ಇಸ್ರೋ ಸಾಧನೆಗೆ ಮೋದಿ ಭಾವುಕ: ನಿಮ್ಮ ದರ್ಶನದಿಂದ ನಾನು ಪಾವನವಾಗಿದ್ದೇನೆ ಎಂದ ಪ್ರಧಾನಿ

By Kannadaprabha News  |  First Published Aug 27, 2023, 6:05 AM IST

ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಸ್ರೋ ಮುಖ್ಯ ಕಚೇರಿಗೆ ಭೇಟಿ ನೀಡಿದರು. 


ಬೆಂಗಳೂರು (ಆ.27): ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಸ್ರೋ ಮುಖ್ಯ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡುವಾಗ ಅವರು ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡುತ್ತಾ ಭಾವುಕರಾದರು. ‘ನಾನು ಒಂದು ವಿಶೇಷವಾದ ಖುಷಿ ಅನುಭವಿಸುತ್ತಿದ್ದೇನೆ. ತನುಮನ ಖುಷಿಯಿಂದ ತುಂಬಿ ಹೋಗಿದೆ. ಒಳಗೊಳಗೆ ಒಂಥರಾ ತಳಮಳ. ಇಷ್ಟೊಂದು ತಳಮಳ ಎಂದೂ ಕಂಡಿಲ್ಲ. ವಿದೇಶದಿಂದ ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸಲ್ಯೂಟ್‌ ಮಾಡಲು ಇಚ್ಛಿಸಿದ್ದೆ. ನಿಮ್ಮ ದರ್ಶನದಿಂದ ನಾನು ಪಾವನವಾಗಿದ್ದೇನೆ’ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.

ಭಾವುಕತೆಯ ನಡುವೆಯೇ ಮೋದಿ ಅವರು ‘ಚಂದ್ರಯಾನ-3’ ಯೋಜನೆಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿದ ಸ್ಥಳ ಇನ್ನು ಮುಂದೆ ‘ಶಿವ ಶಕ್ತಿ ಪಾಯಿಂಟ್‌’ (ಶಿವಶಕ್ತಿ ಬಿಂದು) ಎಂಬುದಾಗಿ ಹಾಗೂ 2019ರಲ್ಲಿ ಚಂದ್ರಯಾನ-2 ವೇಳೆ ಮೂನ್‌ ಲ್ಯಾಂಡರ್‌ ಹೆಜ್ಜೆ ಗುರುತು ಮೂಡಿಸಿದ ಜಾಗವನ್ನು ‘ತಿರಂಗಾ ಪಾಯಿಂಟ್‌’ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದರು. ಅಲ್ಲದೆ, ಭಾರತವು ಚಂದ್ರಯಾನ-3 ಮೂಲಕ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಆಗಸ್ಟ್‌ 23ನ್ನು ಇನ್ನುಮುಂದೆ ಪ್ರತಿ ವರ್ಷ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವಾಗಿ ಆಚರಿಸಲಾಗುವುದು ಎಂದೂ ಪ್ರಕಟಿಸಿದರು.

Tap to resize

Latest Videos

ನನಗೆ ಅಮಿತ್ ಶಾ ಅಥವಾ ಯಾರೂ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್

ವಿದೇಶದಲ್ಲಿದ್ದರೂ ಮನಸ್ಸು ಇಲ್ಲೇ ಇತ್ತು: ಶನಿವಾರ ಪೀಣ್ಯದ ಇಸ್ಟ್ರಾಕ್‌ ಕೇಂದ್ರದಲ್ಲಿ ಚಂದ್ರಯಾನ-3 ಯಶಸ್ಸಿಗೆ ಕಾರಣವಾದ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಚಂದ್ರಯಾನ-3 ಯಶಸ್ಸಿನ ವೇಳೆ ನಾನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರೂ ನನ್ನ ಮನವು ಪೂರ್ಣ ಪ್ರಮಾಣದಲ್ಲಿ ನಿಮ್ಮ ಕಡೆಗೇ ಇತ್ತು. ಮನಸ್ಸಿನಲ್ಲಿ ಏನೋ ವಿಶೇಷವಾದ ಖುಷಿ, ಒಂಥರಾ ತಳಮಳ. ಇಷ್ಟೊಂದು ತಳಮಳ...’ ಎಂದು ಮಾತಾಡಲಾಗದೆ ತುಸು ಸಮಯ ಮೌನರಾದರು. ಈ ವೇಳೆ ನರೇಂದ್ರ ಮೋದಿ ಗದ್ಗದಿತರಾದರೆ, ಸಭಿಕರಾಗಿದ್ದ ವಿಜ್ಞಾನಿಗಳು ಭಾವುಕರಾದರು.

