
ನವದೆಹಲಿ (ಜುಲೈ 25): ಇತ್ತೀಚೆಗಷ್ಟೇ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಜಯಭೇರಿ ಬಾರಿಸಿದ ದ್ರೌಪದಿ ಮುರ್ಮು ಅವರು, ದೇಶದ 15ನೇ ರಾಷ್ಟ್ರಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ. 64 ವರ್ಷದ ಇವರು ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ, 2ನೇ ಮಹಿಳಾ ರಾಷ್ಟ್ರಪತಿ ಹಾಗೂ ಅತಿ ಕಿರಿಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದಾರೆ. ಸ್ವಾತಂತ್ರ್ಯಾನಂತರ ಜನಿಸಿದ ವ್ಯಕ್ತಿಯೊಬ್ಬರು ದೇಶದ ರಾಷ್ಟ್ರಪತಿ ಆಗುತ್ತಿರುವುದು ಕೂಡ ಇದೇ ಮೊದಲು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10.15ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಎನ್.ವಿ. ರಮಣ ಅವರು ಮುರ್ಮು ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಇದಾದ ನಂತರ 21 ಕುಶಾಲತೋಪುಗಳನ್ನು ಹಾರಿಸಿ ದ್ರೌಪದಿ ಅವರಿಗೆ ಗನ್ ಸಲ್ಯೂಟ್ ನೀಡಲಾಗುತ್ತದೆ. ಇದಾದ ನಂತರ ಅವರು ರಾಷ್ಟ್ರಪತಿಯಾಗಿ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ. ಈ ಸಮಾರಂಭಕ್ಕೂ ಮುನ್ನ ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಮುರ್ಮು ಅವರು ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಯಭಾರಿಗಳು, ಸಂಸದರು, ಸೇನಾ ಮುಖ್ಯಸ್ಥರು ಹಾಗೂ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಮಾರಂಭ ಮುಗಿದ ನಂತರ ದ್ರೌಪದಿ (Draupadi Murmu) ಅವರು ರಾಷ್ಟ್ರಪತಿ ಭವನಕ್ಕೆ (president palace) ತೆರಳಲಿದ್ದಾರೆ. ಅಲ್ಲಿಯೂ ಅವರಿಗೆ ಗೌರವ ವಂದನೆ ನೀಡಿ ಸ್ವಾಗತಿಸಲಾಗುತ್ತದೆ. ನಿರ್ಗಮಿತ ರಾಷ್ಟ್ರಪತಿ ಕೋವಿಂದ್ (Ramnath kovind)ಅವರಿಗೂ ಅಲ್ಲಿ ಗೌರವ ವಂದನೆ ನೀಡಲಾಗುತ್ತದೆ.
ಭರ್ಜರಿ ಜಯ ಕಂಡಿದ್ದ ದ್ರೌಪದಿ: ದ್ರೌಪದಿ ಮುರ್ಮು ಅವರು ಇತ್ತೀಚೆಗೆ ಸಂಪನ್ನಗೊಂಡ ರಾಷ್ಟ್ರಪತಿ ಚುನಾವಣೆಯಲ್ಲಿ (President election) ಶೇ.64ರಷ್ಟುಮತಗಳನ್ನು ಪಡೆದು, ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ(yashwant sinha) ಅವರನ್ನು ಸುಲಭವಾಗಿ ಮಣಿಸಿದ್ದರು. ದ್ರೌಪದಿ ಅವರಿಗೆ 6,76,803 ಮತ ಹಾಗೂ ಸಿನ್ಹಾ ಅವರಿಗೆ 3,80,177 ಮತ ಬಿದ್ದಿದ್ದವು. ದ್ರೌಪದಿ ಮೂಲತಃ ಒಡಿಶಾದವರು. ಇದಕ್ಕೂ ಮುನ್ನ ಅವರು ಒಡಿಶಾ (Odisha) ಬಿಜೆಪಿ ಶಾಸಕಿಯಾಗಿ (BJP MLA), ಸಚಿವೆಯಾಗಿ ಹಾಗೂ ಜಾರ್ಖಂಡ್ ರಾಜ್ಯಪಾಲೆಯಾಗಿ (jharkhand governor ) ಕಾರ್ಯನಿರ್ವಹಿಸಿದ್ದರು.
ರಾಷ್ಟ್ರಪತಿ ಚುನಾವಣೆ: 10 ರಾಜ್ಯಗಳ 110 ಶಾಸಕರಿಂದ ಕ್ರಾಸ್ ವೋಟಿಂಗ್!
ಮುರ್ಮು ಪ್ರಥಮಗಳು: ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ ಎನಿಸಿಕೊಂಡಿದ್ದಲ್ಲದೆ, ಸ್ವಾತಂತ್ರ್ಯಾನಂತರ ಜನಿಸಿದ ವ್ಯಕ್ತಿಗೆ ಮೊದಲ ಬಾರಿ ರಾಷ್ಟ್ರಪತಿ ಹುದ್ದೆ ಲಭಿಸಿದೆ. ಅದಲ್ಲದೆ, ಅತಿ ಕಿರಿಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯೂ ಇವರದಾಗಿದೆ. ದೇಶದ 2ನೇ ಮಹಿಳಾ ರಾಷ್ಟ್ರಪತಿ ಇವರಾಗಿದ್ದಾರೆ.
ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ
ಜು.25ರಂದು ಪ್ರಮಾಣ ವಚನ (oath taking) ಸ್ವೀಕರಿಸಿದ 10ನೇ ರಾಷ್ಟ್ರಪತಿ: ದ್ರೌಪದಿ ಮುರ್ಮು ಜು.25ರ ಸೋಮವಾರ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ. ವಿಶೇಷವೆಂದರೆ ಜು.25ರಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ 10ನೇ ರಾಷ್ಟ್ರಪತಿ ಇವರಾಗಿದ್ದಾರೆ. ದೇಶದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಅವರು ಗಣರಾಜ್ಯೋತ್ಸವ ದಿನ ಅಂದರೆ ಜ.26 1950ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ನೀಲಂ ಸಂಜೀವ ರೆಡ್ಡಿ ದೇಶದ 6ನೇ ರಾಷ್ಟ್ರಪತಿಯಾಗಿ ಜು.25 1977ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಜೈಲ್‌ಸಿಂಗ್, ಆರ್.ವೆಂಕಟ್‌ರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣ್, ಎಪಿಜೆ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಹಾಗೂ ರಾಮನಾಥ್ ಕೋವಿಂದ್ ಇವರೆಲ್ಲರೂ ಜು.25ರಂದು ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.