ಮೋದಿ ಕರ್ನಾಟಕ ದ್ವೇಷಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Kannadaprabha News   | Kannada Prabha
Published : Oct 22, 2025, 04:28 AM IST
Siddaramaiah Koppal

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಸಹಾಯ ಮಾಡುತ್ತಿಲ್ಲ. ಪ್ರಧಾನಿ ಮೋದಿಯವರು ಎಷ್ಟು ಒಳ್ಳೆಯವರಾಗಿ ಕಾಣುತ್ತಾರೋ, ಅಷ್ಟೇ ಅವರಿಗೆ ಕರ್ನಾಟಕದ ಬಗ್ಗೆ ದ್ವೇಷವಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಸಹಾಯ ಮಾಡುತ್ತಿಲ್ಲ. ಪ್ರಧಾನಿ ಮೋದಿಯವರು ಎಷ್ಟು ಒಳ್ಳೆಯವರಾಗಿ ಕಾಣುತ್ತಾರೋ, ಅಷ್ಟೇ ಅವರಿಗೆ ಕರ್ನಾಟಕದ ಬಗ್ಗೆ ದ್ವೇಷವಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮಂಗಳವಾರ ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು 15ನೇ ಹಣಕಾಸು ಆಯೋಗದ ಪ್ರಕಾರ, ನಮ್ಮ ರಾಜ್ಯಕ್ಕೆ 11,495 ಕೋಟಿ ರು. ತೆರಿಗೆ ಪಾಲು ಬರಬೇಕಿತ್ತು. ಆದರೆ, ಒಂದು ರುಪಾಯಿಯನ್ನೂ ಕೊಡಲಿಲ್ಲ. ಪೆರಿಫೆರಲ್‌ ರಿಂಗ್ ರಸ್ತೆಗೆ 3 ಸಾವಿರ ಕೋಟಿ ರು, ಕೆರೆ ಅಭಿವೃದ್ಧಿ ಯೋಜನೆಗೆ 3,000 ಕೋಟಿ ರು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಕೊಡುತ್ತೇನೆ ಎಂದು ಹಣಕಾಸು ಸಚಿವೆ ಬಜೆಟ್‌ನಲ್ಲಿ ಘೋಷಣೆ ಮಾಡಿದರೂ ಕೊಡಲಿಲ್ಲ ಎಂದರು.

ರಾಜ್ಯ ಸರ್ಕಾರಕ್ಕೆ 4,595 ಕೋಟಿ ರು. ಗ್ರ್ಯಾಂಟ್ಸ್ ಕಡಿಮೆಯಾಗಿರುವ ಕಾರಣ ವಿಶೇಷ ಅನುದಾನ ಕೊಡುತ್ತೇವೆ ಎಂದು ಹೇಳಿ ಅದನ್ನೂ ಕೊಡಲಿಲ್ಲ. ಇಂತಹ ಅನ್ಯಾಯಕ್ಕೆ ಏನು ಮಾಡಬೇಕು ಎಂದು ಬೆಂಗಳೂರಿನ ಜನರೇ ಹೇಳಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಮೋದಿ... ಎಂದು ವೋಟ್ ಹಾಕುತ್ತೀರಲ್ಲ, ನಮ್ಮ ರಾಜ್ಯದ ಬಿಜೆಪಿ ಸಂಸದರು, ಸಚಿವರು ಒಂದು ದಿನವಾದರೂ ಮಾತನಾಡಿದ್ದಾರಾ? ಇಲ್ಲಿನ ಸಂಸದ ಪಿ.ಸಿ ಮೋಹನ್ ಒಂದು ದಿನವಾದರೂ ಮಾತನಾಡಿದ್ದಾರಾ? ಸುಮ್ಮನೇ ವೋಟ್ ಹಾಕಿ ಬಿಡುವುದಾ? ಕರ್ನಾಟಕದ ಹಣ ಕರ್ನಾಟಕಕ್ಕೆ ಕೊಡಿ ಎಂದು ಕೇಳಲಾಗದವರಿಗೆ ವೋಟ್ ಹಾಕಬೇಕೇ? ಎಂದು ಸಿಎಂ ಪ್ರಶ್ನಿಸಿದರು.

ಮೋದಿ ಬಳಿ ಕೇಳಿ ಎಂದ ಸಿಎಂ:

ಮುಖ್ಯಮಂತ್ರಿಯವರ ಭಾಷಣದ ವೇಳೆಯೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವಂತೆ ಸಭಿಕರೊಬ್ಬರು ಕೇಳಿದರು.

ಕೂಡಲೇ ಸಭಿಕನ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ‘ಮೋದಿಯವರನ್ನು ಕೇಳಿ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ, ಮೋದಿ, ಮೋದಿ ಎಂದು ವೋಟ್ ಹಾಕಲು ಮಾತ್ರ ಬರುತ್ತದೆಯೇ?’ ಎಂದು ವ್ಯಂಗ್ಯಭರಿತವಾಗಿ ಪ್ರಶ್ನಿಸಿದರು.

