ನನಗೆ ಪಕ್ಷ ಎಲ್ಲ ಕೊಟ್ಟಿದೆ, ಅಸಮಾಧಾನ ಪ್ರಶ್ನೆಯೇ ಇಲ್ಲ:ಮಾಜಿ ಸಚಿವ ಎಸ್.ಆರ್. ಪಾಟೀಲ

By Suvarna News  |  First Published Jan 21, 2023, 7:10 PM IST

ಪಕ್ಷವು ನನಗೆ ಎಲ್ಲ ಸ್ಥಾನಮಾನ ಗೌರವ ಕೊಟ್ಟಿದೆ, ನನಗೆ ಅಸಮಾಧಾನದ ಪ್ರಶ್ನೆಯೇ ಇಲ್ಲವೆಂದು ಮೇಲ್ಮನೆ ಪ್ರತಿಪಕ್ಷ ಮಾಜಿ ನಾಯಕ,  ಮಾಜಿ ಸಚಿವ ಎಸ್.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಜ.21): ಪಕ್ಷವು ನನಗೆ ಎಲ್ಲ ಸ್ಥಾನಮಾನ ಗೌರವ ಕೊಟ್ಟಿದೆ, ನನಗೆ ಅಸಮಾಧಾನದ ಪ್ರಶ್ನೆಯೇ ಇಲ್ಲವೆಂದು ಮೇಲ್ಮನೆ ಪ್ರತಿಪಕ್ಷ ಮಾಜಿ ನಾಯಕ,  ಮಾಜಿ ಸಚಿವ ಎಸ್.ಆರ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಬಾಗಲಕೋಟೆಯ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಪಂಚಾಯಿತ ರಾಜ್ ಅಧಿಕಾರ ಮೊಟಕುಗೊಳಿ ಸುವುದರಿಂದ ಗ್ರಾಮಾಭಿವೃದ್ಧಿಯ ಮೂಲ ಆಶಯಗಳಿಗೆ ಹೊಡೆತ ಬೀಳಲಿದೆ, ಒತ್ತಾಯದ ಮೂಲಕ ರಾಜಕಾರಣಕ್ಕೆ ಕುಟುಂಬದ ಸದಸ್ಯರನ್ನು ತರುವುದು ಸರಿಯಲ್ಲ, ಪ್ರಾಮಾಣಿಕ ರಾಜಕಾರಣಕ್ಕೆ ಮೋಸವಿಲ್ಲ, ಎರಡನೇ ಹಂತದ ನಾಯಕರನ್ನು ಬೆಳೆಸುವ‌ ಮನೋಭಾವ ಮೊದಲ ಸಾಲಿನ ನಾಯಕರಲ್ಲಿ ಬೆಳೆಯಬೇಕೆಂಬುದು ಸೇರಿದಂತೆ ಹೀಗೆ ಹಲವು ವಿಷಯಗಳ ಕುರಿತು ಹಿರಿಯ ಕಾಂಗ್ರೆಸ್ ಮುಖಂಡರಾದ ಮೇಲ್ಮನೆ ಪ್ರತಿಪಕ್ಷ ಮಾಜಿ ನಾಯಕ ಎಸ್. ಆರ್. ಪಾಟೀಲ ಇಂದಿನ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬಹಳಷ್ಟು ಅರ್ಥಗರ್ಭಿತವಾಗಿ ಮಾತನಾಡಿದರು. 

