ಲೋಕಸಭಾ ಚುನಾವಣೆ 2024: ಸಂವಿಧಾನ ವಿರೋಧಿಗಳಿಗೆ ಈ ಬಾರಿ ಪಾಠ, ಮೋದಿ

By Kannadaprabha NewsFirst Published Apr 17, 2024, 6:57 AM IST
Highlights

ನಮ್ಮ ಸರ್ಕಾರ ಅಕ್ರಮ ವಲಸೆಗೆ ಕಡಿವಾಣ ಹಾಕಲಿದೆ. ಮತ ಬ್ಯಾಂಕ್‌ ರಾಜಕೀಯಕ್ಕೆಂದೇ ಅಕ್ರಮ ವಲಸೆಗೆ ವಿಪಕ್ಷಗಳು ಮಣೆ ಹಾಕುತ್ತಿದ್ದವು ಎಂದು ಹೇಳಿದರು. ಅಲ್ಲದೆ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜಾರಿಯನ್ನು ಯಾರಿಂದಲೂ ತಡೆಯಲಾಗದು: ಪ್ರಧಾನಿ ನರೇಂದ್ರ ಮೋದಿ 

ಗಯಾ(ಬಿಹಾರ)(ಏ.17):  ವಿರೋಧ ಪಕ್ಷವಾದ ಇಂಡಿಯಾ ಒಕ್ಕೂಟದ ಮೇಲೆ ಬಿರುಸಿನ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಚುನಾವಣೆಯು ಭಾರತದ ಸಂವಿಧಾನದ ವಿರೋಧಿಗಳನ್ನು ಮತ್ತು ‘ವಿಕಸಿತ ಭಾರತ’ದ ಯತ್ನಗಳಿಗೆ ಅಡ್ಡಿ ಪಡಿಸುತ್ತಿರುವವರನ್ನು ಶಿಕ್ಷಿಸಲಿದೆ ಎಂದಿದ್ದಾರೆ.

ಬಿಹಾರದ ಗಯಾ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಈ ಚುನಾವಣೆಯು ''ಘಮಂಡಿಯಾ'' (ಅಹಂಕಾರಿ) ಮೈತ್ರಿ ನಾಯಕರನ್ನು ಶಿಕ್ಷಿಸಲು ಮಾತ್ರ. ಇದು ಸಂವಿಧಾನದ ವಿರುದ್ಧ ಮತ್ತು ಭಾರತವನ್ನು ವಿಕಸಿತ ದೇಶ ಮಾಡಲು ಕೇಂದ್ರದ ಉಪಕ್ರಮಗಳನ್ನು ವಿರೋಧಿಸುವವರನ್ನು ಶಿಕ್ಷಿಸಲೆಂದೇ ಇದೆ’ ಎಂದರು.

ನನ್ನ ಹೆಸರು ಅರವಿಂದ್‌, ನಾನು ಉಗ್ರನಲ್ಲ: ದೆಹಲಿ ಸಿಎಂ ಕೇಜ್ರಿವಾಲ್‌

‘ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂವಿಧಾನದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅದರ ಪಾಲುದಾರರು ನನ್ನನ್ನು ನಿಂದಿಸಲು ಸಂವಿಧಾನದ ಹೆಸರಿನಲ್ಲಿ ಸುಳ್ಳನ್ನು ಆಶ್ರಯಿಸುತ್ತಿದ್ದಾರೆ. ಎನ್‌ಡಿಎ ಸಂವಿಧಾನವನ್ನು ಗೌರವಿಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಬಾಬಾಸಾಹೇಬ್ ಮತ್ತು ಡಾ ರಾಜೇಂದ್ರ ಪ್ರಸಾದ್ ನೀಡಿದ ಸಂವಿಧಾನವು ನನ್ನನ್ನು ಪ್ರಧಾನಿಯನ್ನಾಗಿ ಮಾಡಿದೆ. ನಾನು ಬಡ ಕುಟುಂಬದಿಂದ ಬಂದವನು’ ಎಂದು ಅವರು ಭಾವುಕರಾಗಿ ನುಡಿದರು.

