ಮೋದಿ ಮಾಡ್ತಾರಂತೆ ಸಂಪುಟ ಸರ್ಜರಿ!

By Kannadaprabha NewsFirst Published Jul 10, 2020, 5:08 PM IST
Highlights

ಕೋವಿಡ್‌ ಸಂಕಷ್ಟದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸರ್ಜರಿ|  ಕಳೆದ ವಾರ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್‌ ನಾಯಕರ ನಡುವೆ ಸಭೆ | ಕೆಲವು ಇಲಾಖೆಗಳಿಗೆ ನೇರವಾಗಿ ವೃತ್ತಿಪರರನ್ನು ನೇಮಕ

ನವದೆಲಿ(ಜು.10): ಕೋವಿಡ್‌ ಸಂಕಷ್ಟದ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ಮೈನರ್‌ ಸರ್ಜರಿ ಮಾಡಲಿದ್ದಾರೆ ಎಂಬ ಖಚಿತ ವರ್ತಮಾನ ದಿಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೂಲಗಳಿಂದ ಬರುತ್ತಿದೆ.

ಕಳೆದ ವಾರ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್‌ ನಾಯಕರ ನಡುವೆ ಸಭೆ ನಡೆದಿದ್ದು, ಜುಲೈ ಅಂತ್ಯದಲ್ಲಿ ಮೋದಿ ಕೆಲವು ಜೂನಿಯರ್‌ ಮಂತ್ರಿಗಳನ್ನು ಕೈಬಿಟ್ಟು, ಕೆಲವು ಇಲಾಖೆಗಳಿಗೆ ನೇರವಾಗಿ ವೃತ್ತಿಪರರನ್ನು ನೇಮಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಜೂನ್‌ ಕೊನೆಯ ವಾರದಲ್ಲಿ ಪ್ರಧಾನಿ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಬಿ.ಎಲ್. ಸಂತೋಷ್‌ ಇದ್ದರೆ, ಆರ್‌ಎಸ್‌ಎಸ್‌ ಕಡೆಯಿಂದ ಸಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಮತ್ತು ಕೃಷ್ಣ ಗೋಪಾಲ್ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಮುಂಬರುವ ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಪಟ್ಟಂತೆ ಕೂಡ ಚರ್ಚೆ ನಡೆದಿದ್ದು, ಆದರೆ ಮೋದಿ ಸಂಪುಟ ವಿಸ್ತರಣೆಯಷ್ಟೇ ಮಾಡ್ತಾರೋ ಅಥವಾ ಪುನಾಚನೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲ ವೃತ್ತಿಪರರನ್ನು ಮತ್ತು ಕೆಲ ಅತ್ಯಂತ ಕಿರಿಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ್ಯತೆ ಬಗ್ಗೆ ಸಹ ಬಿಜೆಪಿ ವಲಯದಲ್ಲಿ ಗುಸುಗುಸು ಇದೆ.

ಅನೇಕ ಹೆಸರುಗಳು ದಿಲ್ಲಿ ಮಟ್ಟದಲ್ಲಿ ಓಡಾಡುತ್ತಿವೆಯಾದರೂ ಮೋದಿ, ನಡ್ಡಾ ಮತ್ತು ಶಾ ಅವರ ನಡುವಿನ ಕೊನೆಯ ಭೇಟಿಯಲ್ಲಿ ನಿರ್ಧಾರ ಆಗುವವರೆಗೂ ಖಚಿತತೆ ಸಿಗುವುದು ಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!