ಧಾರವಾಡದಲ್ಲಿ ದಾಖಲೆಯ 5ನೇ ಗೆಲುವು ಸಾಧಿಸಿದ ಜೋಶಿ..!

By Kannadaprabha News  |  First Published Jun 5, 2024, 6:46 AM IST

ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಜೋಶಿ, ಕೊನೆಯ ಸುತ್ತಿನ ಮತಗಳ ಎಣಿಕೆ ಮುಗಿದಾಗ ಅಂಚೆ ಮತ ಸೇರಿ 97 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಜೋಶಿ ಅವರು ಗೆಲುವಿನ ದಡ ಮುಟ್ಟುತ್ತಿದ್ದಂತೆ ಅವರ ಬೆಂಬಲಿಗರು ಮತ ಕೇಂದ್ರದ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷ ಕೂಗಿ ಸಂಭ್ರಮಿಸಿದರು.
 


ಧಾರವಾಡ(ಜೂ.05): ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವರೂ ಆಗಿದ್ದ ಪ್ರಹ್ಲಾದ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಐದನೇ ಬಾರಿ ಗೆಲುವು ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ವಿನೋದ ಅಸೂಟಿ ವಿರುದ್ಧ 97324 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಜೋಶಿ, ಕೊನೆಯ ಸುತ್ತಿನ ಮತಗಳ ಎಣಿಕೆ ಮುಗಿದಾಗ ಅಂಚೆ ಮತ ಸೇರಿ 97 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಜೋಶಿ ಅವರು ಗೆಲುವಿನ ದಡ ಮುಟ್ಟುತ್ತಿದ್ದಂತೆ ಅವರ ಬೆಂಬಲಿಗರು ಮತ ಕೇಂದ್ರದ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷ ಕೂಗಿ ಸಂಭ್ರಮಿಸಿದರು.

Tap to resize

Latest Videos

undefined

ಜಗದೀಶ್‌ ಶೆಟ್ಟರ್‌ಗೆ ರಾಜಕೀಯ ಮರುಜನ್ಮ ನೀಡಿದ ಬೆಳಗಾವಿ..!

ಧಾರವಾಡ ಕ್ಷೇತ್ರದಲ್ಲಿ 18,31,975 ಒಟ್ಟು ಮತದಾರರಿದ್ದು ಕಳೆದ ಮೇ 7ರಂದು ನಡೆದಿದ್ದ ಚುನಾವಣೆಯಲ್ಲಿ 13,62,421 ಮತಗಳು ಚಲಾವಣೆಯಾಗಿ ಶೇ.74.37ರಷ್ಟು ಮತದಾನವಾಗಿತ್ತು. ಮತ ಎಣಿಕೆಯಲ್ಲಿ 4049 ಅಂಚೆ ಮತಗಳ ಪೈಕಿ ಪ್ರಹ್ಲಾದ ಜೋಶಿ ಅವರಿಗೆ 2582 ಮತ, ಪ್ರತಿಸ್ಪರ್ಧಿ ಅಸೂಟಿಗೆ 1291 ಮತ ಬಂದಿದ್ದವು. ಒಟ್ಟು 21 ಸುತ್ತುಗಳ ಮತಯಂತ್ರಗಳ ಎಣಿಕೆ ನಂತರ ಜೋಶಿ ಅವರಿಗೆ 7,13,649 ಮತ, ಅವರ ಸಮೀಪದ ಎದುರಾಳಿ ವಿನೋದ ಅಸೂಟಿ 6,17,616 ಮತ ಬಂದವು. ಒಟ್ಟಾರೆ ಪ್ರಹ್ಲಾದ ಜೋಶಿಗೆ 7,16,231 ಹಾಗೂ ಅಸೂಟಿಗೆ 6,18,907 ಮತ ಬಿದ್ದಿವೆ. ಧಾರವಾಡ ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 17 ಅಭ್ಯರ್ಥಿಗಳಲ್ಲಿ ಪ್ರಹ್ಲಾದ ಜೋಶಿ ಹಾಗೂ ವಿನೋದ ಅಸೂಟಿ ಹೊರತುಪಡಿಸಿ ಉಳಿದ 15 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