Tap to resize

Latest Videos

undefined

ಕುಟುಂಬ ರಾಜಕಾರಣ ತರವಲ್ಲ: ಎಸ್.ಆರ್.ಪಾಟೀಲ್
ಇನ್ನು ಸಕ್ರಿಯ ರಾಜಕಾರಣದಲ್ಲಿ ಇರುವವರು ತಮಗೆ ಉತ್ತರದಾಯಿತ್ವವಾಗಿ ಕುಟುಂಬಸ್ಥರನ್ನು ಒತ್ತಾಯದಿಂದ ರಾಜಕಾರಣಕ್ಕೆ ತರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸೇವಾ ಮನೋಭಾವದೊಂದಿಗೆ ಸ್ವಯಂ ಪ್ರೇರಣೆಯಿಂದ ರಾಜಕಾರಣಕ್ಕೆ ಬರುವುದಾದಲ್ಲಿ ತಪ್ಪಿಲ್ಲ. ರಾಜನ ಮಗನೇ ರಾಜನ ಪಟ್ಟಕ್ಕೆ ಬರಬೇಕು ಎನ್ನುವ ಧೋರಣೆ ಸರಿಯಲ್ಲ. ನಾಲ್ಕು ದಶಕದಿಂದ ರಾಜಕಾಣದಲ್ಲಿರುವ ನಾನು ಇದುವರೆಗೂ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ಕರೆತಂದಿಲ್ಲ,  ನಮ್ಮ ಮಗಳಿಗೂ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಅಳಿಯನ ವಿಷಯ ಗೊತ್ತಿಲ್ಲ. ಅದು ಅವರ ಸ್ವಂತ ನಿರ್ಧಾರ ಎಂದರು.
 
ರಾಜಕಾರಣದಲ್ಲಿ 2 ನೇ ಹಂತದ ನಾಯಕರನ್ನ ಬೆಳೆಸಬೇಕು:
ರಾಜಕಾರಣದಲ್ಲಿ 2 ನೇ ಹಂತದ ನಾಯಕರು ಬೆಳೆಯಬೇಕು. ಮುಂದೆ ಯಾರು ಎನ್ನುವ ಪ್ರಶ್ನೆ ಹುಟ್ಟುವ ಮೊದಲು ಮೊದಲ ಸಾಲಿನ ನಾಯಕತ್ವಕ್ಕೆ 2 ನೇ ಹಂತದ ನಾಯಕರನ್ನು ಸಜ್ಜುಗೊಳಿಸಬೇಕು.ಕುಟುಂಬದವರನ್ನೇ 2 ಹಂತದವರನ್ನಾಗಿ ಬೆಳೆಸುವುದು ಸರಿಯಲ್ಲ. ಕಾರ್ಯಕರ್ತರು ಮೊದಲ ಸಾಲಿನ ನಾಯಕರ ಹೆಗಲಿಗೆ ಹೆಗಲಾಗಿ ಕೆಲಸ ಮಾಡಿರುತ್ತಾರೆ. ಅವರನ್ನು ನಾಯರಾಗಿ ಬೆಳೆಸುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತ ಪಡಿಸಿದರು.

ಕೊಟ್ಟ ಭರವಸೆ ಈಡೇರಿಸದೇ ಹೋದರೆ ಜನ ನಂಬದ ಸ್ಥಿತಿ ನಿರ್ಮಾಣ:
ಚುನಾವಣೆ ವೇಳೆ ಪ್ರಮುಖ ರಾಜಕೀಯ ಪಕ್ಷಗಳು ಹೊರಡಿಸುವ ಪ್ರಣಾಳಿಕೆಗಳ ಕುರಿತು ಮಾತನಾಡಿದ ಎಸ್ಸಾರ್, ಪಕ್ಷಗಳು ಮತದಾರರ ಮುಂದೆ ಇಡುವ ಪ್ರಣಾಳಿಕೆಗಳಲ್ಲಿನ ಭರವಸೆಗಳು ಅನುಷ್ಠಾನಕ್ಕೆ ತರುವಂತಿರಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸದೇ ಹೋದಲ್ಲಿ ಜನ ರಾಜಕಾರಣಿಗಳನ್ನು ನಂಬುವುದಿಲ್ಲ. ಹಾಗಾಗಿ ಅನುಷ್ಠಾನಕ್ಕೆ ಬಾರದ ಭರವಸೆಗಳನ್ನು ನೀಡಬಾರದು.

