ತೃತೀಯ ಭಾಷೆ ರದ್ದತಿಯಿಂದ ಮಕ್ಕಳ ಬದುಕಿಗೆ ಕಲ್ಲು: ಆರ್‌.ಅಶೋಕ್‌ ವಾಗ್ದಾಳಿ

Published : Mar 31, 2026, 09:56 PM IST
r ashok

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ತೃತೀಯ ಭಾಷೆ ಹಿಂದಿಯನ್ನು ರದ್ದುಗೊಳಿಸುವ ಮುಖಾಂತರ ಮಕ್ಕಳ ಬದುಕಿಗೆ ಕಲ್ಲು ಹಾಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಮಾ.31): ರಾಜ್ಯ ಕಾಂಗ್ರೆಸ್‌ ಸರ್ಕಾರ ತೃತೀಯ ಭಾಷೆ ಹಿಂದಿಯನ್ನು ರದ್ದುಗೊಳಿಸುವ ಮುಖಾಂತರ ಮಕ್ಕಳ ಬದುಕಿಗೆ ಕಲ್ಲು ಹಾಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ತೃತೀಯ ಭಾಷೆ ಹಿಂದಿಯನ್ನು ತೆಗೆದು ಹಾಕಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಮಯದಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಹಿಂದಿ ಪಾಠ ಓದಿ ಅಭ್ಯಾಸ ಮಾಡಿದ್ದಾರೆ.

ಈಗ ದಿಢೀರನೆ ಈ ತೀರ್ಮಾನ ಕೈಗೊಂಡಿರುವುದು ದೊಡ್ಡ ಸಮಸ್ಯೆಯಾಗಿದೆ. ಕನ್ನಡದ ಮೇಲಿನ ಪ್ರೀತಿಯಿಂದ ಸರ್ಕಾರ ಈ ತೀರ್ಮಾನ ಮಾಡಿಲ್ಲ. ಇದು ಕೇವಲ ರಾಜಕಾರಣ ಎಂದು ಕಿಡಿಕಾರಿದರು. ಮಹಾತ್ಮ ಗಾಂಧೀಜಿ ಅವರು 1918ರಲ್ಲಿ ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು. ದಕ್ಷಿಣ ಭಾರತದಲ್ಲೂ ಅವರೇ ಈ ಸಮಿತಿ ಆರಂಭಿಸಿದರು. ಈ ಇತಿಹಾಸ ಗೊತ್ತಿಲ್ಲದ ಕಾಂಗ್ರೆಸ್‌ ನಾಯಕರು ಏಕಾಏಕಿ ಹಿಂದಿ ರದ್ದು ಮಾಡಿದ್ದಾರೆ. ಮಕ್ಕಳ ವಿಚಾರದಲ್ಲಿ ನಾವು ಸೂಕ್ಷ್ಮವಾಗಿರಬೇಕು ಎಂದು ಹೇಳಿದರು.

ಗಾಂಧಿಗೆ ಮಾಡಿದ ಅಪಮಾನ: ಇಂಗ್ಲಿಷ್‌ ಸಂವಹನ ಭಾಷೆಯಾಗಿದ್ದು, ಎಲ್ಲ ದೇಶಗಳಲ್ಲಿ ಬಳಕೆಯಲ್ಲಿದೆ. ಉರ್ದು ಕೂಡ ನಮ್ಮ ದೇಶದ್ದಲ್ಲವಾದರೂ ಅದನ್ನು ನಾವು ಕಲಿಯಬೇಕಿದೆ. ತಮಿಳು, ಮಲಯಾಳಂ, ತೆಲುಗು ಎಲ್ಲವೂ ನಮ್ಮ ದೇಶದ ಭಾಷೆಯಾಗಿದೆ. ಹಿಂದಿ ಓದಿ ಅದರಲ್ಲಿ ಹೆಚ್ಚು ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದ ಈ ನಿರ್ಧಾರ ನಿರಾಸೆಯಾಗಿದೆ. ಇದು ಸರ್ಕಾರ ತೋರಿದ ಹೇಡಿತನ ಹಾಗೂ ಮಹಾತ್ಮ ಗಾಂಧೀಜಿಗೆ ಮಾಡಿರುವ ಅಪಮಾನ ಎಂದು ಟೀಕಿಸಿದರು.

ನರೇಗಾದಲ್ಲಿ ಮಹಾತ್ಮ ಗಾಂಧೀಜಿ ಹೆಸರು ತೆಗೆದಾಕ್ಷಣ ಏನೋ ಅನಾಹುತವಾಗಿದೆ ಎಂದು ಕಾಂಗ್ರೆಸ್‌ ನಾಯಕರು ಬಾಯಿ ಬಡಿದುಕೊಂಡರು. ಆದರೆ ಈಗ ಯಾರೂ ಮಾತಾಡುತ್ತಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ತ್ರಿಭಾಷಾ ಸೂತ್ರ ತಂದಿದ್ದರು. ಮುಂದೆ ಇಂದಿರಾಗಾಂಧಿ ಅದಕ್ಕೆ ಇನ್ನಷ್ಟು ಒತ್ತು ನೀಡಿದ್ದರು ಎಂದರು.

ಕರ್ನಾಟಕ ಮುಸ್ಲಿಮರು ಸ್ವಚ್ಚ ಕನ್ನಡ ಮಾತಾಡಲ್ಲ

ತಮಿಳುನಾಡಿನಲ್ಲಿ ಹೀಗೆ ಮಾಡಿದ್ದಾರೆ ಎಂದಾಕ್ಷಣ ಇಲ್ಲೂ ಅದನ್ನೇ ಜಾರಿ ಮಾಡುತ್ತೇವೆ ಎಂದಿದ್ದಾರೆ. ತಮಿಳುನಾಡು ಮುಸ್ಲಿಮರು ಶುದ್ಧ ತಮಿಳು ಮಾತಾಡುತ್ತಾರೆ ಹಾಗೂ ಕೇರಳದಲ್ಲಿ ಮುಸ್ಲಿಮರು ಶುದ್ಧ ಮಲಯಾಳಂ ಮಾತಾಡುತ್ತಾರೆ. ಆದರೆ ಕರ್ನಾಟಕದ ಮುಸ್ಲಿಮರು ಸ್ವಚ್ಛವಾಗಿ ಕನ್ನಡ ಮಾತಾಡುವುದಿಲ್ಲ. ಇನ್ನು ನಮ್ದೂಕೆ ನಿಮ್ದೂಕೆ ಎಂದೇ ಅವರು ಹೇಳುತ್ತಾರೆ. ಇಂತಹವರು ಶುದ್ಧ ಕನ್ನಡ ಮಾತಾಡಲಿ ಎಂಬ ಉದ್ದೇಶ ಕಾಂಗ್ರೆಸ್‌ ಸರ್ಕಾರಕ್ಕೆ ಇಲ್ಲ ಎಂದು ಅಶೋಕ್‌ ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿ ಮೋದಿಯವರು ಸಾಲಮನ್ನಾ ಮಾಡಿದ್ದಾರಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಹಿಂದೂ-ದಲಿತರ ಶೋಷಣೆಗಳು ಕಾಂಗ್ರೆಸ್ ದುರಾಡಳಿತದ ಸಾಧನೆ: ಬಿ.ವೈ.ವಿಜಯೇಂದ್ರ