ಪಂಚ ಗ್ಯಾರಂಟಿಗಳಿಂದ ಬಡ ಜನರಿಗೆ ಹೆಚ್ಚಿನ ಪ್ರಯೋಜನವಾಗಿರುವ ಜೊತೆಗೆ ಹಣಕಾಸಿನ ಚಲಾವಣೆಯಿಂದಾಗಿ ರಾಜ್ಯ ಸರ್ಕಾರವು ಅತಿ ಹೆಚ್ಚು ಜಿಎಸ್‌ಟಿ ನೀಡುವ ಎರಡನೇ ರಾಜ್ಯವಾಗಿ ಪರಗಣಿಸಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಮೂಲ್ಕಿ (ಮಾ.09): ಪಂಚ ಗ್ಯಾರಂಟಿಗಳಿಂದ ಬಡ ಜನರಿಗೆ ಹೆಚ್ಚಿನ ಪ್ರಯೋಜನವಾಗಿರುವ ಜೊತೆಗೆ ಹಣಕಾಸಿನ ಚಲಾವಣೆಯಿಂದಾಗಿ ರಾಜ್ಯ ಸರ್ಕಾರವು ಅತಿ ಹೆಚ್ಚು ಜಿಎಸ್‌ಟಿ ನೀಡುವ ಎರಡನೇ ರಾಜ್ಯವಾಗಿ ಪರಗಣಿಸಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಮೂಲ್ಕಿ ಗಾಂಧಿ ಮೈದಾನದಲ್ಲಿ ಮೂಲ್ಕಿ ತಾಲೂಕು ವತಿಯಿಂದ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು. ಗ್ಯಾರಂಟಿ ಸಮಾವೇಶವು ಬಡ ಜನರ ಸಂತೋಷವನ್ನು ಆಚರಿಸುವ ಕಾರ್ಯಕ್ರಮವಾಗಿದ್ದು ಆಡಳಿತ ಪಕ್ಷವು ಉತ್ತಮ ಆಡಳಿತವನ್ನು ನೀಡುವ ಕಾರ್ಯ ಮಾಡಬೇಕು.
ವಿಪಕ್ಷವು ಆಡಳಿತ ಪಕ್ಷದ ನ್ಯೂನತೆಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಬಡ ವರ್ಗಕ್ಕೆ ಸಹಕಾರ ನೀಡುವ ಜೊತೆಗೆ ರೈತರಿಗೆ ಬೆಂಬಲ ಬೆಲೆ ನೀಡಿದ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಅಧಿಕಾರಕ್ಕೆ ಬಂದು ನೂರು ದಿನಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ನೀಡಿ ಬಳಿಕ ಐದು ಗ್ಯಾರಂಟಿಯನ್ನು ನೀಡುವ ಮೂಲಕ ಮಾತು ಉಳಿಸಿಕೊಂಡ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಬಜೆಟ್‌ನಲ್ಲಿ ೫೨ ಸಾವಿರ ಕೋಟಿ ರು. ನಿಧಿಯನ್ನು ಕ್ರೋಡೀಕರಿಸಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಉತ್ತಮ ಯೋಜನೆಗೆ ಕೊಕ್ಕೆ ಹಾಕಬೇಡಿ ಎಂದು ವಿಪಕ್ಷವನ್ನು ಕುಟುಕಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 137 ಕೆಪಿಎಸ್ ಶಾಲೆ: ಸಚಿವ ಮಧು ಬಂಗಾರಪ್ಪ
ಈ ಸಂದರ್ಭ ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ನಾಡು ಸಿಎಸ್‌ಐ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ದನ್, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್, ಮೂಲ್ಕಿ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಆರ್‌ಟಿಒ ಶ್ರೀಧರ್, ಸಿಡಿಪಿಒ ಶೈಲಾ, ಮಿಥುನ್ ರೈ ಮತ್ತಿತರರಿದ್ದರು. ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.