ಈ ವಿಷಯದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುತ್ತಲೇ ಬಂದಿದೆ. ಈದೀನ ನೀಡಿರುವ ಭರವಸೆಗಳು ಸಹ ಈಡೇರಿಸಲು ಸಾಧ್ಯವಾಗುವಂತಿವೆ.ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ಎಂದು ತಮ್ಮ ಪಕ್ಷದ ಭರವಸೆಗಳನ್ನು ಸಮರ್ಥಿಸಿಕೊಂಡು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ ಜನ ಅವರನ್ನು ನಂಬಲಾರರು ಎಂದರು.
 
ಜಾತಿರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ:
ಇನ್ನು ಜಾತಿ ರಾಜಕಾರಣ ‌ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎನ್ನುವ ನಿಲುವನ್ನು ಪ್ರತಿಪಾದಿಸಿದ ಅವರು,  ಬೆಳೆಯುತ್ತಿರುವ ಜಾತಿ ರಾಜಕಾರಣದ ಬಗೆಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ಅಭಿವೃದ್ಧಿ ರಾಜಕಾರಣದ ಬಗೆಗೆ ಗಂಭೀರ ಚಿಂತನೆ ಅಗತ್ಯ ಎಂದರು.

ಮೀಸಲಾತಿಯಲ್ಲಿ ಸರ್ಕಾರದ ದಿಟ್ಟ ನಿಲುವು ಬೇಕು:
ಸಮಾಜದಲ್ಲಿನ ಎಲ್ಲ ಸಮುದಾಯಗಳು ಇಂದು ಮೀಸಲಾತಿ ಬೆನ್ನು ಹತ್ತಿವೆ. ಸರ್ಕಾರ ಈ ವಿಷಯದಲ್ಲಿ ದಿಟ್ಟ ನಿಲುವು ತೆಗೆದುಕೊಳ್ಳಬೇಕು. ಇದರಲ್ಲಿ ರಾಜಕಾರಣ ಸಲ್ಲದು ಎಂದ ಅವರು ಬ್ಲಾಕ್ ಮೇಲ್ ರಾಜಕಾರಣ ಒಳ್ಳೆಯದಲ್ಲ. ಬ್ಲಾಕ್ ಮೇಲ್ ಎನ್ನುವುದು ಇಂದು ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಉಳಿಯದೇ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಏತನ್ಮಧ್ಯೆ ಆಯಾ ಕ್ಷೇತ್ರದಲ್ಲಿನ ಪ್ರಾಮಾಣಿಕರು ಕ್ಷೇತ್ರಗಳಿಂದ ದೂರವಾಗಬಾರದು. ಅಲ್ಲಿಯೇ ಇದ್ದು ತಮ್ಮ ಪ್ರಾಮಾಣಿಕ ಕೆಲಸ, ಕಾರ್ಯ ಮುಂದುವರಿಸಬೇಕು ಎನ್ನುವ ಸಲಹೆ ಮಾಡಿದರು.

ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಭಾರತದ ಕನಸು ನನಸು:
ಗ್ರಾಮ ಸ್ವರಾಜ್ಯ ಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೊದಲಿನ ಗತ್ತು ಉಳಿದಿಲ್ಲ. ಮೊದಲಿದ್ದ ಅಲ್ಲಿನ ಒಂದೊಂದೆ ಅಧಿಕಾರ ಕಸಿಯುವ ಕೆಲಸ ಮುಂದುವರಿದಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಎಸ್ಸಾರ್ ತಾವು ಜಿಲ್ಲಾ ಪರಿಷತ್ ಸದಸ್ಯರಾಗಿ, ಪರಿಷತ್ ಪ್ರತಿಪಕ್ಷ ನಾಯಕರಾಗಿ ಮಾಡಿದ ಕೆಲಸ ಸ್ಮರಿಸಿಕೊಂಡ ಅವರು ಶಾಸಕರಿಗಿಂತ ಹೆಚ್ಚಿನ ಅಧಿಕಾರ ಮತ್ತು ಗೌರವ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಇತ್ತು. ಆದರೆ ಕೇಂದ್ರೀಕೃತ ವ್ಯವಸ್ಥೆ ಪರಿಣಾಮ ಈಗ ಆ ಗೌರವ ಇಲ್ಲವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಅಗತ್ಯ. ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮ ಭಾರತ ಕನಸು ನನಸಾಗಲು ಸಾಧ್ಯ ಎನ್ನುವುದು ತಮ್ಮ ಸ್ಪಷ್ಟ ನಿಲುವಾಗಿದೆ ಎಂದರು.

