ಸಿಂದಗಿ, ಹಾನಗಲ್‌ ಉಪಸಮರ: ಪ್ರಚಾರ ಅಬ್ಬರಕ್ಕೆ ತೆರೆ!

By Suvarna NewsFirst Published Oct 28, 2021, 8:33 AM IST
Highlights

* ಸಿಂದಗಿ, ಹಾನಗಲ್‌ ಉಪಸಮರ: ಇಂದು, ನಾಳೆ ಮನೆಮನೆ ಮತಬೇಟೆ

* ಪ್ರಚಾರ ಅಬ್ಬರಕ್ಕೆ ತೆರೆ

* ಅ.30ಕ್ಕೆ ಮತದಾನ, ನ.2ಕ್ಕೆ ಹೈವೋಲ್ಟೇಜ್‌ ಸಮರದ ಫಲಿತಾಂಶ ಪ್ರಕಟ

ವಿಜಯಪುರ(ಅ.28): ಕುತೂಹಲಕ್ಕೆ ಕಾರಣವಾಗಿರುವ ಹಾಗೂ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿರುವ ಸಿಂದಗಿ ಮತ್ತು ಹಾನಗಲ್‌ ಉಪ ಚುನಾವಣೆಯ (Hanagal By Election) ಅಬ್ಬರದ ಪ್ರಚಾರಕ್ಕೆ ಬುಧವಾರ ಸಂಜೆ ತೆರೆಬಿದ್ದಿದೆ. ಚುನಾವಣಾ ಆಯೋಗದ (Election Commission) ಮಾರ್ಗಸೂಚಿಯಂತೆ ಮತದಾನಕ್ಕಿಂತ 72 ಗಂಟೆ ಪೂರ್ವದಲ್ಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇನ್ನೆರಡು ದಿನ ಕೇವಲ ಮನೆ ಮನೆ ಪ್ರಚಾರಕ್ಕಷ್ಟೇ ಅವಕಾಶ ಇದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕೊನೇಕ್ಷಣದ ಕಸರತ್ತು ನಡೆಸಲಿದ್ದಾರೆ. ಎರಡೂ ಕ್ಷೇತ್ರಗಳಿಗೆ ಅ.30ರಂದು ಮತದಾನ ನಡೆಯಲಿದ್ದು, ನ.2ರಂದು ಫಲಿತಾಂಶ ಪ್ರಕಟವಾಗಲಿದೆ.

 

ಬಿಜೆಪಿಯ ಸಿ.ಎಂ.ಉದಾಸಿ (CM Udasi) ನಿಧನದಿಂದ ಹಾವೇರಿ ಜಿಲ್ಲೆಯ ಹಾನಗಲ್‌ ಹಾಗೂ ಜೆಡಿಎಸ್‌ನ ಎಂ.ಸಿ.ಮನಗೂಳಿ ಅವರ ನಿಧನದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರ ತೆರವಾಗಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೂರೂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಮುಖ್ಯಮಂತ್ರಿಯಾದಿಯಾಗಿ ಆಡಳಿತಾರೂಢ ಪಕ್ಷದ ಪ್ರಮುಖ ಸಚಿವರು ಹಲವು ದಿನಗಳಿಂದ ಕ್ಷೇತ್ರದಲ್ಲೇ ಬೀಡುಬಿಟ್ಟು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದಾರೆ. ಅವರಿಗೆ ಪೈಪೋಟಿ ನೀಡಲು ಪ್ರತಿಪಕ್ಷಗಳ ಪ್ರಮುಖ ನಾಯಕರೂ ಪ್ರತಿತಂತ್ರ ರೂಪಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮುಖ್ಯಮಂತ್ರಿ ಎರಡೂ ಕ್ಷೇತ್ರಗಳಲ್ಲಿ ಸುತ್ತಾಡಿದರೆ, ಇವರಿಗೆ ಸ್ಪರ್ಧೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ, ಸಮಾವೇಶ, ರೋಡ್‌ ಶೋ ನಡೆಸಿದ್ದಾರೆ. ಇನ್ನು ಜೆಡಿಎಸ್‌ ಮುಖಂಡರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಹಲವು ದಿನ ಸ್ಥಳದಲ್ಲೇ ಉಳಿದು ಮನೆ-ಮನ ತಲುಪುವ ಪ್ರಯತ್ನ ಮಾಡಿದ್ದಾರೆ.

