ರಾಷ್ಟ್ರಪತಿ ಪದವಿಗೆ ಏರಿದ್ದು ನನ್ನ ಸಾಧನೆಯಲ್ಲ, ದೇಶದ ಬಡವರ ಸಾಧನೆ!

Published : Jul 25, 2022, 10:42 AM ISTUpdated : Jul 25, 2022, 11:19 AM IST
ರಾಷ್ಟ್ರಪತಿ ಪದವಿಗೆ ಏರಿದ್ದು ನನ್ನ ಸಾಧನೆಯಲ್ಲ, ದೇಶದ ಬಡವರ ಸಾಧನೆ!

ಸಾರಾಂಶ

ದೇಶದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ 64 ವರ್ಷದ ದ್ರೌಪದಿ ಮುರ್ಮು, ತಮ್ಮ ಮೊದಲ ಭಾಷಣದಲ್ಲಿ ದೇಶದ ಸಂಸತ್ತು, ಪ್ರಜಾಪ್ರಭುತ್ವ, ಜನರ ನಿರೀಕ್ಷೆಗಳು, ಸರ್ಕಾರದ ಕೆಲಸಗಳು, ವಿಪಕ್ಷಗಳ ಸಹಕಾರ ಎಲ್ಲಾ ವಿಷಯಗಳ ಮಾತನಾಡಿದರು. ಎಲ್ಲರ ಸಹಕಾರದಿಂದಲೇ ಶ್ರೇಷ್ಠ ಭಾರತ ನಿರ್ಮಾಣವಾಗುತ್ತದೆ ಎನ್ನುವ ಮಾತನ್ನಾಡಿದರು.

ನವದೆಹಲಿ (ಜುಲೈ 25): ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಬರೀ ಕನಸು ಕಾಣುವುದು ಮಾತ್ರವಲ್ಲ, ಅದನ್ನೂ ನನಸೂ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹೇಳಿದರು. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ 64 ವರ್ಷದ ದ್ರೌಪದಿ ಮುರ್ಮು ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಪ್ರಮಾಣವಚನ ಬೋಧನೆ ಮಾಡಿದರು. ಆ ಬಳಿಕ ತಮ್ಮ ಮೊದಲ ರಾಷ್ಟ್ರಪತಿ ಭಾಷಣದಲ್ಲಿ ಮಾತನಾಡಿದ ಅವರು, 'ಎಲ್ಲಾ ಭಾರತೀಯರ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತ ಈ ಸಂಸತ್ತು. ನಾನು ನಿಮ್ಮೆಲ್ಲರಿಗೂ ವಿನಮ್ರವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ನಿಮ್ಮ ನಂಬಿಕೆ ಮತ್ತು ಬೆಂಬಲ ನನಗೆ ಪ್ರಮುಖ ಶಕ್ತಿಯಾಗಿದೆ' ಎಂದರು. ವರ್ಷಗಟ್ಟಲೆ ಅಭಿವೃದ್ಧಿ ಕಾಣದ ಜನರು-ಬಡವರು, ದಲಿತರು, ಹಿಂದುಳಿದವರು, ಗಿರಿಜನರು- ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗೆ. ನನ್ನ ನಾಮನಿರ್ದೇಶನದ ಹಿಂದೆ ಬಡವರ ಆಶೀರ್ವಾದವಿದೆ, ಇದು ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿದೆ ಎಂದು ಹೇಳಿದರು.

 

ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಇಂತಹ ಮಹತ್ವದ ಅವಧಿಯಲ್ಲಿ ನಾನು ದೇಶದಿಂದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೇನೆ. ಇಂದಿನಿಂದ ಕೆಲವೇ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಲಿವೆ. ದೇಶವು 50ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವಾಗ ನನ್ನ ರಾಜಕೀಯ ಜೀವನ ಆರಂಭವಾಗಿತ್ತು. ಇಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಈ ಹೊಸ ಜವಾಬ್ದಾರಿ ಸಿಕ್ಕಿರುವುದು ಕೂಡ ಕಾಕತಾಳೀಯ ಎಂದರು.
 

ಇದು ಭಾರತದ ಹಿರಿಮೆ: ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ಬುಡಕಟ್ಟು ಸಮಾಜದವಳು ಮತ್ತು ವಾರ್ಡ್ ಕೌನ್ಸಿಲರ್‌ನಿಂದ ಭಾರತದ ರಾಷ್ಟ್ರಪತಿಯಾಗುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಇದು ಪ್ರಜಾಪ್ರಭುತ್ವದ ತಾಯಿಯಾದ ಭಾರತದ ಹಿರಿಮೆ. ಬಡವರ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗಳು, ದೂರದ ಬುಡಕಟ್ಟು ಪ್ರದೇಶದಲ್ಲಿ ಹುಟ್ಟಿದ ಹೆಣ್ಣು ಮಗಳು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ತಲುಪುವುದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ರಾಷ್ಟ್ರಪತಿ ಹುದ್ದೆಯನ್ನು ತಲುಪುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ ಎಂದರು.

President Oath Ceremony: 64 ವರ್ಷದ ದ್ರೌಪದಿ ಮುರ್ಮು ಇನ್ನು ದೇಶದ ಸುಪ್ರೀಂ ಕಮಾಂಡರ್!

