‘ಚುನಾವಣಾ ರಣತಂತ್ರಗಾರ’ ಪ್ರಶಾಂತ್ ಕಿಶೋರ್ ಬಿಹಾರ ಚುನಾವಣೆಯಲ್ಲಿ ನಾಪತ್ತೆ!

By Kannadaprabha NewsFirst Published Nov 6, 2020, 3:33 PM IST
Highlights

ನಿತೀಶ್‌ ಜೊತೆ ಜಗಳ ಆಡಿದ ಪ್ರಶಾಂತ್‌ ಕಿಶೋರ್‌ ‘ಈಗ ಬಿಹಾರದ ಕಡೆ ತಲೆ ಹಾಕೋದಿಲ್ಲ. 2025ಕ್ಕೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಪತ್ರಕರ್ತರ ಎದುರು ಹೇಳಿಕೊಳ್ಳುತ್ತಾರೆ. 

ನವದೆಹಲಿ (ನ. 06): ತಮಿಳುನಾಡು, ಪಶ್ಚಿಮ ಬಂಗಾಳದ ಮುಂದಿನ ವರ್ಷದ ಚುನಾವಣೆಗೆ ತಲೆ ಕೆಡಿಸಿಕೊಂಡಿರುವ ‘ಚುನಾವಣಾ ರಣತಂತ್ರಗಾರ’ ಪ್ರಶಾಂತ್‌ ಕಿಶೋರ್‌ ಬಿಹಾರದಲ್ಲಿ ಮಾತ್ರ ಕಾಣುತ್ತಿಲ್ಲ. ಮೊದಲು ಮೋದಿ, ನಂತರ ನಿತೀಶ್‌ ಜೊತೆ ಜಗಳ ಆಡಿದ ಪ್ರಶಾಂತ್‌ ಕಿಶೋರ್‌ ‘ಈಗ ಬಿಹಾರದ ಕಡೆ ತಲೆ ಹಾಕೋದಿಲ್ಲ.

2025 ಕ್ಕೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಪತ್ರಕರ್ತರ ಎದುರು ಹೇಳಿಕೊಳ್ಳುತ್ತಾರೆ. ನಿತೀಶ್‌ಗೆ ಒಂದಿಷ್ಟುವಿದೇಶದಲ್ಲಿ ಕೆಲಸ ಮಾಡುವ ಬಿಹಾರಿ ವೃತ್ತಿಪರರನ್ನು ಸಲಹೆಗಾರರಾಗಿ ತೆಗೆದುಕೊಳ್ಳಬೇಕು ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದರಂತೆ. ಆದರೆ ಅ​ಧಿಕಾರದ ಒತ್ತಡದಿಂದ ನಿತೀಶ್‌ ‘ಇದು ಸಾಧ್ಯವಿಲ್ಲ’ ಎಂದಾಗ ಇಬ್ಬರ ನಡುವೆ ಸಂಬಂಧ ಕೆಡಲು ಶುರುವಾಯಿತು. 2014ರಲ್ಲಿ ಪ್ರಶಾಂತ್‌ ಕಿಶೋರ್‌ ಮತ್ತು ಮೋದಿ ಸಂಬಂಧ ಮುರಿಯಲೂ ಇದೇ ಕಾರಣ ಆಗಿತ್ತು. ಒಂದು ಕಾಲದಲ್ಲಿ ಪ್ರಶಾಂತ್‌ ಕಿಶೋರ್‌ ಗುಜರಾತ್‌ನ ಗಾಂ​ಧಿನಗರದಲ್ಲಿ ಮೋದಿಯವರ ಮನೆಯಲ್ಲೇ ಇರುತ್ತಿದ್ದರು. ಆದರೆ ಮುಂದೆ ತಾನೇ ಒಂದು ಕೈ ನೋಡಬೇಕು ಎಂದು ಈಗ ಸುಮ್ಮನಿದ್ದಾರಂತೆ ಪಿ.ಕೆ.

ಬಿಹಾರ ವಿಧಾನಸಭಾ ಚುನಾವಣೆ ಕಡೆ ಅಮಿತ್ ಶಾ ತಲೆಹಾಕದಿರುವ ಗುಟ್ಟೇನು?

ಸುಶೀಲ್‌ ಮೋದಿ ಬೇಡ

ಬಿಹಾರದ ರಾಜಕಾರಣದಲ್ಲಿ ಸುಮೋ ಎಂದರೆ ಬಿಜೆಪಿಯ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ. ಸ್ವಲ್ಪ ನಮ್ಮ ಸುರೇಶ ಕುಮಾರ್‌ರನ್ನು ಹೋಲುತ್ತಾರೆ. ಪ್ರಾಮಾಣಿಕ, ದಕ್ಷ ಆಡಳಿತಗಾರ ಹೌದಾದರೂ ಬಿಜೆಪಿಯಲ್ಲಿ ಸುಮೋಗೆ ಜನಪ್ರಿಯತೆ ಇಲ್ಲ. ಬಿಜೆಪಿಯನ್ನು ನಿತೀಶ್‌ಗೆ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕರು ಬೈದೇ ಬಯ್ಯುತ್ತಾರೆ. ನಿತೀಶ್‌ರಂತೆ ಸುಶೀಲ್‌ ಮೋದಿಗೂ ಬಿಹಾರದಲ್ಲಿ ಜಾತಿ ಬಲ ಇಲ್ಲ. ಹೀಗಾಗಿ ಬಿಜೆಪಿಯ ಪರಂಪರಾಗತ ಜಾತಿಗಳ ನಾಯಕರಾದ ಚೌಬೆ, ದುಬೆ, ಸಿಂಗ್‌ಗಳು ಸುಮೋ ಅಂದರೆ ಸಾಕು ಮುಖ ಸಿಂಡರಿಸುತ್ತಾರೆ. ಆದರೆ ಬಿಜೆಪಿ ಬಳಿ ಸುಮೋರಷ್ಟುಪ್ರಬುದ್ಧತೆ ಇರುವ ನಾಯಕ ಬೇರೆ ಇಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!