5ನೇ ಜಯ:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ 2004, 2009, 2014 ಮತ್ತು 2019ರಲ್ಲಿ ಜಯ ಗಳಿಸಿದ್ದು ಈ ಸಲದ ಜಯ ಐದನೆಯದ್ದು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಐದು ಸಲ ಸತತವಾಗಿ ಆಯ್ಕೆಯಾಗಿರುವ ಮೊದಲ ಅಭ್ಯರ್ಥಿ ಎಂಬ ಖ್ಯಾತಿಗೂ ಇದೀಗ ಜೋಶಿ ಪಾತ್ರರಾಗಿದ್ದಾರೆ. ಆದರೆ, ಜೋಶಿ ವಿರುದ್ಧ ಸ್ಪರ್ಧಿಸಿದ ವಿನೋದ ಅಸೂಟಿಗೆ ಇದು ಮೊದಲ ಲೋಕಸಭಾ ಚುನಾವಣೆ. ಲಿಂಗಾಯತೇತರ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸಿ ಅಹಿಂದ ಮತಗಳನ್ನು ಸೆಳೆಯುವ ಮೂಲಕ ಜೋಶಿ ಅವರನ್ನು ಪರಾಭವಗೊಳಿಸಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ಮಾಡಿತ್ತು. ಆದರೆ, ಅಸೂಟಿ ಕ್ಷೇತ್ರವನ್ನು ಗೆಲ್ಲುವಷ್ಟು ಮತ ಪಡೆಯಲಾಗದೇ ಕೇವಲ ಪ್ರಹ್ಲಾದ ಜೋಶಿ ಅವರ ವಿಜಯದ ಮತಗಳ ಅಂತರ ಕಡಿಮೆಗೊಳಿಸುವಲ್ಲಿ ಸಫಲರಾದರು. ಇನ್ನು, 2019ರ ಚುನಾ‍ವಣೆಯಲ್ಲಿ ಪ್ರಹ್ಲಾದ ಜೋಶಿ ತಮ್ಮ ಎದುರಾಳಿ, ಈಗಿನ ಧಾರವಾಡ ಶಾಸಕ ವಿನಯ ಕುಲಕರ್ಣಿ ವಿರುದ್ಧ 2,05,000 ಮತಗಳ ಅಂತರದಿಂದ ಗೆಲವು ಸಾಧಿಸಿದ್ದನ್ನು ಈಗ ಸ್ಮರಿಸಬಹುದು.

ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆ ಎಚ್‌ಡಿಕೆ ಧೂಳೀಪಟ..!

ಏತಕ್ಕೆ ಗೆಲವು, ಸೋಲು

ಪ್ರಹ್ಲಾದ ಜೋಶಿ ಈ ಚುನಾವಣೆಯಲ್ಲಿ ಕ್ಷೇತ್ರಕ್ಕಾಗಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮತ್ತು ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮಗಳ ಮೇಲೆ ಒತ್ತು ನೀಡಿ ಪ್ರಚಾರ ಕೈಗೊಂಡಿದ್ದರು. ವಿನೋದ ಅಸೂಟಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಆಧಾರದ ಮೇಲೆ ಪ್ರಚಾರ ನಡೆಸಿದ್ದರು.

ಧಾರವಾಡ ಕ್ಷೇತ್ರದ ಮತದಾರರು 1952ರಿಂದ ನಿರ್ದಿಷ್ಟ ಪಕ್ಷಕ್ಕೆ ಒಲವು ತೋರಿಸಿ ಮತ ನೀಡಿದ್ದು, ಅಭ್ಯರ್ಥಿ ಜಾತಿ ಪರಿಗಣಿಸಿಲ್ಲ. ಈ ಸಲವು ಇದೇ ಪರಂಪರೆ ಮುಂದುವರಿದಿದೆ. ಲಿಂಗಾಯತರಲ್ಲದ ಅಭ್ಯರ್ಥಿಗಳು ಬಹುಸಂಖ್ಯಾತ ಲಿಂಗಾಯತ ಮತದಾರರ ಬೆಂಬಲದಿಂದ ಎದುರಾಳಿ ಪಕ್ಷದ ಲಿಂಗಾಯತ ಅಭ್ಯರ್ಥಿಗಳನ್ನು ಸೋಲಿಸಿದ ಪ್ರತೀತಿ ಈ ಕ್ಷೇತ್ರದಲ್ಲಿದೆ. ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವ ಪಣ ತೊಟ್ಟು ಲಿಂಗಾಯತ ಧುರೀಣರಿಗೆ ಜೋಶಿ ಅವರಿಂದ ಅನ್ಯಾಯವಾಗಿದೆ. ಆದ್ದರಿಂದ ಅವರನ್ನು ಸೋಲಿಸಬೇಕೆಂದು ಕರೆ ನೀಡಿ ತಾವು ಸಲ್ಲಿಸಿದ ನಾಮಪತ್ರವನ್ನು ಹಿಂದೆ ಪಡೆದು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ದಿಂಗಾಲೇಶ್ವರರ ಲಿಂಗಾಯತ ಕಾರ್ಡ್‌ ತಂತ್ರ ಕೆಲಸ ಮಾಡಲಿಲ್ಲ. ಮತ್ತೆ ಈ ಕ್ಷೇತ್ರದ ಲಿಂಗಾಯತರು ಸಾಂಪ್ರದಾಯಿಕವಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬುದು ಪ್ರಹ್ಲಾದ ಜೋಶಿ ಅವರ ಗೆಲುವಿನಿಂದ ಸ್ಪಷ್ಟವಾಗಿದೆ.

click me!