ಭದ್ರಾವತಿ (ಅ.29) :ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರರ 60ನೇ ಹುಟ್ಟುಹಬ್ಬ ಅಂಗವಾಗಿ ಹಮ್ಮಿಕೊಂಡಿದ್ದ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ಜನವಿರೋಧಿ ಸರ್ಕಾರಗಳಾಗಿವೆ. ಈ ಸರ್ಕಾರಗಳಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗುತ್ತಿದೆ. ದೇಶ, ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು ಬಡವರು, ರೈತರು, ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮಾರಕವಾಗಿವೆ. ಅಲ್ಲದೆ ಧರ್ಮ ಧರ್ಮಗಳ ನಡುವೆ ವಿಷಬೀಜ ಭಿತ್ತಿ ಜನರು ನೆಮ್ಮದಿಯಿಂದ ಬದುಕಲಾರದ ವಾತಾವರಣ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಮೂರು ಪಕ್ಷ ಮೂರು ಯಾತ್ರೆ, ಮತದಾರರ ಓಲೈಕೆಗೆ ಪಕ್ಷಗಳ ಸರ್ಕಸ್!
ಕಾಂಗ್ರೆಸ್ ಪಕ್ಷ ಸದಾ ಇರಲಿದೆ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭದ್ರಾವತಿ ಕ್ಷೇತ್ರ ತನ್ನದೇ ಇತಿಹಾಸ ಹೊಂದಿದ ಪುಣ್ಯ ಭೂಮಿ. ಇಂತಹ ಭೂಮಿಯಲ್ಲಿ ಸಂಗಮೇಶ್ವರ್ ಎಲ್ಲಾ ಧರ್ಮದ, ಜಾತಿಯ ಜನರ ಪ್ರೀತಿ ಸಂಪಾದಿಸಿರುವುದು ಹೆಮ್ಮೆಯ ವಿಚಾರ. ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬಂದಿಲ್ಲ. ಇಲ್ಲಿನ ಜನರೊಂದಿಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ಭರವಸೆ ನೀಡಲು ಬಂದಿದ್ದೇನೆ. ಈ ನೆಲಕ್ಕೆ ಮತ್ತೆ ವೈಭವ ತಂದು ಕೊಡಬೇಕಾದರೆ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನನ್ನ 30 ವರ್ಷಗಳ ರಾಜಕಾರಣದಲ್ಲಿ ಕ್ಷೇತ್ರದ ಮತದಾರರು ನನಗೆ ನೀಡುತ್ತಿರುವ ಬೆಂಬಲ ಅಭೂತಪೂರ್ವವಾಗಿದೆ. ನನ್ನ ಸ್ವಂತ ಬುದ್ಧಿವಂತಿಕೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಶೇ.70ರಷ್ಟುಅಭಿವೃದ್ಧಿ ಕೆಲಸಗಳ ಮಾಡಿರುವ ತೃಪ್ತಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ನನ್ನನ್ನು ಮತದಾರರು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಆರ್ ಸೀತಾರಾಮ್, ಶಾಸಕರಾದ ಭೈರತಿ ಸುರೇಶ್, ಲಕ್ಷ್ಮೇ ಹೆಬ್ಬಾಳಕರ್, ಚಿನ್ನರಾಜ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೆ.ಬಿ ಪ್ರಸನ್ನಕುಮಾರ್, ಶ್ರೀನಿವಾಸ್, ಮಾಜಿ ಸಂಸದ ಧ್ರುವ ನಾರಾಯಣ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಶಾಸಕ ಬಿ.ಕೆ ಸಂಗಮೇಶ್ವರ್ ಪಕ್ಷ ನಿಷ್ಠೆ ಜೊತೆಗೆ ಜಾತ್ಯತೀತ ಮನೋಭಾವ ಹೊಂದಿದ್ದು, ಈ ಹಿಂದೆ ನಡೆದ ಒಂದೇ ಒಂದು ತಪ್ಪಿನ ಪರಿಣಾಮ ಅವರು ಒಂದು ಬಾರಿ ಸ್ಥಾನದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲವಾದಲ್ಲಿ ಅವರು 4 ಬಾರಿ ಶಾಸಕರಾಗಿರುತ್ತಿದ್ದರು. ದೇವರು ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಶುಭಾ ಹಾರೈಸುತ್ತೇನೆ.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಶಾಸಕ ಸಂಗಮೇಶ್ವರ್‌ಗೆ ಶುಭಾಶಯಗಳ ಮಹಾಪೂರ
ಕ್ಷೇತ್ರದ ರಾಜಕಾರಣದಲ್ಲಿ 3 ದಶಕದಿಂದ ತಮ್ಮದೇ ವರ್ಚಸ್ಸು ಕಾಯ್ದುಕೊಂಡು 3 ಬಾರಿ ಶಾಸಕರಾದ ಬಿ.ಕೆ ಸಂಗಮೇಶ್ವರ ಶುಕ್ರವಾರ 60 ವಸಂತಗಳ ಪೂರೈಸುವ ಮೂಲಕ ಅದ್ಧೂರಿಯಾಗಿ ತಮ್ಮ ಜನ್ಮದಿನ ಆಚರಿಸಿಕೊಂಡರು. ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಶಾಸಕರ ಕುಟುಂಬ ಸಂಬಂಧಿಗಳು ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿ ಗಮನ ಸೆಳೆದರು. ಕ್ಷೇತ್ರದ ಎಲ್ಲೆಡೆ ಶಾಸಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.
ಬಾಳೆಹೊನ್ನೂರು ರಂಭಾಪುರಿ ಶ್ರೀಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಬೆಳಿಗ್ಗೆಯೇ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ರೋಲ್‌ಕಾಲ್ ನೀಡುವಂತೆ ಬಿಜೆಪಿ ಮುಖಂಡನಿಂದ ಗುಂಡಾಗಿರಿ
ಸಾಮಾಜಿಕ ಸೇವಾಕಾರ್ಯಗಳು :
ಶಾಸಕರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ಆರೋಗ್ಯ ಶಿಬಿರ, ಪೌರಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ, ಮಹಿಳಾ ಕಾರ್ಮಿಕರಿಗೆ ಸೀರೆ, ಕಟ್ಟಡ ಕಾರ್ಮಿಕರಿಗೆ ಟಿಫನ್ ಬಾಕ್ಸ್ ವಿತರಣೆ ಸೇರಿ ಇನ್ನಿತರ ಸೇವಾ ಕಾರ್ಯಗಳು ಜರುಗಿದವು.