ವಿಜ್ಞಾನಿಗಳ ಸಾಧನೆಗೆ ಸಲ್ಯೂಟ್‌: ಕಷ್ಟದಿಂದಲೇ ಮಾತು ಮುಂದುವರೆಸಿದ ಮೋದಿ, ‘ನಾನು ಭಾರತಕ್ಕೆ ಬಂದಾಕ್ಷಣ....’ ಎಂದು ಹೇಳಿ ಮತ್ತೆ ಗದ್ಗದಿತರಾಗಿ ತುಸು ಕಾಲ ಮೌನಕ್ಕೆ ಶರಣಾದರು. ‘ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಬೇಕು. ನಿಮ್ಮ ಸಾಧನೆಗೆ ಸಲ್ಯೂಟ್‌ ಮಾಡಬೇಕು. ನಿಮ್ಮ ಪರಿಶ್ರಮಕ್ಕೆ, ನಿಮ್ಮ ಧೈರ್ಯಕ್ಕೆ, ನಿಮ್ಮ ಶ್ರದ್ಧೆಗೆ, ನಿಮ್ಮ ಜೀವಂತಿಕೆಗೆ, ನಿಮ್ಮ ಭಾವನೆಗಳಿಗೆ ಸಲ್ಯೂಟ್‌ ಮಾಡಬೇಕು ಎಂದುಕೊಂಡಿದ್ದೆ. ಹೀಗಾಗಿಯೇ ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದು ನಿಮ್ಮನ್ನು ಭೇಟಿ ಮಾಡಿದ್ದೇನೆ’ ಎಂದರು. ನಿಮ್ಮನ್ನು ಭೇಟಿ ಮಾಡಲೇಬೇಕು ಎಂಬ ಇರಾದೆಯಿಂದ ಹೊತ್ತಲ್ಲದ ಹೊತ್ತಲ್ಲಿ ಬಂದು ಭೇಟಿಯಾಗುತ್ತಿದ್ದೇನೆ. ಇದು ನಿಮಗೆ ಕಷ್ಟಆಗಿರಬಹುದು. ಆದರೆ ಹೋಗಲೇಬೇಕು, ಅಭಿನಂದಿಸಲೇಬೇಕು ಎಂದು ಬರಬೇಕಾಯಿತು ಎಂದು ಕ್ಷಮೆ ಕೇಳುವ ಧಾಟಿಯಲ್ಲಿ ಪ್ರಧಾನಿ ಮಾತನಾಡಿದರು.

ಭಾರತ ವಿಶ್ವನಾಯಕ: ದೇಶದ ಜನತೆ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನಿಮ್ಮ ತಪಸ್ಸಿನಿಂದ ನೀವು ಆ ನಂಬಿಕೆಯನ್ನು ಗಳಿಸಿದ್ದೀರಿ. ದೇಶದ ಜನತೆಯ ಆಶೀರ್ವಾದ ನಿಮ್ಮ ಮೇಲಿದೆ. ಈ ಆಶೀರ್ವಾದ ಮತ್ತು ನಿಮ್ಮ ಸಮರ್ಪಣಾ ಭಾವದಿಂದಾಗಿ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ದಕ್ಷಿಣ ಭಾಗದಿಂದ ಚಂದ್ರನ ದಕ್ಷಿಣ ಧ್ರುವದವರೆಗೆ ಈ ಚಂದ್ರಯಾನ-3 ಪ್ರಯಾಣ ಸುಲಭವಾಗಿರಲಿಲ್ಲ. ಸಾಫ್‌್ಟಲ್ಯಾಂಡಿಂಗ್‌ ಅನ್ನು ಖಚಿತಪಡಿಸಿಕೊಳ್ಳಲು, ವಿಜ್ಞಾನಿಗಳು ಕೃತಕ ಚಂದಿರನನ್ನೇ ಮಾಡಿದ್ದರು. ಕೃತಕ ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಅನ್ನು ಲ್ಯಾಂಡಿಂಗ್‌ ಮಾಡುವ ಮೂಲಕ ಪರೀಕ್ಷಿಸಿದ್ದರು. 