Assembly election: ಗ್ರಾಮೀಣ ಉತ್ಸವ ಮಾಡಿದ್ದೇನೆ ಹೊರತು ಯಾರಿಗೂ ಗಿಪ್ಟ್‌ ಕೊಟ್ಟಿಲ್ಲ: 

ಮೆಡಿಕಲ್ ಕಾಲೇಜು ಕನಸು:
ನಗರ ಪ್ರದೇಶದ ಜನ ಗ್ರಾಮಗಳತ್ತ ತಿರುಗಿ ನೋಡುವಂತಾಗಬೇಕು ಎನ್ನುವ ಅಬ್ದುಲ್ ಕಲಾಂ ಅವರ ಆಶಯದಂತೆ ಬಾಡಗಂಡಿಯಲ್ಲಿ ಗ್ರಾಮೀಣ ‌ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬಾಪೂಜಿ ಇಂಟರ್ ನ್ಯಾಶನಲ್ ಸ್ಕೂಲ್ ಆರಂಭಿಸಲಾಗಿದ್ದು, ಪ್ರಸಕ್ತ ವರ್ಷ  ಬಿಎಎಂಎಸ್ ಮತ್ತು ಬಿಎಸ್ದಿ ನರ್ಸಿಂಗ್ ಕಾಲೇಜ್ ಅರಂಭಿಸಲಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಕನಸು ಕಂಡಿರುವೆ. ಅದು ಕೂಡ ನನಸಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಜೆ.ಪಿ ನಡ್ಡಾ ಹವಾ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು!

ಪಕ್ಷ ನನಗೆ ಎಲ್ಲ ಕೊಟ್ಟಿದೆ, ಅಸಮಾಧಾನ ಪ್ರಶ್ನೆಯೇ ಇಲ್ಲ:
ನನಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಕೇಳದೆ ಬಿಟಿಡಿಎ ಅಧ್ಯಕ್ಷನನ್ನಾಗಿಸಿದೆ. ಜಿಲ್ಲಾ ಪರಿಷತ್ ಸದಸ್ಯ, ಜಿಲ್ಲಾ ಪರಿಷತ್ ಪ್ರತಿಪಕ್ಷ ನಾಯಕ, ನಾಲ್ಕು ಬಾರಿ ಮೇಲ್ಮನೆ ಸದಸ್ಯತ್ವ, ಮೇಲ್ಮನೆ ಪ್ರತಿಪಕ್ಷ ನಾಯಕ, ಸಚಿವ ಸ್ಥಾನ, ಪಕ್ಷದ ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಒಂದು ಬಾರಿ ಅವಕಾಶ ಸಿಕ್ಕಿಲ್ಲ ಎಂದಾಕ್ಷಣ ಯಾರನ್ನೇ ಆಗಲಿ ದೂಷಿಸುವುದು ಸರಿಯಲ್ಲ. ನಾನು ಯಾರನ್ನೂ ದೂಷಿಸುವ ಪ್ರಶ್ನೆಯೇ ಇಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವೆ ಎಂದರು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಭಂಜನ್ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.

click me!