
ಬೆಂಗಳೂರು (ಜೂ.20): ಗೃಹ ಲಕ್ಷ್ಮಿ ಯೋಜನೆಯ ಹಣ ನಮ್ಮ ಇಲಾಖೆ ಬದಲಾಗಿ ಈಗ ಕೇಂದ್ರ ಸರ್ಕಾರದ ನಿಯಮದಂತೆ ಜಿಲ್ಲಾ ಮತ್ತು ತಾಪಂಗಳ ಮೂಲಕ ಫಲಾನುಭವಿಗಳಿಗೆ ಸಂದಾಯವಾಗುತ್ತಿದೆ. ಹೀಗಾಗಿ ಹಣ ತಲುಪುವುದು ಕೊಂಚ ವಿಳಂಬವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಯೋಜನೆಯ ಹಣ ಸಂದಾಯಕ್ಕೆ ತಾಂತ್ರಿಕ ಸಮಸ್ಯೆ ಆಗುತ್ತಿದೆಯೇ ಎಂಬ ಪ್ರಶ್ನೆಗೆ, ಆತಂಹ ಯಾವ ಸಮಸ್ಯೆಯೂ ಇಲ್ಲ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆಯೂ ಇಲ್ಲ. ಈಗಾಗಲೇ ಏಪ್ರಿಲ್ ತಿಂಗಳ ಹಣ ಸಂದಾಯವಾಗಿದ್ದು, ಮೇ ತಿಂಗಳ ಹಣ ವರ್ಗಾವಣೆ ಆಗಬೇಕಿದೆ.
ಈವರೆಗೆ ಯೋಜನೆ ಹಣ ನಮ್ಮ ಇಲಾಖೆಯಿಂದಲೇ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿತ್ತು. ಆದರೆ, ಈಗ ಕೇಂದ್ರ ಸರ್ಕಾರದ ನಿಯಮದಂತೆ ನಮ್ಮ ಇಲಾಖೆ ಬದಲಾಗಿ ಆಯಾ ಜಿಲ್ಲಾ ಹಾಗೂ ತಾಪಂ ಮೂಲಕ ಹಣ ಸಂದಾಯವಾಗುತ್ತಿದೆ ಎಂದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಳಜಿ ಇದೆ. ಯೋಜನೆಗೆ ಯಾವುದೇ ತೊಂದರೆ ಇಲ್ಲ. ಪ್ರತಿ ತಿಂಗಳು 10 ರಿಂದ 15 ಸಾವಿರ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ನೋಂದಣಿ ಮಾಡಿಕೊಂಡ ಎಲ್ಲಾ ಫಲಾನುಭವಿಗಳಿಗೆ ಹಣ ತಲುಪುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಭಾರತ ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ: ನಮ್ಮ ಭಾರತ ದೇಶ ಪುಣ್ಯ ಭೂಮಿ, ಈ ನಾಡಿನಲ್ಲಿ ಮಹಾನ್, ಸಂತರು, ಶರಣರು, ವ್ಯಕ್ತಿಗಳು ಹುಟ್ಟಿ ದೇಶವನ್ನು ಸಾಂಸ್ಕೃತಿಕವಾಗಿ ಸಮೃದ್ಧವಾಗಿ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು. ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶ್ರೀ ಗ್ರಾಮ ದೇವತೆಯ ಟೋಪ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 12 ವರ್ಷದ ನಂತರ ಶಕ್ತಿ ದೇವಿಯ ಜಾತ್ರೆಯ ಅದ್ಧೂರಿಯಾಗಿ ಮಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತೇ.
ಇದೆಲ್ಲಾ ನೋಡಿದರೆ ನಮ್ಮ ಸಂಸ್ಕೃತಿ ಎಷ್ಟೊಂದು ಶ್ರೀಮಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ರೀತಿಯ ಧಾರ್ಮಿಕ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವಂತಹ ಕೆಲಸವಾಗುತ್ತದೆ ಎಂದರು.ಗ್ರಾಮ ದೇವತೆಯರ ಜಾತ್ರೆಯನ್ನು ಊರ ಸಂರಕ್ಷಣೆ, ಊರಿನ ಸಮೃದ್ಧಿಗಾಗಿ, ದೇವಿಯರ ಶಾಂತಿಗಾಗಿ ಜಾತ್ರೆಯನ್ನು ಮಾಡುತ್ತೇವೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ಬಸವಣ್ಣನವರು ಸಾರಿದ್ದಾರೆ. ದೇವರಲ್ಲಿ ನಂಬಿಕೆ ಇಟ್ಟು, ಶ್ರದ್ಧಾ, ಭಕ್ತಿಯಿಂದ ಆರಾಧನೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ, ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.