ನಾವು ವೇಗವಾಗಿ ಕೆಲಸ ಮಾಡಬೇಕು: ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ನಾಗರಿಕರಿಂದ ಮಾಡಿದ ನಿರೀಕ್ಷೆಗಳನ್ನು ಈ ಅಮೃತಕಾಲವನ್ನು ಈಡೇರಿಸಲು ನಾವು ವೇಗವಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಈ 25 ವರ್ಷಗಳಲ್ಲಿ, ಅಮೃತಕಾಲ ಸಾಧನೆಯ ಹಾದಿಯು ಪ್ರತಿಯೊಬ್ಬರ ಪ್ರಯತ್ನ ಮತ್ತು ಪ್ರತಿಯೊಬ್ಬರ ಕರ್ತವ್ಯ ಎನ್ನುವ ಎರಡು ಹಾದಿಯಲ್ಲಿ ಸಾಗುತ್ತದೆ ಎಂದರು.

Droupadi Murmu: ಹೆಜ್ಜೆ ಇಟ್ಟಳು ದ್ರೌಪದಿ ಭಾರತ ಮಹಾ...ಭಾರತವಾಗಲಿ- ಚಿಂತನಾ ಹೆಗಡೆ ಅವರ ಭಾಗವತಿಗೆ ವೈರಲ್!

ನನ್ನ ಆಯ್ಕೆಯೇ ಸಾಕ್ಷಿ: ಭಾರತದ ಬಡವರು ಕನಸು ಕಾಣುತ್ತಾರೆ ಮತ್ತು ಅವರ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿ ಎಂದು ರಾಷ್ಟ್ರಪತಿ ಹೇಳಿದರು. ಶತಮಾನಗಳಿಂದ ವಂಚಿತರಾದವರು, ಅಭಿವೃದ್ಧಿಯ ಲಾಭದಿಂದ ದೂರವಿರುವವರು, ಬಡವರು, ದೀನದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರು ನನ್ನಲ್ಲಿ ತಮ್ಮ ಪ್ರತಿಬಿಂಬವನ್ನು ಕಾಣುತ್ತಿರುವುದು ನನಗೆ ಅತ್ಯಂತ ತೃಪ್ತಿಯ ವಿಷಯವಾಗಿದೆ. ನನ್ನ ಈ ಚುನಾವಣೆಯು ದೇಶದ ಬಡವರ ಆಶೀರ್ವಾದವನ್ನು ಒಳಗೊಂಡಿದೆ, ದೇಶದ ಕೋಟಿಗಟ್ಟಲೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕನಸುಗಳು ಮತ್ತು ಸಾಮರ್ಥ್ಯಗಳ ಒಂದು ನೋಟ. ಈ ಚುನಾವಣೆಯಲ್ಲಿ ಭಾರತದ ಇಂದಿನ ಯುವಕರು ಹಳೇ ಹಳಿಗಳಿಂದ ಹೊರಬಂದು ಹೊಸ ಹಾದಿಯಲ್ಲಿ ಸಾಗುವ ಧೈರ್ಯವೂ ಸೇರಿದೆ. ಇಂದು ನಾನು ಅಂತಹ ಪ್ರಗತಿಪರ ಭಾರತವನ್ನು ಮುನ್ನಡೆಸಲು ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ:  ನಮ್ಮ ಸ್ವಾತಂತ್ರ್ಯ ಹೋರಾಟವು ತ್ಯಾಗ-ಬಲಿದಾನಗಳ ನಿರಂತರ ಪ್ರವಾಹವಾಗಿತ್ತು. ಸ್ವತಂತ್ರ ಭಾರತಕ್ಕೆ ಹಲವಾರು ಆದರ್ಶಗಳು ಮತ್ತು ಸಾಧ್ಯತೆಗಳಿಗೆ ನೀರುಣಿಸಿತು. ಪೂಜ್ಯ ಬಾಪು ಅವರು ಸ್ವರಾಜ್, ಸ್ವದೇಶಿ, ಸ್ವಚ್ಛತಾ ಮತ್ತು ಸತ್ಯಾಗ್ರಹದ ಮೂಲಕ ಭಾರತದ ಸಾಂಸ್ಕೃತಿಕ ಆದರ್ಶಗಳನ್ನು ಸ್ಥಾಪಿಸುವ ಮಾರ್ಗವನ್ನು ನಮಗೆ ತೋರಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್, ಪಂಡಿತ್ ನೆಹರು, ಸರ್ದಾರ್ ಪಟೇಲ್, ಬಾಬಾಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ ಆಜಾದ್ ಅವರಂತಹ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರದ ಸ್ವಾಭಿಮಾನವನ್ನು ಮುಖ್ಯವಾಗಿಡಲು ನಮಗೆ ಕಲಿಸಿದರು.

ಸ್ವಾತಂತ್ರ್ಯದಲ್ಲಿ ಬುಡಕಟ್ಟು ಜನಾಂಗದವರ ಕೊಡುಗೆಯ ಸ್ಮರಣೆ:  ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದ ಕೊಡುಗೆಯನ್ನು ಸ್ಮರಿಸಿದರು. ಸಂತಾಲ್ ಕ್ರಾಂತಿ, ಪೈಕಾ ಕ್ರಾಂತಿಯಿಂದ ಕೋಲ್ ಕ್ರಾಂತಿ ಮತ್ತು ಭಿಲ್ ಕ್ರಾಂತಿಯವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದ ಕೊಡುಗೆ ಮತ್ತಷ್ಟು ಬಲಗೊಂಡಿದೆ ಎಂದರು. ಸಮಾಜೋನ್ನತಿ ಮತ್ತು ದೇಶಪ್ರೇಮಕ್ಕಾಗಿ 'ಧರ್ತಿ ಆಬಾ' ಭಗವಾನ್ ಬಿರ್ಸಾ ಮುಂಡಾ ಜಿ ಅವರ ತ್ಯಾಗದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