ಕೋಟ್ಯಾಂತರ ಬೆಲೆ ಬಾಳುವ ಕಾರಿನಲ್ಲಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಚಾರ ಬಳ್ಳಾರಿ ಗಣಿನಾಡಿನಲ್ಲಿ ಕಂಡು ಬರುತ್ತಿದ್ದ ಗತ ವೈಭವದ ರಾಜಕೀಯ ಮೇಲಾಟ ಲಿಂಗಸುಗೂರು ಕ್ಷೇತ್ರದಲ್ಲಿ ಮಾರ್ಧನಿಸುತ್ತಿದೆ.
ಲಿಂಗಸುಗೂರು(ಸೆ.29): ರಾಜಕೀಯ ನಾಯಕರ ಉತ್ಪಾದನೆ ಪ್ರಸಿದ್ಧಿ ಪಡೆದ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಲಾಬಲ ಪ್ರದರ್ಶನದಿಂದ ಎಲ್ಲೆಡೆ ಹಣದ ಹೊಗೆಯಾಡುತ್ತಿದೆ. ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ನೂರಾರು ಕೋಟಿಯ ಆಗರ್ಭ ಶ್ರೀಮಂತರು ಲಗ್ಗೆ ಇಟ್ಟರು. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಹಣ ಹರಿದಾಡುತ್ತಿತ್ತು. ಪ್ರಸಕ್ತ ಚುನಾವಣೆಗೂ ಹಲವು ತಿಂಗಳು ಬಾಕಿ ಇರುವಾಗಲೇ ಪಕ್ಷದಿಂದ ಟಿಕೆಟ್ ಹಂಚಿಕೆ ಅನಿಶ್ಚಿತತೆ ಇದ್ದರೂ ಜನರ ಸೆಳೆಯಲು ಬಲಾಬಲ ಪ್ರದರ್ಶನಕ್ಕೆ ಸೇವಾಕಾಂಕ್ಷಿಗಳ ಮುಂದಾಗಿದ್ದು ಹಣದ ಹೊಳೆಯೇ ಹರಿಯುತ್ತಿದೆ.
ಈಗಾಗಲೇ ಬಿಜೆಪಿಯ ಮಾಜಿ ಶಾಸಕ, ಹಟ್ಟಿಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್, ಶಾಸಕ ಡಿ.ಎಸ್ ಹೂಲಗೇರಿ, ಸಿದ್ದು ವೈ. ಬಂಡಿ, ಇತ್ತೀಚೆಗೆ ಕ್ಷೇತ್ರಕ್ಕೆ ಕಾಲಿಟ್ಟು ಕೆಲವೇ ದಿನಗಳಲ್ಲಿ ಜನರ ಚಿತ್ತ ಸೆಳೆಯುತ್ತಿರುವುದು ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸುವ, ಮೇಲ್ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಜೊತೆಗೆ ನೀರಾವರಿ ತಜ್ಞರೆಂದು ಹೇಳಲಾಗುತ್ತಿರುವ ಆರ್.ರುದ್ರಯ್ಯ ಸೇರಿದಂತೆ ಇವರು ನೂರಾರು ಕೋಟಿಯ ಕೋಟ್ಯಾಂತರ ಒಡೆಯರಾಗಿದ್ದು, ರಾಜಕೀಯದಲ್ಲಿ ಬಲಾಬಲ ಪ್ರದರ್ಶನಕ್ಕೆ ಹಣವೇ ಮೂಲವಾಗಿದೆ.
ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್ ಹೋರಾಟ: ಈಶ್ವರ ಖಂಡ್ರೆ
ಇನ್ನೂ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮುಖಂಡರಾದ ಎಚ್.ಬಿ ಮುರಾರಿ, ಪಾಮಯ್ಯ ಮುರಾರಿ ಮುಂತಾವದರು ಇದ್ದರೆ ಇತರ ಅಭ್ಯರ್ಥಿಗಳು ಯಾರೆಂದು ಘೋಷಣೆ ಮಾಡದೆ ದೆಹಲಿ ಮಾದರಿ ಆಡಳಿತ ಮಾಡುತ್ತೇವೆ, ಸಾಮಾನ್ಯರ ಅಭಿವೃದ್ಧಿಗೆ ಆಮ್ ಆದ್ಮಿ ಪಾರ್ಟಿ ಬೆಂಬಲಿಸಬೇಕೆಂದು ಆಪ್ ಕ್ಷೇತ್ರದಲ್ಲಿ ಜನರ ಸೆಳೆಯಲು ವರ್ಕೌಟ್ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಶಾಸಕ ಡಿ.ಎಸ್ ಹೂಲಗೇರಿ, ಆರ್.ರುದ್ರಯ್ಯ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಮೂರಾರಿ ಸಹೋದರರು ಸೇರಿ ಹಲವರು ಆಕಾಂಕ್ಷಿಗಳು ಇದ್ದಾರೆ.
ಬಿಜೆಪಿಯಲ್ಲಿ ಮಾನಪ್ಪ ವಜ್ಜಲ್, ಜೆಡಿಎಸ್‌ನಿಂದ ಸಿದ್ದು ಬಂಡಿ ವಿಧಾನಸಭಾ ಚುನಾವಣೆ ತಯಾರಿ ನಡೆಸಿದ್ದು ಸಂಘಟನೆ ಬಲಪಡಿಸಿಕೊಳ್ಳಲು ಅದ್ಧೂರಿ ಸಮಾರಂಭಗಳ ಏರ್ಪಡಿಸುವುದು ಸಾಮಾನ್ಯವಾಗಿದ್ದು ಕ್ಷೇತ್ರದಲ್ಲಿ ಸಮಸ್ಯೆಗಳು ಮೌನವಾಗಿವೆ.
ಚುನಾವಣೆ ಪೂರ್ವದಲ್ಲೇ ಜಿದ್ದಾಜಿದ್ದಿ
ಭೌಗೋಳಿಕವಾಗಿ ಕ್ಷೇತ್ರದಲ್ಲಿ ನೀರಾವರಿ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದರ ಜೊತೆಗೆ ಹಟ್ಟಿಚಿನ್ನದ ಗಣಿ ಕಂಪನಿ ಕಾರ್ಖಾನೆ ಇದ್ದು ಚುನಾವಣೆ ಪೂರ್ವದಲ್ಲಿಯೇ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು ವರ್ಚಸ್ಸು ವೃದ್ಧಿಗೆ ಹಬ್ಬ-ಹರಿದಿನಗಳು ಮುಂಚೂಣಿ ನಾಯಕರ ಹುಟ್ಟುಹಬ್ಬಗಳು ಅದ್ಧೂರಿ ಆಚರಣೆಗೊಳ್ಳುತ್ತಿವೆ. ಯಾವುದೇ ಸಭೆ, ಸಮಾರಂಭದಲ್ಲಿ ಅದ್ಧೂರಿತನ ಮೆರೆಯುವ ಮೂಲಕ ಶ್ರೀಮಂತಿಕೆಯ ಅನಾವರಣ ಮಾಡುತ್ತಿದ್ದಾರೆ. ಕೋಟ್ಯಾಂತರ ಬೆಲೆ ಬಾಳುವ ಕಾರಿನಲ್ಲಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಚಾರ ಬಳ್ಳಾರಿ ಗಣಿನಾಡಿನಲ್ಲಿ ಕಂಡು ಬರುತ್ತಿದ್ದ ಗತ ವೈಭವದ ರಾಜಕೀಯ ಮೇಲಾಟ ಮೀಸಲು ಕ್ಷೇತ್ರದಲ್ಲಿ ಮಾರ್ಧನಿಸುತ್ತಿದೆ.