ಗ್ರಾಪಂ ಕಾರ್‍ಯದರ್ಶಿ-ಲೆಕ್ಕ ಸಹಾಯಕ ವರ್ಗಾವಣೆ ಕೌನ್ಸೆಲಿಂಗ್‌: ಸಚಿವ ಪ್ರಿಯಾಂಕ್‌ ಖರ್ಗೆ

Govindaraj S   | Kannada Prabha
Published : Jul 24, 2025, 04:36 AM IST
Priyank Kharge

ಸಾರಾಂಶ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಗ್ರೇಡ್‌ 1 ಮತ್ತು 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ನಡೆಸುವ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆಂಗಳೂರು (ಜು.24): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಗ್ರೇಡ್‌ 1 ಮತ್ತು 2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ನಡೆಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈವರೆಗೆ 2,697 ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದ್ದಾರೆ.

ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ವರ್ಗಾವಣೆಯನ್ನು ಕೌನ್ಸೆಲಿಂಗ್‌ ಮೂಲಕ ನಡೆಸುವುದಾಗಿ 2024-25ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಚಾಲನೆ ನೀಡಲಾಗಿದೆ. ಮಂಗಳವಾರದಿಂದ ಕೌನ್ಸೆಲಿಂಗ್‌ ಆರಂಭಿಸಲಾಗಿದ್ದು, ಒಂದೇ ಸ್ಥಳದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿದ ನೌಕರರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಅಂಗವಿಕಲರು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವಿನಾಯತಿ ನೀಡಲಾಗಿದೆ. ಈವರೆಗೆ ಒಟ್ಟು 2,697 ನೌಕರರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನೌಕರರು ಸಲ್ಲಿಸಿದ ಅರ್ಜಿ, ಸ್ಥಳದ ಆಯ್ಕೆಗಳನ್ನು ಪರಿಗಣಿಸಿ ಆನ್‌ಲೈನ್‌ ಮೂಲಕ ಕೌನ್ಸೆಲಿಂಗ್‌ ಮಾಡಲಾಗುವುದು. ಈ ಪ್ರಕ್ರಿಯೆ ಜಿಪಂ ಹಂತದಲ್ಲಿ ವರ್ಗಾವಣೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಜು.24ರಂದು ವಿಶೇಷ ಪ್ರಕರಣಗಳ ಕೌನ್ಸೆಲಿಂಗ್‌ ಅನ್ನು ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ಜು.25ರಂದು ಸ್ಥಳ ನಿರೀಕ್ಷಣೆಯಲ್ಲಿರುವ ಮತ್ತು ಕಡ್ಡಾಯ ವರ್ಗಾವಣೆ ಪ್ರಕರಣಗಳ ಕೌನ್ಸೆಲಿಂಗ್‌ ನಡೆಯಲಿದ್ದು, ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ ಜು. 28ರಂದು ನಡೆಯಲಿದೆ ಎಂದಿದ್ದಾರೆ.

ನೀಲನಕ್ಷೆ ಸಿದ್ಧಪಡಿಸಿ: ಅವಳಿ ನಗರ ಸಮಗ್ರ ಅಭಿವೃದ್ಧಿ ಕುರಿತು ನೀಲನಕ್ಷೆ ಸಿದ್ಧಪಡಿಸಬೇಕು. ಅದಕ್ಕೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಹು-ಧಾ ಸಮಗ್ರ ಅಭಿವೃದ್ಧಿ (ಟೌನ್ ಪ್ಲಾನಿಂಗ್) ಕುರಿತು ಬುಧವಾರ ಬೆಂಗಳೂರಿನಲ್ಲಿ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ‌ ನೀಡಿದರು.

ಹುಬ್ಬಳ್ಳಿ- ಧಾರವಾಡ ರಾಜ್ಯದ ಎರಡನೇ ರಾಜಧಾನಿಯಂದೇ ಬಿಂಬಿತವಾಗಿದೆ. ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ನಗರವನ್ನು ಇನ್ನಷ್ಟು ಸುಂದರ ಮತ್ತು ಮಾದರಿ ನಗರವಾನ್ನಾಗಿಸುವ ಅವಶ್ಯಕತೆ ಇದ್ದು, ಮಾಸ್ಟರ್ ಪ್ಲಾನ್ ಅವಶ್ಯಕತೆಯಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ನಿಗದಿ ಪಡಿಸಿದ ಸಂಸ್ಥೆಗಳಿಗೆ ಸಮಗ್ರ ಮಾಹಿತಿ ನೀಡಬೇಕು ಎಂದರು.

ಯುಜಿಡಿ, ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸಂಸ್ಕರಣಾ ಘಟಕ, ಹಸರೀಕರಣ, ಕೊಳಗೇರಿಗಳ (ಸ್ಲಂ) ಅಭಿವೃದ್ಧಿ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಿದ ಸಚಿವರು, ಈಗಾಗಲೇ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸಮೀಕ್ಷೆ ಕೈಗೊಂಡು ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಅವಳಿ ನಗರದ ಅಭಿವೃದ್ಧಿಗೆ ಗುರುತು ಪಡಿಸಿದ ಸಂಸ್ಥೆಗಳಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ, ವಿಸ್ತೃತ ಯೋಜನಾವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