ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ನನ್ನ ಮಗ ಹಾಗೂ ಶಾಸಕ ಜಿ.ಡಿ. ಹರೀಶ್ ಗೌಡನ ಬೆಳವಣಿಗೆಯನ್ನು ತಡೆಯುವ ಸಲುವಾಗಿ ಸಹಕಾರ ಬ್ಯಾಂಕ್ ಚುನಾವಣೆಯನ್ನು ಮುಂದೂಡುವ ತಂತ್ರ ಮಾಡಿದರು. ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರು ಹೆಚ್ಚಾಗಿದ್ದಾರೆ. ಸೋಲಿನ ಭೀತಿಯಿಂದ ಸಿಎಂ ಸಿದ್ದರಾಮಯ್ಯ ಚುನಾವಣೆ ಮುಂದೂಡುವಂತೆ ಮಾಡಿದ್ದಾಗಿ ದೂರಿದ ಶಾಸಕ ಜಿ.ಟಿ. ದೇವೇಗೌಡ
ಮೈಸೂರು(ಜ.04): ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರದಿಂದ ಮುಂದೂಡಲ್ಪಟ್ಟಿತು ಎಂದು ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು. ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ನನ್ನ ಮಗ ಹಾಗೂ ಶಾಸಕ ಜಿ.ಡಿ. ಹರೀಶ್ ಗೌಡನ ಬೆಳವಣಿಗೆಯನ್ನು ತಡೆಯುವ ಸಲುವಾಗಿ ಸಹಕಾರ ಬ್ಯಾಂಕ್ ಚುನಾವಣೆಯನ್ನು ಮುಂದೂಡುವ ತಂತ್ರ ಮಾಡಿದರು. ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರು ಹೆಚ್ಚಾಗಿದ್ದಾರೆ. ಸೋಲಿನ ಭೀತಿಯಿಂದ ಸಿಎಂ ಸಿದ್ದರಾಮಯ್ಯ ಚುನಾವಣೆ ಮುಂದೂಡುವಂತೆ ಮಾಡಿದ್ದಾಗಿ ದೂರಿದರು.
ಯಾವಾಗ ಚುನಾವಣೆ ನಡೆದರೂ ನಮ್ಮ ಬೆಂಬಲಿಗರು ಜಯ ಸಾಧಿಸುತ್ತಾರೆ. ಇತ್ತೀಚೆಗೆ ನಡೆದ ಬನ್ನೂರು, ಹೊಸಕೋಟೆ, ಗೋಪಾಲಪುರ ಡೇರಿಗಳ ಚುನಾವಣೆಗಳಲ್ಲಿ ನಮ್ಮ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ನಾನು ಎಲ್ಲಿಗೂ ಹೋಗಿ ಪ್ರಚಾರ ಮಾಡಿಲ್ಲ. ಆದರೂ ನಮ್ಮ ಬೆಂಬಲಿಗರು ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ ಎಂದರು.
ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ: ಸಚಿವ ತಂಗಡಗಿ
ಕಾಂಗ್ರೆಸ್ ನವರು ಸೋಲಿನ ಭೀತಿ ಕಾರಣದಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಮುಂದೂಡಿದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗಲೂ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಡ್ಬೋಕೇಟ್ ಜನರಲ್ ಸರ್ಕಾರದ ಪರ ವಕೀಲರು ತಪ್ಪದೇ ಹಾಜರಾಗುತ್ತಿದ್ದರು. ಅಷ್ಟರಮಟ್ಟಿಗೆ ಸಿದ್ದರಾಮಯ್ಯ ಚುನಾವಣೆ ಮುಂದೂಡಿಕೆಗೆ ಪ್ರಯತ್ನಿಸಿದ್ದಾಗಿ ಅವರು ದೂರಿದರು. ಆದರೆ ಈಗ ನ್ಯಾಯಾಲಯವೇ ಚುನಾವಣೆ ನಡೆಸುವಂತೆ ಸೂಚಿಸಿದೆ. ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಜಯ ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.