ಹುಣಸೂರಿನ ನೂತನ ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಿ: ಶಾಸಕ ಜಿ.ಡಿ.ಹರೀಶ್ ಗೌಡ

By Kannadaprabha News  |  First Published Feb 16, 2024, 10:43 PM IST

ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬಾಕಿಯಿರುವ ಮೂಲ ಸೌಕರ್ಯ ಕಾಮಗಾರಿಗಳನ್ನು ಈ ವರ್ಷದೊಳಗೆ ಸಂಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. 
 


ಹುಣಸೂರು (ಫೆ.16): ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಬಾಕಿಯಿರುವ ಮೂಲ ಸೌಕರ್ಯ ಕಾಮಗಾರಿಗಳನ್ನು ಈ ವರ್ಷದೊಳಗೆ ಸಂಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ಕುರಿತು ಸಚಿವರ ಗಮನ ಸೆಳೆದರು. ಈ ವೇಳೆ ಮಾತನಾಡಿದ ಅವರು, 2018ರಲ್ಲಿ ಈ ಯೋಜನೆಗೆ ಚಾಲನೆ ದೊರೆಯಿತು, 2019ರಲ್ಲಿ ಕಾಮಗಾರಿ ಆರಂಭಗೊಂಡು 2020ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. 

ಒಟ್ಟು 31 ಕೋಟಿ ರು. ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೂ, ಆಸ್ಪತ್ರೆಗೆ ಅವಶ್ಯಕವಿರುವ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಕಳೆದೆರಡು ವರ್ಷಗಳಿಂದ ಕಟ್ಟಡ ಖಾಲಿ ಬಿದ್ದಿದ್ದು, ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಆಸ್ಪತ್ರೆಗೆ ಅಗತ್ಯವಿರುವ ಕಾಂಪೌಂಡ್, ಎಸ್.ಟಿಪಿ ಘಟಕ, ರ್ಯಾಂಪ್, ಲಿಫ್ಟ್, ಇನ್ನಿತರ ಸಲಕರಣೆಗಳು ಯಾವುದನ್ನೂ ಒದಗಿಸಿಲ್ಲ. ಹಾಲಿ ಇರುವ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು, ವಾರ್ಡ್ಗಳ ಸಮಸ್ಯೆ ಹೆಚ್ಚಾಗಿದೆ. ತಾಲೂಕಿನ ಜನತೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆಂದು ಸಮಸ್ಯೆಯನ್ನು ಬಿಡಿಸಿಟ್ಟರು.

Latest Videos

undefined

ಇದೂ ಪಾಳು ಕಟ್ಟಡವಾದೀತು: ಎರಡು ವರ್ಷಗಳಿಂದ ಕಟ್ಟಡ ಖಾಲಿ ಇದ್ದು, ಹೀಗೆ ಮುಂದುವರೆದಲ್ಲಿ ಇದೂ ಪಾಳು ಕಟ್ಟಡವಾದೀತು. ಈಗಾಗಲೇ ಗಿಡಮರಗಳು ಬೆಳೆಯುತ್ತಿವೆ. ಹೀಗಾದಲ್ಲಿ ಈಗಾಗಲೇ ಖರ್ಚು ಮಾಡಿರುವ 31 ಕೋಟಿ ರು. ಹಣವು ವ್ಯರ್ಥವಾಗುತ್ತದೆ. ಸರ್ಕಾರ ಹೆಚ್ಚುವರಿಯಾಗಿ 9.19 ಕೋಟಿ ರು. ಗಳೆಂದು ತಿಳಿಸಿದೆ. ಅದು 2022-23ರ ಅಂದಾರು ಪಟ್ಟಿಯಾಗಿದ್ದು, ಇದೀಗ ಸರಿಸುಮಾರು 14 ಕೋಟಿ ರು.ಗಳ ಅವಶ್ಯಕತೆಯಿದೆ. ಕಾಲಮಿತಿಯೊಳಗೆ ಸರ್ಕಾರ ಕಾಮಗಾರಿ ಸಂಪೂರ್ಣಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಲೂಟಿ ಜಾತ್ರೆ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಈ ವರ್ಷವೇ ಪೂರ್ಣಗೊಳಿಸುತ್ತೇವೆ: ಶಾಸಕರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸರ್ಕಾರ ಈಗಾಗಲೇ 31 ಕೋಟಿ ರು. ಗಳ ವೆಚ್ಚ ಮಾಡಿ ಕಟ್ಟಡ ನಿರ್ಮಿಸಿದ್ದು, ಸಲಕರಣೆಗಳು ಸೇರಿದಂತೆ ಮೂಲ ಸೌಕರ್ಯಗಳಾದ ಶವಗಾರ, ಬೆಂಕಿ ಅವಘಡ ತಡೆ, ಎಸ್.ಟಿಪಿ ಮುಂತಾದವುಗಳನ್ನು ಒದಗಿಸಿಲ್ಲದಿರುವುದು ನಿಜ. ಇಷ್ಟು ಖರ್ಚು ಮಾಡಿದ ನಂತರ ಕಟ್ಟಡವನ್ನು ಹಾಗೆ ಬಿಡಲು ಸಾಧ್ಯವಿಲ್ಲ. ಈ ವರ್ಷದಲ್ಲೇ ಕಾಮಗಾರಿ ಸಂಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು. ಆ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದರು.

click me!