
ಹುಬ್ಬಳ್ಳಿ (ಜು.25): ಮಹದಾಯಿ ವಿಷಯ ಕುರಿತು ಗೋವಾ ಸಿಎಂ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಭಾರತ ಸರ್ಕಾರದ ಹೇಳಿಕೆಯಲ್ಲ. ಅದು ಅವರ ವೈಯುಕ್ತಿಕ ಹೇಳಿಕೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಾ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವರು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬೆಂಬಲವಾಗಿದ್ದಾರೆ ಎಂದು ನನ್ನ ನಿವಾಸದಲ್ಲಿ ಭೇಟಿಯಾದ ಸಂದರ್ಭದಲ್ಲಿ ಹೇಳಿದ್ದಾರೆ ಎಂದರು. ಗೋವಾ ಸಿಎಂ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲ ಎಂದು ಹೇಳಿಕೆ ನೀಡಿರುವುದು ಅದು ಅವರ ವೈಯುಕ್ತಿಕ ಹೇಳಿಕೆಯೇ ಹೊರತು ಕೇಂದ್ರ ಸರ್ಕಾರದ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗದೆ ವಾದ- ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಅವರ ವೈಯುಕ್ತಿಕ ಹೇಳಿಕೆಗೆ ರಾಜಕೀಯ ಬಣ್ಣ ಹಚ್ಚಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಕಳಸಾ- ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಈ ವಿಚಾರದಲ್ಲಿ ನಾನು ಸಹ ಕೇಂದ್ರ ಜಲಶಕ್ತಿ ಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ಅವರು ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.
ಬೇಜವಾಬ್ದಾರಿತನದ ಹೇಳಿಕೆ: ಇತ್ತೀಚೆಗೆ ಹೃದಯಾಘಾತದಿಂದ ಜನರು ಸಾವನ್ನಪ್ಪುತ್ತಿರುವ ಪ್ರಕರಣಗಳು ನಿಜಕ್ಕೂ ಬೇಸರದ ಸಂಗತಿ. ಇದು ಕೋವಿಡ್ ಲಸಿಕೆಯಿಂದ ಆಗುತ್ತಿದೆ ಎನ್ನುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ. ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಹೋಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.ಕೋವಿಡ್ ಲಸಿಕೆಯಿಂದ ಇಡೀ ವಿಶ್ವವೇ ಭಾರತವನ್ನು ಕೊಂಡಾಡಿದೆ. ಆದರೆ, ಈ ರೀತಿ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡುವ ಅಪಮಾನ. ಯುದ್ಧದ ಸಮಯದಲ್ಲೂ ಪಾಕಿಸ್ತಾನ ನೀಡಿದಂತಹ ಹೇಳಿಕೆಯನ್ನು ಕಾಂಗ್ರೆಸ್ ನವರು ನೀಡಿದರು. ಚೀನಾ ವಿಚಾರವಾಗಿಯೂ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ ಎಂದರು.
ಈಗ ಕೋವಿಡ್ ಲಸಿಕೆ ಹಾಗೂ ಹೃದಯಾಘಾತದ ಬಗ್ಗೆ ವಿಶೇಷ ಕಮಿಟಿ ವರದಿ ನೀಡಿದೆ. ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂಬ ವರದಿ ನೀಡಿದೆ. ಸಿಎಂ ಸಿದ್ಧರಾಮಯ್ಯ ಅವರು ಈ ಬಗ್ಗೆ ಕ್ಷಮೆ ಕೇಳಬೇಕು. ಸಿದ್ಧರಾಮಯ್ಯ ಅವರೂ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ವಿದೇಶದ ವ್ಯಾಕ್ಸಿನ್ ತೆಗೆದುಕೊಂಡಿದ್ದಾರಾ? ಮೋದಿಯವರ ನೇತೃತ್ವ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರ ರಚನೆ ಮಾಡಿರುವ ಕಮಿಟಿಯೇ ಈಗಾಗಲೇ ವರದಿ ನೀಡಿದೆ. ರಾಜ್ಯ ಸರ್ಕಾರ ರಚನೆ ಮಾಡಿದ ಸಮಿತಿಯೇ ಅಧ್ಯಯನ ಮಾಡಿದೆ. ಯಾವುದೇ ಆಧಾರವಿಲ್ಲದೇ ಈ ರೀತಿ ಮಾತನಾಡುವುದು ಸಮಂಜಸವಲ್ಲ. ಈಗಾಗಲೇ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದರಿಂದ ವೈಜ್ಞಾನಿಕ ಸಮೀತಿಗೆ ಅವಮಾನ ಮಾಡಿದಂತಾಗಿದೆ. ಸಿಎಂ ಸಿದ್ಧರಾಮಯ್ಯ ವೈಜ್ಞಾನಿಕ ಕಮಿಟಿಯ ಕ್ಷಮೆ ಕೇಳಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.