ಕೊನೆ ದಿನವೂ ಅಬ್ಬರ:

ಬಹಿರಂಗ ಪ್ರಚಾರದ ಕೊನೇ ದಿನವೂ ಮೂರೂ ಪಕ್ಷಗಳು ಎರಡು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನೇ ನಡೆಸಿದ್ದು, ಹಾನಗಲ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 10 ಸಾವಿರಕ್ಕೂ ಹೆಚ್ಚು ಮಂದಿ ಸೇರಿಸಿ ರೋಡ್‌ ಶೋ ನಡೆಸಿದ್ದಾರೆ. ಕಾಂಗ್ರೆಸ್‌ನವರು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ ಉಪಸ್ಥಿತಿಯಲ್ಲಿ ಸಮಾವೇಶ ನಡೆಸಿದ್ದಾರೆ. ಇನ್ನು ಸಿಂದಗಿಯಲ್ಲಿ ಬಿಜೆಪಿಯವರು ಪಕ್ಷದ ರಾಜ್ಯಾಧ್ಯಕ್ಷ ಕಟೀಲ್‌ ನೇತೃತ್ವದಲ್ಲಿ, ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಮತ್ತಿತರರ ಉಪಸ್ಥಿತಿಯಲ್ಲಿ ಹಾಗೂ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರೊಂದಿಗೆ ಜೆಡಿಎಸ್‌ನವರು ರೋಡ್‌ ಶೋ ನಡೆಸಿದ್ದಾರೆ.

ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಬಾವಿಯಲ್ಲಿಟ್ಟಿದೆ: ಬೊಮ್ಮಾಯಿ

ಉಪಚುನಾವಣಾ ಪ್ರಚಾರದ ಕೊನೆಯ ದಿನವಾದ ಬುಧವಾರದಂದು ತನ್ನ ತವರು ಜಿಲ್ಲೆ ಹಾವೇರಿಯ ಹಾನಗಲ್‌ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿದಂತೆ ತಿರುಗಿದ ಅವರು ಮಾಸನಕಟ್ಟೆ, ಕೂಡಲ, ನರೇಗಲ್ಲ, ಕಾಡಶೆಟ್ಟಿಹಳ್ಳಿ, ಬಮ್ಮನಹಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಾತ್ರವಲ್ಲದೆ ಹಾನಗಲ್‌ ಪಟ್ಟಣದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆಗೂಡಿ ರೋಡ್‌ ಶೋವನ್ನೂ ನಡೆಸಿದರು. ಈ ವೇಳೆ ವಿರೋಧ ಪಕ್ಷ ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ನಡೆಸಿಕೊಂಡ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾನಗಲ್ಲ ಕ್ಷೇತ್ರದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಇದರಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ ಎಂದು ಭವಿಷ್ಯ ನುಡಿದರು.

ಜಮೀರ್‌ ಅಹ್ಮದ್‌ ಅವರು ಸಾರ್ವಜನಿಕವಾಗಿ ಮತ ಕೇಳದೇ ಕೇವಲ ಒಂದೇ ಸಮುದಾಯದ ಮತ ಕೇಳಿದ್ದಾರೆ. ಕಾಂಗ್ರೆಸ್‌ನವರಿಗೆ ಕೇವಲ ಅಲ್ಪಸಂಖ್ಯಾತರ ಮತ ಅಷ್ಟೇ ಬೇಕು. ಗುತ್ತಿಗೆಗೆ ಪಡೆದಂತೆ ಬಳಕೆ ಮಾಡಿಕೊಳ್ಳುತ್ತಾರೆ. ಮತ ಬ್ಯಾಂಕ್‌ ಎಂದು ತಿಳಿದುಕೊಂಡಿದ್ದಾರೆ. ಅಲ್ಪಸಂಖ್ಯಾತ ಬಾಂಧವರು ತಮ್ಮ ತಾಕತ್ತನ್ನು ತೋರಿಸಬೇಕು. ಕಾಂಗ್ರೆಸ್‌ಗೆ ಒಮ್ಮೆ ಸರಿಯಾಗಿ ಪಾಠ ಕಲಿಸಬೇಕು. ಆಗ ನಿಮ್ಮ ಮಹತ್ವ ಗೊತ್ತಾಗುತ್ತದೆ. ಆನಂತರ ನಿಮ್ಮ ಬಗ್ಗೆ ಚಿಂತನೆ ಮಾಡುತ್ತಾರೆ ಎಂದು ಹೇಳಿದರು

click me!