ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಪಕ್ಷದ ಕೇಂದ್ರ ಸಮಿತಿಯಿಂದ ವೀಕ್ಷಕರು ರಾಜ್ಯದ ಹಿರಿಯ ಮುಖಂಡರು ಮತ್ತು ಶಾಸಕರಿಂದ (ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು) ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾಗಿದ್ದಾರೆ.
ಬೆಂಗಳೂರು (ಜು.05): ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಾಸಕಾಂಗ ಪಕ್ಷದ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಪಕ್ಷದ ಕೇಂದ್ರ ಸಮಿತಿಯಿಂದ ವೀಕ್ಷಕರು ರಾಜ್ಯದ ಹಿರಿಯ ಮುಖಂಡರು ಮತ್ತು ಶಾಸಕರಿಂದ (ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು) ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ವೀಕ್ಷಕರಾದ ವಿನೋದ್ ತಾವಡೆ ಮತ್ತು ಮನ್ಸುಖ್ ಮಾಂಡವಿಯ ಅವರು ರಾತ್ರಿವರೆಗೆ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿದ ಬಳಿಕ ದೆಹಲಿಗೆ ತೆರಳಿದರು.
ತೆರಳುವ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ತೆರಳಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಿದರು. ಬುಧವಾರ ಬೆಳಗ್ಗೆ ಪಕ್ಷದ ವರಿಷ್ಠರೊಂದಿಗೆ ತಾವು ಸಂಗ್ರಹಿಸಿರುವ ಮಾಹಿತಿ ಕುರಿತು ಚರ್ಚೆ ನಡೆಸಲಿದ್ದಾರೆ. ಬುಧವಾರ ಸಂಜೆ ಹೊತ್ತಿಗೆ ಅಥವಾ ಗುರುವಾರ ಶಾಸಕಾಂಗ ಪಕ್ಷದ ನಾಯಕನನ್ನು ಅಂತಿಮಗೊಳಿಸಿ ರಾಜ್ಯ ಘಟಕಕ್ಕೆ ಮಾಹಿತಿ ರವಾನಿಸುವ ಸಾಧ್ಯತೆಯಿದೆ. ಜತೆಗೆ ನೂತನ ರಾಜ್ಯಾಧ್ಯಕ್ಷರ ಆಯ್ಕೆಯನ್ನೂ ಘೋಷಿಸುವ ನಿರೀಕ್ಷೆಯಿದೆ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವುಳ್ಳ ಹಾಗೂ ಕಾಂಗ್ರೆಸ್ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದವರನ್ನು ಈ ಎರಡೂ ಹುದ್ದೆಗಳಿಗೆ ಆಯ್ಕೆ ಮಾಡಬೇಕು.
ಜಿಎಸ್‌ಟಿ ರೀತಿ ರಾಜ್ಯದಲ್ಲೀಗ ಯತೀಂದ್ರ ಟ್ಯಾಕ್ಸ್: ಎಚ್‌ಡಿಕೆ ಗಂಭೀರ ಆರೋಪ
ಜತೆಗೆ ಹಿಂದುತ್ವದ ಪ್ರತಿಪಾದಕರೂ ಆಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವೀಕ್ಷಕರು ಪಕ್ಷದ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯರು, ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದ ಶಾಸಕರು, ಆಯ್ದ ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಇದರಲ್ಲೂ ಬಣ ರಾಜಕೀಯದ ನೆರಳು ಕಾಣಿಸಿಕೊಂಡಿದೆ. ಆಯಾ ಬಣದವರು ನಿರ್ದಿಷ್ಟಹೆಸರುಗಳನ್ನು ಈ ಹುದ್ದೆಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಎಲ್ಲ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ವೀಕ್ಷಕರು ವರಿಷ್ಠರಿಗೆ ವರದಿ ನೀಡಲಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಸುಮ್ಮನೆ ಮಾತನಾಡಿಲ್ಲ, ನನ್ನ ಬಳಿ ದಾಖಲೆಗಳಿವೆ: ಎಚ್‌ಡಿಕೆ
ಆ ವರದಿ ಆಧಾರದ ಮೇಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯದ ಸಂಘ ಪರಿವಾರದ ಮುಖಂಡರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಹೆಸರುಗಳನ್ನು ಅಂತಿಮಗೊಳಿಸುವ ಸಂಭವವಿದೆ. ವಿಧಾನಮಂಡಲದ ಅಧಿವೇಶನ ಆರಂಭವಾಗಿ ಎರಡು ದಿನ ಕಳೆದಿದೆ. ಮೂರನೆ ದಿನವಾದ ಬುಧವಾರವಾದರೂ ಪ್ರತಿಪಕ್ಷಗಳ ನಾಯಕರ ಸ್ಥಾನ ಭರ್ತಿಯಾಗಲಿದೆ ಎಂಬ ನಿರೀಕ್ಷೆ ಪಕ್ಷದ ಶಾಸಕರಲ್ಲಿದೆ.