ಎಂದೂ ಶಾಸಕರು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಮಂಗಳವಾರ ಮಧ್ಯಾಹ್ನ ದೆಹಲಿಯಿಂದ ಆಗಮಿಸಿದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ನೇತೃತ್ವದಲ್ಲಿ ಪಕ್ಷ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಭೆ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಪಟ್ಟು ಹಿಡಿದ ಯತ್ನಾಳ್ ಬಣ
ಒಟ್ಟು 48 ಮಂದಿ ವಿಧಾನಸಭಾ ಸದಸ್ಯರು ಹಾಗೂ 16 ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಬಂಡಾಯ ಸಾರಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸಭೆಗೆ ಕ್ಯಾರೇ ಎನ್ನದೆ ಗೈರು ಹಾಜರಾಗಿದ್ದರು. ಯತ್ನಾಳ್ ಬಣದ ಬಿ.ಪಿ.ಹರೀಶ್ ಆಗಮಿಸಿದ್ದರು. ಇನ್ನುಳಿದಂತೆ ತಟಸ್ಥ ಬಣದ ವಿ.ಸುನೀಲ್ ಕುಮಾರ್, ಸಿ.ಸಿ.ಪಾಟೀಲ್, ಮಹೇಶ್ ಟೆಂಗಿನಕಾಯಿ, ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಶಿವರಾಮ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಮೊದಲಾದವರೂ ಗೈರಾಗಿದ್ದರು.
ಶಾಸಕರಾದ ಸುರೇಶ್‌ಗೌಡ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ಬಸವರಾಜ ಮತ್ತಿಮೂಡ, ಶೈಲೇಂದ್ರ ಬೆಲ್ದಾಳೆ, ಡಿ.ಎಸ್.ಅರುಣ್, ಪಿ.ಎಚ್.ಪೂಜಾರ್ ಸೇರಿ ಹಲವರು ಸಭೆಯಲ್ಲಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಕಡಿವಾಣ ಹಾಕಿ ಅಥವಾ ಕ್ರಮ ಕೈಗೊಳ್ಳಿ: ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಮಾತುಕತೆ ನಡೆಸಿ ಭಿನ್ನಮತ ಬಗೆಹರಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳಿಂದ ಅನೇಕ ಅಸ್ತ್ರಗಳನ್ನು ನಮಗೆ ನೀಡುತ್ತಿದೆ. ಆದರೆ, ಅವುಗಳನ್ನು ಬಳಸಿಕೊಳ್ಳುವುದಕ್ಕೆ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಬಣ ರಾಜಕೀಯವೇ ಹೈಲೈಟ್ ಆಗುತ್ತಿದೆ. ಪಕ್ಷದ ನಾಯಕರ ವಿರುದ್ಧ ನಮ್ಮವರೇ ಬಹಿರಂಗ ಹೇಳಿಕೆ ನೀಡಿದರೆ ನಾವು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಏನು ಉತ್ತರಿಸಬೇಕು ಎಂದು ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.
ಗುಂಪುಗಾರಿಕೆ ಬಿಡಿ: ಈ ನಡುವೆ ನಾಯಕರ ಮಾತಿಗೆ ಗರಂ ಆದ ಉಸ್ತುವಾರಿ ರಾಧಾ ಮೋಹನ್, ಅವರಿವರ ಬಗ್ಗೆ ದೂರು ಹೇಳುವುದು ಬಿಟ್ಟು ಮೊದಲು ಗುಂಪುಗಾರಿಕೆ ಬಿಡಿ. ರಾಜ್ಯದ ಎಲ್ಲಾ ಬೆಳವಣಿಗೆ ಬಗ್ಗೆ ಹೈಕಮಾಂಡ್ ಗಮನಿಸುತ್ತಿದೆ ಎಂದು ಚಾಟಿ ಬೀಸಿದರು ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಸಭೆಯಲ್ಲಿ ಕಾರ್ಯಕರ್ತರ ಪರವಾಗಿ ಹಾಗೂ ಕಾರ್ಯಕರ್ತರ ಧ್ವನಿಯಾಗಿ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯ ಕೇಂದ್ರದ ನಾಯಕರು ಮತ್ತು ಎಲ್ಲಿಗೆ ತಲುಪಬೇಕೋ ಅಲ್ಲಿಗೆ ತಲುಪಿದೆ ಎಂದು ತಿಳಿಸಿದರು.
ಜೋಶಿಗೂ ಡೋಂಟ್‌ಕೇರ್, ನಾವು ಬಹಿರಂಗವಾಗಿಯೇ ಮಾತನಾಡುತ್ತೇವೆ: ಯತ್ನಾಳ್
ಈಚೆಗೆ ಕೆಲವರು ಮಾತನಾಡುತ್ತಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಕಾರ್ಯಕರ್ತರ ಮನಸ್ಸಿಗೂ ನೋವು ಉಂಟಾಗುತ್ತಿದೆ. ಹಾಗಾಗಿ ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂಬ ಆಶಯ ವ್ಯಕ್ತವಾಗಿದೆ. ಹಾದಿಬೀದಿಯಲ್ಲಿ ಮಾತನಾಡುವವರಿಗೆ ರಾಷ್ಟ್ರೀಯ ನಾಯಕರು ತಾಕೀತು ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಸ್ಥಿತಿ ತಿಳಿಯಾಗಿ ಅವರು ಕೂಡ ಪಕ್ಷದ ಸಂಘಟನೆ ಜೊತೆ ನಿಂತು ಪಕ್ಷವನ್ನು ಬಲವರ್ಧನೆ ಮಾಡುವುದಲ್ಲದೆ, ರಾಜ್ಯಾಧ್ಯಕ್ಷರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂಬುದು ಎಲ್ಲ ಜನಪ್ರತಿನಿಧಿಗಳ ಆಶಯವಾಗಿತ್ತು. 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತವಾಗಿ ಕೆಲಸ ಆಗಬೇಕೆಂಬ ಅಭಿಪ್ರಾಯವನ್ನು ರಾಧಾಮೋಹನ್ ದಾಸ್ ಅಗರವಾಲ್ ಅವರಿಗೆ ತಿಳಿಸಲಾಗಿದೆ. ಈ ಮೂಲಕ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ತೆರೆ ಎಳೆಯುವ ವಿಶ್ವಾಸವನ್ನು ಎಲ್ಲ ಶಾಸಕರು ವ್ಯಕ್ತಪಡಿಸಿದ್ದಾರೆ. ಶಾಸಕರು ಆಗ್ರಹಪೂರ್ವಕವಾಗಿ ಮಾತನಾಡಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.