‘ಸಂವಿಧಾನ ದಿನಾಚರಣೆಗೆ (ನ.26ರಂದು ಆಚರಣೆ- ಅದು ಸಂವಿಧಾನವನ್ನು ಸಂಸತ್ತು ಸ್ವೀಕರಿಸಿದ ದಿನ) ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದೂ ಅವರು ಕಿಡಿಕಾರಿದರು.

ಕಾಂಗ್ರೆಸ್‌ಗೆ ಶಾಕ್ ನೀಡಿದ ಆಯೋಗ, 2 ದಿನ ಚುನಾವಣಾ ಪ್ರಚಾರದಿಂದ ಸುರ್ಜೆವಾಲ ಬ್ಯಾನ್!

ಸನಾತನ ಧರ್ಮಕ್ಕೆ ಅವಮಾನ:

‘ಅವರು (ವಿರೋಧ ನಾಯಕರು) ಸಂತಾನ ಧರ್ಮವನ್ನು ‘ಡೆಂಘೀ ಮತ್ತು ಮಲೇರಿಯಾ’ ಎಂದು ಕರೆಯುತ್ತಾರೆ. ಅವರು ಒಂದೇ ಒಂದು ಸ್ಥಾನಕ್ಕೂ ಅರ್ಹರಲ್ಲ...ಅವರಿಗೆ ಶಿಕ್ಷೆಯಾಗಬೇಕು’ ಎಂದು ಕರೆ ನೀಡದರು. ಇದೇ ವೇಳೆ ಬಿಹಾರದ ಆರ್‌ಜೆಡಿ ಭ್ರಷ್ಟಾಚಾರ ಮತ್ತು ಗೂಂಡಾ ರಾಜ್‌ ಸಂಕೇತವಾಗಿದೆ. ಏಕೆಂದರೆ ಆರ್‌ಜೆಡಿ ಬಿಹಾರಕ್ಕೆ ಕೇವಲ ಎರಡನ್ನು ನೀಡಿದೆ. ಅದೆಂದರೆ- ಜಂಗಲ್ ರಾಜ್ ಮತ್ತು ಭ್ರಷ್ಟಾಚಾರ. ಇನ್ನೆಂದೂ ಬಿಹಾರದ ಯುವಕರು ಎಂದಿಗೂ ಆರ್‌ಜೆಡಿಗೆ ಮತ ಹಾಕುವುದಿಲ್ಲ. ಕಂದೀಲು (ಆರ್‌ಜೆಡಿ ಚಿಹ್ನೆ) ಸ್ಮಾರ್ಟ್ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಬಹುದೇ?’ ಎಂದು ಕಿಚಾಯಿಸಿದರು.

ಅಕ್ರಮ ವಲಸೆಗೆ ಕಡಿವಾಣ:

ಬಳಿಕ ಪೂರ್ಣಿಯಾದಲ್ಲಿ ಮಾತನಾಡಿದ ಪ್ರಧಾನಿ, ನಮ್ಮ ಸರ್ಕಾರ ಅಕ್ರಮ ವಲಸೆಗೆ ಕಡಿವಾಣ ಹಾಕಲಿದೆ. ಮತ ಬ್ಯಾಂಕ್‌ ರಾಜಕೀಯಕ್ಕೆಂದೇ ಅಕ್ರಮ ವಲಸೆಗೆ ವಿಪಕ್ಷಗಳು ಮಣೆ ಹಾಕುತ್ತಿದ್ದವು ಎಂದು ಹೇಳಿದರು. ಅಲ್ಲದೆ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜಾರಿಯನ್ನು ಯಾರಿಂದಲೂ ತಡೆಯಲಾಗದು ಎಂದರು. ಪೂರ್ಣಿಯಾ ಜಿಲ್ಲೆ ಬಾಂಗ್ಲಾದೇಶ ಹಾಗೂ ನೇಪಾಳ ಗಡಿಗೆ ಹೊಂದಿಕೊಂಡಂತಿದೆ. ಹೀಗಾಗಿ ಮೋದಿ ಇಲ್ಲಿ ಅಕ್ರಮ ವಲಸೆಯನ್ನು ಪ್ರಸ್ತಾಪಿಸಿದರು.

click me!