ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌: ಬಿಜೆಪಿಗೇ 82%!

Kannadaprabha News   | Kannada Prabha
Published : Dec 22, 2025, 05:31 AM IST
BJP

ಸಾರಾಂಶ

ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ನಂತರದ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಒಂಬತ್ತು ಪ್ರಮುಖ ಚುನಾವಣಾ ಟ್ರಸ್ಟ್‌ಗಳಿಂದ 3,811 ಕೋಟಿ ರು.ನಷ್ಟು ದೇಣಿಗೆ ಹರಿದು ಬಂದಿದೆ.

ನವದೆಹಲಿ: ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ನಂತರದ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಒಂಬತ್ತು ಪ್ರಮುಖ ಚುನಾವಣಾ ಟ್ರಸ್ಟ್‌ಗಳಿಂದ 3,811 ಕೋಟಿ ರು.ನಷ್ಟು ದೇಣಿಗೆ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3 ಪಟ್ಟು ಹೆಚ್ಚು. ಜೊತೆಗೆ ಒಟ್ಟು ದೇಣಿಗೆಯಲ್ಲಿ ಶೇ.82ರಷ್ಟು ಪಾಲು ಆಡಳಿತಾರೂಢ ಬಿಜೆಪಿ ಪಾಲಾಗಿದೆ ಎಂದು ಅಂಕಿ- ಅಂಶಗಳು ಹೇಳಿವೆ.

2024-25ರಲ್ಲಿ ಬಿಜೆಪಿಗೆ 3112 ಕೋಟಿ ರು

2024-25ರಲ್ಲಿ ಬಿಜೆಪಿಗೆ 3112 ಕೋಟಿ ರು. (ಶೇ.82), ಕಾಂಗ್ರೆಸ್‌ಗೆ 299 ಕೋಟಿ ರು.(ಶೇ.8), ಮತ್ತು ಇತರೆ ಪಕ್ಷಗಳಿಗೆ ಒಟ್ಟಾರೆ 400 ಕೋಟಿ ರು.(ಶೇ.10) ದೇಣಿಗೆ ನೀಡಲಾಗಿದೆ. ಇದು ಪ್ರಮುಖ ಚುನಾವಣಾ ಟ್ರಸ್ಟ್‌ಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯನ್ನಾಧರಿಸಿದ ಅಂಕಿ-ಅಂಶಗಳಾಗಿದ್ದು, ಇತರೆ ಸಣ್ಣಪುಟ್ಟ ಟ್ರಸ್ಟ್‌ಗಳು ಹಾಗೂ ನೋಂದಣಿಯಾಗದ ಮೂಲಗಳಿಂದಲೂ ರಾಜಕೀಯ ಪಕ್ಷಗಳಿಗೆ ಭಾರೀ ಪ್ರಮಾಣದ ದೇಣಿಗೆ ಹರಿದು ಬಂದಿದೆ.

9 ಟ್ರಸ್ಟ್‌ಗಳು ತಮ್ಮ ದೇಣಿಗೆಯ ವಿವರವನ್ನು ಆಯೋಗಕ್ಕೆ ಸಲ್ಲಿಸಿದೆ

ಒಟ್ಟು13 ಚುನಾವಣಾ ಟ್ರಸ್ಟ್‌ಗಳಲ್ಲಿ 9 ಟ್ರಸ್ಟ್‌ಗಳು ತಮ್ಮ ದೇಣಿಗೆಯ ವಿವರವನ್ನು ಆಯೋಗಕ್ಕೆ ಸಲ್ಲಿಸಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಈ ಅವು ನೀಡಿದ ದೇಣಿಗೆ 3 ಪಟ್ಟು ಹೆಚ್ಚಾಗಿದೆ. ಕಳೆದ ಬಾರಿ ಈ ಟ್ರಸ್ಟ್‌ಗಳು 1,218 ಕೋಟಿ ರು. ನೀಡಿದ್ದವು.