ಮೂನ್‌ ಲ್ಯಾಂಡರ್‌ ಅನ್ನು ಲ್ಯಾಂಡಿಂಗ್‌ ಮಾಡುವ ಮೂಲಕ ಪರೀಕ್ಷಿಸಲಾಯಿತು. ಇಂತಹ ಹಲವು ಪರೀಕ್ಷೆಗಳ ನಂತರ ಅಲ್ಲಿಗೆ ತಲುಪಿದಾಗ ಯಶಸ್ಸು ಸಿಕ್ಕೇ ಸಿಗಬೇಕು ತಾನೇ ಎಂದು ಪ್ರಶ್ನಿಸಿದರು. ನಾವೀನ್ಯತೆಯ ಈ ವೇಗವು 2047ರ ಜಾಗತಿಕ ಭಾರತದ ಕನಸನ್ನು ನನಸಾಗಿಸುತ್ತದೆ. ನಿಮ್ಮ ಶ್ರಮವು ಕೇಂದ್ರದ ನಿರ್ಣಯವನ್ನು ಪರಿಪೂರ್ಣತೆಗೆ ಕೊಂಡೊಯ್ಯುತ್ತಿದೆ. ಕೋಟ್ಯಂತರ ದೇಶವಾಸಿಗಳು ಮತ್ತು ವಿಶ್ವದ ವಿಜ್ಞಾನ ಸಮುದಾಯದ ಪರವಾಗಿ ನನ್ನ ಕಡೆಯಿಂದ ಶುಭಾಶಯಗಳು. ಇದೆಲ್ಲವೂ ನಿಮ್ಮಂದಲೇ ಸಾಧ್ಯವಾಗಿದೆ. ನಿಮ್ಮನ್ನು ಎಷ್ಟುಕೊಂಡಾಡಿದರೂ ಕಡಿಮೆಯೇ ಎಂದು ಹೇಳಿದರು.

ರಾಷ್ಟ್ರೀಯ ಹ್ಯಾಕಥಾನ್‌ ಆಯೋಜನೆಗೆ ಕರೆ: ಬ್ಯಾಹಾಕಾಶ ತಂತ್ರಜ್ಞಾನಕ್ಕೆ ದೊಡ್ಡ ಶಕ್ತಿ ಇದೆ. ಸ್ಪೇಸ್‌ ಅಪ್ಲಿಕೇಷನ್‌ ಯುವಕರಿಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿವೆ. ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಬಳಕೆ ಬಗ್ಗೆ ಇಸ್ರೋ ಸಂಸ್ಥೆಯು ಕೇಂದ್ರದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಒಂದು ರಾಷ್ಟ್ರೀಯ ಹ್ಯಾಕಥಾನ್‌ ಆಯೋಜಿಸಬೇಕು. ಆ ಹ್ಯಾಕಥಾನ್‌ನಲ್ಲಿ ಹೆಚ್ಚಿನ ಯುವಜನತೆ ಭಾಗಿಯಾಗಬೇಕು. ಈ ರಾಷ್ಟ್ರೀಯ ಹ್ಯಾಕಥಾನ್‌ ನಮ್ಮ ಆಡಳಿತವನ್ನು ಮತ್ತಷ್ಟುಪ್ರಭಾವಿತವಾಗಿಸುತ್ತದೆ. ವಿಶ್ವಕ್ಕೆ ಮತ್ತಷ್ಟುಹೊಸ ಪರಿಹಾರಗಳನ್ನು ನೀಡುತ್ತದೆ ಎಂದು ಕರೆ ನೀಡಿದರು.