ಅನುದಾನ ಕೇಳದ ತೇಜಸ್ವಿ, ಸೂರ್ಯನಲ್ಲ ಅಮಾವಾಸ್ಯೆ

ಬೆಂಗಳೂರು : ಕೇಂದ್ರದ ಅನುದಾನ ತಾರತಮ್ಯ ಪ್ರಶ್ನಿಸದ ಸಂಸದ ತೇಜಸ್ವಿ ಸೂರ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಅಮಾವಾಸ್ಯೆ’ ಎಂದು ಕರೆದು ವ್ಯಂಗ್ಯವಾಡಿದ್ದು, ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಿಂದ ಕೇಂದ್ರಕ್ಕೆ ಹೋಗುವ 1 ರು. ತೆರಿಗೆಯಲ್ಲಿ ವಾಪಸ್ 15 ಪೈಸೆ ಮಾತ್ರ ವಾಪಸ್‌ ಬರುತ್ತದೆ. ಕೇಂದ್ರದ ಈ ತಾರತಮ್ಯ, ಅನ್ಯಾಯ, ದ್ರೋಹದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಬಾಯಿ ಬಿಡುವುದಿಲ್ಲ. ಹೀಗಾಗಿ, ಅವರು ‘ಸೂರ್ಯ’ ಅಲ್ಲ. ಅಮಾವಾಸ್ಯೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಮತಕಡಿಮೆಯಾಗಿದ್ದರೆ ತೇಜಸ್ವಿ ಸೂರ್ಯ ಅವರನ್ನು ಕೇಳಲಿ, ಅದನ್ನು ಬಿಟ್ಟು ಮತಗಳಿಗಾಗಿ ಅಮಾವಾಸ್ಯೆ, ಹುಣ್ಣಿಮೆ ಎನ್ನಬೇಕಿಲ್ಲ ಎಂದು ಕಿಡಿಕಾರಿದ್ದಾರೆ.ಸಿಎಂ ಹೇಳಿದ್ದೇನು?:

ಮಂಗಳವಾರ ನಗರದಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ. ಕೇಂದ್ರದ ಈ ತಾರತಮ್ಯ, ಅನ್ಯಾಯ, ದ್ರೋಹದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಬಾಯಿ ಬಿಡುವುದಿಲ್ಲ. ಹೀಗಾಗಿ, ಅವರು ಸೂರ್ಯ ಅಲ್ಲ. ಅಮಾವಾಸ್ಯೆ. ಅದೇ ರೀತಿ ಸಂಸದ ಪಿ.ಸಿ.ಮೋಹನ್, ಸಚಿವರಾದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ ಸೇರಿ ಯಾರೊಬ್ಬರು ಒಂದು ದಿನವೂ ಬೆಂಗಳೂರು ನಗರ, ಕರ್ನಾಟಕದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಇಂತಹ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.

ಮತ ಬೇಕಿದ್ದರೆ ಕೇಳಿ ಪಡೆಯಿರಿ:ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ನಂತರ ಸುದ್ದಿಗಾರರ ಜತೆ ಮಾತನಾಡಿ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಸಿದ್ದರಾಮಯ್ಯ ಅವರು ಅತೀ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರು.  ಆದರೆ, ತೇಜಸ್ವಿ ಸೂರ್ಯ ಒಂದು ಬಾರಿಯೂ ಸೋತವರಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಮತವೇನಾದರೂ ಕಡಿಮೆಯಾದರೆ ತೇಜಸ್ವಿ ಸೂರ್ಯ ಅವರ ಬಳಿ ಕೇಳಬಹುದು. ಅದನ್ನು ಬಿಟ್ಟು ಅಮಾವಾಸ್ಯೆ, ಹುಣ್ಣಿಮೆ ಎನ್ನಬೇಕಿಲ್ಲ.  

ಪ್ರಧಾನಿ ಮೋದಿ ರೈಲ್ವೆಗೆ, ರಸ್ತೆಗೆ, ಕುಡಿಯುವ ನೀರಿಗೆ ಎಷ್ಟು ಅನುದಾನ ನೀಡಿದ್ದಾರೆ? ಹಿಂದಿನ ಮನಮೋಹನ್‌ ಸಿಂಗ್‌ ಎಷ್ಟು ನೀಡಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರ ತಿಳಿಸಲಿ. ಎನ್‌ಡಿಎ ಸರ್ಕಾರದ ಐದು ಪಟ್ಟು ಹೆಚ್ಚು ಅನುದಾನ ನೀಡಿದೆ. ರಾಜ್ಯ ಕಾಂಗ್ರೆಸ್‌ನಿಂದ ಒಂದು ಬಸ್‌ ನಿಲ್ದಾಣ, ಆಸ್ಪತ್ರೆ, ರಸ್ತೆ ಕೂಡ ನಿರ್ಮಾಣವಾಗಿಲ್ಲ ಎಂದು ಕಿಡಿಕಾರಿದರು.

ಮೋದಿ ಎಷ್ಟು ಒಳ್ಳೆಯವರಾಗಿ ಕಾಣುತ್ತಾರೋ, ಅಷ್ಟೇ ಅವರಿಗೆ ಕರ್ನಾಟಕದ ಬಗ್ಗೆ ದ್ವೇಷವಿದೆ

ರಾಜ್ಯದ 11495 ಕೋಟಿ ರು. ಜಿಎಸ್ಟಿ ತೆರಿಗೆ ಪಾಲಲ್ಲಿ ಒಂದು ರುಪಾಯಿಯನ್ನೂ ನೀಡಲಿಲ್ಲ

ಫೆರಿಫೆರಲ್‌ ರಿಂಗ್‌ ರಸ್ತೆ, ಭದ್ರಾ ಮೇಲ್ದಂಡೆಗೆ ಬಜೆಟ್‌ ನೆರವು ಘೋಷಿಸಿದರೂ ಹಣ ಕೊಡಲಿಲ್ಲ

ಇಂಥ ಅನ್ಯಾಯಕ್ಕೆ ಏನು ಮಾಡಬೇಕು: ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಅನುದಾನ ಬಗ್ಗೆ ಪ್ರಶ್ನಿಸಬೇಕಾದ ರಾಜ್ಯದ ಬಿಜೆಪಿ ಸಂಸದರಿಂದಲೂ ಮೌನ ಎಂದು ಆಕ್ರೋಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