2668 ಕೋಟಿ ರು. ದೇಣಿಗೆಯೊಂದಿಗೆ ಪ್ರುಡೆಂಟ್‌ ಎಲೆಕ್ಟೋರಲ್ ಟ್ರಸ್ಟ್‌ ಮೊದಲ ಸ್ಥಾನದಲ್ಲಿದೆ. ಇದರ ಬಹುಪಾಲು ದೇಣಿಗೆ ಬಿಜೆಪಿಗೆ ಹೋಗಿದೆ. ಜೊತೆಗೆ, ಕಾಂಗ್ರೆಸ್‌, ಟಿಎಂಸಿ, ಆಪ್‌, ಟಿಡಿಪಿ ಮತ್ತು ಇತರೆ ರಾಜಕೀಯ ಪಕ್ಷಗಳಿಗೂ ಹಣ ನೀಡಿದೆ. ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌, ಮೆಘಾ ಎಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟ್ರಕ್ಟರ್‌ ಲಿ., ಭಾರ್ತಿ ಏರ್‌ಟೆಲ್‌, ಅರವಿಂದೋ ಫಾರ್ಮಾ ಮತ್ತು ಟೊರೆಂಟ್‌ ಫಾರ್ಮಾಸ್ಯುಟಿಕಲ್ಸ್‌ ಈ ಟ್ರಸ್ಟ್‌ನ ಪ್ರಮುಖ ದೇಣಿಗೆದಾರರು.

ಪ್ರೋಗ್ರೆಸಿವ್‌ ಎಲೆಕ್ಟೋರಲ್‌ ಟ್ರಸ್ಟ್‌ 914.97 ಕೋಟಿ ರು. ದೇಣಿಗೆಯಾಗಿ ನೀಡಿದ್ದು, ಇದರ ಶೇ.80.82ರಷ್ಟು ಭಾಗ ಬಿಜೆಪಿಗೆ ಹೋಗಿದೆ. ಟಾಟಾ ಸ್ಟೀಲ್‌, ಟಾಟಾ ಸನ್ಸ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌, ಟಾಟಾ ಪವರ್‌ ಮತ್ತು ಇತರೆ ಕಂಪನಿಗಳು ಈ ಟ್ರಸ್ಟ್‌ನ ದೇಣಿಗೆದಾರರಾಗಿದ್ದಾರೆ.

ಇನ್ನು ನ್ಯೂ ಡೆಮಾಕ್ರಟಿಕ್‌ ಎಲೆಕ್ಟೋರಲ್‌ ಟ್ರಸ್ಟ್‌ 160 ಕೋಟಿ ರು. ದೇಣಿಗೆ ನೀಡಿದ್ದು, ಇದರಲ್ಲಿ 150 ಕೋಟಿ ರು. ಬಿಜೆಪಿಗೆ ಹೋಗಿದೆ. ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಗ್ರೂಪ್‌ ಕಂಪನಿಗಳು ಈ ಟ್ರಸ್ಟ್‌ನ ಪ್ರಮುಖ ದೇಣಿಗೆದಾರರು.

ಅದೇ ರೀತಿ ಹಾರ್ಮೋನಿ ಎಲೆಕ್ಟೋರಲ್‌ ಟ್ರಸ್ಟ್‌ ಬಿಜೆಪಿಗೆ 30.15 ಕೋಟಿ ದೇಣಿಗೆ ನೀಡಿದ್ದು, ಭಾರತ್‌ ಫೋರ್ಜ್‌ ಇದರ ಪ್ರಮುಖ ದೇಣಿಗೆದಾರರಾಗಿದ್ದಾರೆ.

ಇನ್ನು ಟ್ರಯಂಪ್‌ ಎಲೆಕ್ಟೋರಲ್ ಟ್ರಸ್ಟ್‌ 25 ಕೋಟಿ ರು. ದೇಣಿಗೆ ನೀಡಿದ್ದು, ಇದರಲ್ಲಿ ಬಿಜೆಪಿಗೆ 21 ಕೋಟಿ, ಜನಪ್ರಗತಿ ಎಲೆಕ್ಟೋರಲ್‌ ಟ್ರಸ್ಟ್‌ ಶಿವಸೇನೆ ಉದ್ಧವ್‌ ಠಾಕ್ರೆ ಬಣಕ್ಕೆ 1 ಕೋಟಿ ದೇಣಿಗೆ ನೀಡಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ಗಳನ್ನು ಅಸಾಂವಿಧಾನಿಕ ಎಂದು ಹೇಳಿ ರದ್ದು ಮಾಡಿತ್ತು.

ಬಿಜೆಪಿ ₹3112 ಕೋಟಿ 82%

ಕಾಂಗ್ರೆಸ್‌ ₹299 ಕೋಟಿ 8%

ಇತರೆ ₹400 ಕೋಟಿ 10%

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ
ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