ಮಂಜುನಾಥ ಸಾಯೀಮನೆ
ಶಿರಸಿ (ಫೆ.23) : ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಜಾಸ್ತಿ ಆಗತೊಡಗಿದೆ. ಬಿಜೆಪಿ ಗಟ್ಟಿನೆಲವಾಗಿ ಪರಿವರ್ತನೆಗೊಂಡ ಈ ಕ್ಷೇತ್ರವನ್ನು ಕಸಿದುಕೊಳ್ಳಲು ವಿರೋಧ ಪಕ್ಷಗಳು ಒಂದೆಡೆ ಹವಣಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಒಳಗೇ ಈ ಕ್ಷೇತ್ರವನ್ನು ಕಾಗೇರಿಯವರಿಂದ ಕಸಿದುಕೊಳ್ಳುವ ಕಚ್ಚಾಟ ಜೋರಾಗಿದೆ.
ಕ್ಷೇತ್ರ ಮರು ವಿಂಗಡಣೆ ಆದ ಬಳಿಕ ಅಂಕೋಲಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegade Kageri) ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದಾರೆ. ಅಂಕೊಲಾ ಕ್ಷೇತ್ರದಲ್ಲಿದ್ದ ಅವರ ವಿಜಯ ಯಾತ್ರೆ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿಯೂ ಮುಂದುವರಿದಿದೆ. ಈ ಕ್ಷೇತ್ರ ಬಿಜೆಪಿಯ ಗಟ್ಟಿನೆಲ ಎಂದು ಬದಲಾಗಿದೆ. ಆದರೆ, ಈ ವರ್ಷ ಬಿಜೆಪಿಯಲ್ಲೇ ಅವರಿಗೆ ಪ್ರತಿಸ್ಪರ್ಧಿಗಳು ಆರಂಭವಾಗಿದ್ದಾರೆ. ಹಿರಿಯ ಪತ್ರಕರ್ತ, ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ತಾನು ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಬಿಜೆಪಿಯಿಂದ ನನಗೇ ಟಿಕೆಟ್ ಸಿಗುವ ಭರವಸೆ ಇದೆ ಎಂದೂ ಹೇಳಿಕೊಂಡಿದ್ದಾರೆ.\
ಸೋಲು ಖಚಿತವಾದಾಗ ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ: ಬಿ.ಕೆ.ಹರಿಪ್ರಸಾದ್
ಹಾಗೆ ನೋಡಿದರೆ ಸಚ್ಚಿದಾನಂದ ಹೆಗಡೆ(Satchidananda Hegde) ಅವರು ಸರಳ ಮತ್ತು ಸಜ್ಜನ. ಪತ್ರಿಕೋದ್ಯಮದಲ್ಲಿ ಪಳಗಿದ ಅನುಭವ ಅವರಿಗಿರುವ ಜೊತೆ ಮದ್ಯಪಾನ ಸಂಯಮ ಮಂಡಳಿಯಲ್ಲೂ ಕರ್ತವ್ಯವನ್ನು ಕರಾರುವಕ್ಕಾಗಿ ನಿಭಾಯಿಸಿದ್ದಾರೆ. ಆದರೆ, ಅನುಭವವೇ ಬೇರೆ, ರಾಜಕಾರಣ, ತಂತ್ರಗಾರಿಕೆಗಳೇ ಬೇರೆ. ಹಾಲಿ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೇಲೂ ಯಾವುದೇ ಕಪ್ಪು ಚುಕ್ಕಿ ಇಲ್ಲ, ಕ್ಷೇತ್ರದಲ್ಲಿ ಗುಂಡಾಗಿರಿ, ಅಸುರಕ್ಷಿತ ವಾತಾವರಣವಿಲ್ಲ. ಕ್ಷೇತ್ರದಲ್ಲಿ ಇರುವ ಕಾಗೇರಿ ವರ್ಚಸ್ಸಿನ ಹಿಂದೆ ಈ ಅಂಶವೂ ಪ್ರಮುಖವಾಗಿದೆ. ಜೊತೆಗೆ ವಿಧಾನ ಸಭಾಧ್ಯಕ್ಷರಾದ ಬಳಿಕ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಶಿರಸಿಗೆ ಬಂದಾಗ ಮುಂದಿನ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಎಂದು ಸೂಚ್ಯವಾಗಿ ಹೇಳಿರುವುದು ಮತ್ತು ವಿಶ್ವೇಶ್ವರ ಹೆಗಡೆ ಅವರ ಸರಳತೆಯನ್ನು ಪಕ್ಷ ಬಳಸಿಕೊಳ್ಳಲು ಯತ್ನಿಸುತ್ತಿರುವುದು ಕೂಡ ಸ್ಥಳೀಯ ಆಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇನ್ನು ಕಾಂಗ್ರೆಸ್ ಟೀಂ(Congress Team) ನಲ್ಲಿ ಕಾಗೇರಿಯವರ ಎದುರು ಔಟಾದ ಬ್ಯಾಟ್ಸಮನ್‌ಗಳೇ ಜಾಸ್ತಿ ಇದ್ದಾರೆ. ಜಿಲ್ಲಾ ಮಾಜಿ ಅಧ್ಯಕ್ಷ ಭೀಮಣ್ಣ ನಾಯ್ಕ ತಾನೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರಾದರೂ ಈಗಾಗಲೇ ಒಮ್ಮೆ ಕಾಗೇರಿ ಅವರ ಎದುರು, ಇನ್ನೊಮ್ಮೆ ಶಿವರಾಮ ಹೆಬ್ಬಾರ್ ಎದುರು, ಮಗದೊಮ್ಮೆ ಗಣಪತಿ ಉಳ್ವೇಕರ್ ಎದುರು ಸೋತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮತ್ತೆ ಅವರಿಗೇ ಮಣೆ ನೀಡಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಇನ್ನೊಂದೆಡೆ ಹವ್ಯಕ ಬ್ರಾಹ್ಮಣ(Havyaka brahmana)ರ ಮತ ಕ್ಷೇತ್ರದಲ್ಲಿ ಜಾಸ್ತಿ ಇರುವುದರಿಂದ ಅನುಭವಿ, ಜಿಪಂ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಮಾತೂ ಕೇಳಿಬಂದಿದೆ. ಆದರೆ, ಕಾಂಗ್ರೆಸ್ ಟಿಕೆಟ್ ಎಂದಿದ್ದರೂ ಅಂತಿಮ ಕ್ಷಣದಲ್ಲೇ ಪ್ರಕಟವಾಗುತ್ತದೆ. ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಿಬಿಟ್ಟರೆ ಇನ್ನೊಂದು ಬಣ ವಿರುದ್ಧ ದಿಕ್ಕಿನಲ್ಲಿಯೇ ಕೆಲಸ ಆರಂಭಿಸುತ್ತದೆ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಾರೆ, ಈಗಾಗಲೇ ಉದಾಹರಣೆಗಳೂ ಇವೆ. ಏನೇ ಆದರೂ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿ ಈಗಾಗಲೇ ಆರು ಜನ ಪಕ್ಷದ ಹೈಕಮಾಂಡ್ ಗೆ ಅರ್ಜಿ ಗುಜರಾಯಿಸಿಕೊಂಡು ಕಾಯತೊಡಗಿದ್ದಾರೆ.
ರಾಮಕೃಷ್ಣ ಹೆಗಡೆ ಕುಟುಂಬದ(Ramakrishna hegde family)ವರು ಎಂದು ಪ್ರಚಾರ ಮಾಡಿಕೊಂಡರೂ ಶಶಿಭೂಷಣ ಹೆಗಡೆ ಅವರಿಗೆ ಜೆಡಿಎಸ್ ನಿಂದ ಈ ಕ್ಷೇತ್ರದಿಂದ ಆರಿಸಿಬರಲು ಸಾಧ್ಯವಾಗಿಲ್ಲ. ಶಿರಸಿ ಜಿಲ್ಲೆ ಹೋರಾಟ ಸಮಿತಿ ಅಧ್ಯಕ್ಷ, ಉದ್ಯಮಿ ಮತ್ತು ಇದುವರೆಗೂ ಕಾಂಗ್ರೆಸ್ ನಲ್ಲಿ ಸಕ್ರೀಯವಾಗಿದ್ದ ಉಪೇಂದ್ರ ಪೈ ಈಗ ಜೆಡಿಎಸ್ ನಾಯಕರ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಒಂದೊಮ್ಮೆ ಉಪೇಂದ್ರ ಪೈ ಅವರೇ ಅಭ್ಯರ್ಥಿಯಾಗಿ ಘೋಷಣೆ ಆದರೂ, ತಳಮಟ್ಟದ ಕಾರ್ಯಕರ್ತರೇ ಇಲ್ಲದ ಜೆಡಿಎಸ್‌ಗೆ ಉಪೇಂದ್ರ ಪೈ ರೋಲ್ಡ… ಗೋಲ್ಡ… ಬಂಗಾರವಾಗಲಿದ್ದಾರೆ!.
ಸೋಲು ಖಚಿತವಾದಾಗ ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ: ಬಿ.ಕೆ.ಹರಿಪ್ರಸಾದ್
ಅನ್ನ ಬೇಯಿಸಲು ಇಟ್ಟಪಾತ್ರೆಯಲ್ಲಿ ಬೆಂಕಿಯ ಕಾವಿಗೆ ಒಂದೊಂದೇ ಅಕ್ಕಿ ಮೇಲೆ ಬಂದು ಮತ್ತೆ ಕೆಳಕ್ಕೆ ಹೋಗುವಂತೆ ಕ್ಷೇತ್ರದಲ್ಲಿ ಎಲ್ಲರ ಹೆಸರೂ ಮುಂಚೂಣಿಗೆ ಬರುತ್ತದೆ. ಟಿಕೆಟ್ ಮಾತ್ರ ಯಾರಾರಯರಿಗೆ ಎಂದು ಕಾದು ನೋಡಬೇಕಿದೆ.
ಪತ್ರಕರ್ತನಾಗಿ, ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಬಿಜೆಪಿಯ ಶಿರಸಿ ಸಿದ್ದಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.
- ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ, ಬಿಜೆಪಿ ಟಿಕೆಟ್ ಆಕಾಂಕ್ಷಿ