ಸೆ.1ರಿಂದ ಚಂದ್ರಯಾನ ರಸಪ್ರಶ್ನೆ: ಇದೇ ವೇಳೆ ಅನಂತ ಆಕಾಶದಲ್ಲಿ ಇನ್ನೂ ಎಷ್ಟುಅನಂತ ಸಂಭವನೀಯಗಳಿವೆ. ಕೇಂದ್ರ ಸರ್ಕಾರವು ನಮ್ಮ ಚಂದ್ರಯಾನಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆಯನ್ನು ಸೆಪ್ಟೆಂಬರ್‌ 1 ರಿಂದ ಪ್ರಾರಂಭ ಮಾಡಲಿದೆ. ಇದಕ್ಕೆ ಯುವಜನತೆ ಕೈಜೋಡಿಸುವಂತೆ ಮನವಿ ಮಾಡುತ್ತೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಮೋದಿ ಹೊಸ ಟಾಸ್ಕ್‌: ಭಾರತ ಶಾಸ್ತ್ರಗಳಲ್ಲಿರುವ ಖಗೋಳಶಾಸ್ತ್ರವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಬೇಕಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಈ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಟಾಸ್ಕ್‌ ನೀಡಿದರು. ಭಾರತವು ನೂರಾರು ವರ್ಷ ಹಿಂದೆಯೇ ಅಂತರಿಕ್ಷ ನೋಡಲು ಶುರು ಮಾಡಿತ್ತು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ ಸೇರಿ ಹಲವು ಋುಷಿಗಳು ವೈಜ್ಞಾನಿಕ ಅಧ್ಯಯನಗಳನ್ನು ಮಾಡಿದ್ದರು. ಆರ್ಯಭಟ ಭೂಮಿ ಗೋಲಾಕಾರದ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ. ಭೂಮಿಯ ತಿರುಗುವಿಕೆಯ ಬಗ್ಗೆಯೂ ಬರೆದಿದ್ದಾರೆ. 

ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು ವಿಪರ್ಯಾಸ: ನಟ ಚೇತನ್‌

ಸೂರ್ಯ ಸಿದ್ಧಾಂತ ಗ್ರಂಥ ಹಾಗೂ ಹಲವು ಶ್ಲೋಕಗಳಲ್ಲಿ ಸೂರ್ಯ, ಚಂದ್ರನ ಬಗ್ಗೆ ವೈಜ್ಞಾನಿಕ ಉಲ್ಲೇಖಗಳಿವೆ. ಸೂರ್ಯ ಹಾಗೂ ಚಂದ್ರ ಗ್ರಹಣಗಳ ಬಗ್ಗೆ ತುಂಬಾ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಗ್ರಹ ಹಾಗೂ ಉಪಗ್ರಹಗಳ ಗತಿಯನ್ನು ಅತಿ ಸೂಕ್ಷ್ಮವಾಗಿ ಗ್ರಹಿಸಿ ಅಧ್ಯಯನ ಮಾಡಿದ್ದಾರೆ. ಸಾವಿರಾರು ವರ್ಷಗಳ ಹಿಂದೆಯೇ ಕ್ಯಾಲೆಂಡರ್‌ ಮಾಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಸಂಶೋಧನೆ ನಡೆಸಬೇಕು. ತನ್ಮೂಲಕ ಆಂತರಿಕ್ಷ ಕ್ಷೇತ್ರದಲ್ಲಿ ದೇಶವು ನೂರಾರು ವರ್ಷಗಳ ಹಿಂದೆಯೇ ನೀಡಿರುವ ಕೊಡುಗೆಗಳನ್ನು ಅಧ್ಯಯನ ಮಾಡಬೇಕು ಎಂದರು.

click me!