ಲೋಕಸಭಾ ಚುನಾವಣೆ 2024: ತುಮಕೂರಲ್ಲಿ ಹೊರಗಿನವರು ವರ್ಸಸ್ ಒಳಗಿನವರ ಜಿದ್ದಾಜಿದ್ದಿ..!

Published : Apr 16, 2024, 11:17 AM ISTUpdated : Apr 16, 2024, 11:18 AM IST
ಲೋಕಸಭಾ ಚುನಾವಣೆ 2024: ತುಮಕೂರಲ್ಲಿ ಹೊರಗಿನವರು ವರ್ಸಸ್ ಒಳಗಿನವರ ಜಿದ್ದಾಜಿದ್ದಿ..!

ಸಾರಾಂಶ

ಕಳೆದ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನೇ ಸೋಲಿಸಿದ ತುಮಕೂರಿನ ಮತದಾರರು, ಈ ಬಾರಿ ಯಾರನ್ನು ಸಂಸತ್ ಗೆ ಕಳುಹಿಸುತ್ತಾರೆ ಎಂಬ ಕುತೂಹಲವಿದೆ.

ಉಗಮ ಶ್ರೀನಿವಾಸ್

ತುಮಕೂರು(ಏ.16):  ಕಲ್ಪತರು ನಾಡು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ರಂಗೇರಿದ್ದು, ಸ್ಥಳೀಯರು ಹಾಗೂ ಹೊರಗಿನವರು ಎಂಬ ಕೂಗು ಕೂಡ ಜೋರಾಗಿ ಕೇಳಿ ಬರುತ್ತಿದೆ. ಕಳೆದ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನೇ ಸೋಲಿಸಿದ ತುಮಕೂರಿನ ಮತದಾರರು, ಈ ಬಾರಿ ಯಾರನ್ನು ಸಂಸತ್ ಗೆ ಕಳುಹಿಸುತ್ತಾರೆ ಎಂಬ ಕುತೂಹಲವಿದೆ.

ಹಾಲಿ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಅವರು ವಯಸ್ಸಿನ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಹಲವಾರು ಹೊಸ ಮುಖಗಳು ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್, ವಿ.ಸೋಮಣ್ಣಗೆ ಮಣೆ ಹಾಕಿದ್ದರಿಂದ ಹೊರಗಿನವರು ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧಕ್ಕೂ ಕಾರಣವಾಯಿತು.

ಸಿದ್ದರಾಮಯ್ಯ ಸಿಎಂ ಆಗಲು 86 ಶಾಸಕರ ಸಹಿ ಹಾಕಿಸಿಕೊಟ್ಟಿದ್ದು ನಾನೇ: ಸೋಮಣ್ಣ

ಕಾಂಗ್ರೆಸ್ ಸ್ಥಿತಿ ಕೂಡ ಬಿಜೆಪಿಗಿಂತ ಭಿನ್ನವಾಗಿಲ್ಲ. ಕಳೆದ ಬಾರಿ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿ ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಕ್ಷೇತ್ರ ಬಿಟ್ಟು ಕೊಡಬೇಕಾಯಿತು. ಇದರಿಂದ ಬೇಸತ್ತ ಮುದ್ದಹನುಮೇಗೌಡ ಬಿಜೆಪಿಯತ್ತ ಮುಖ ಮಾಡಿದ್ದರು. ಆದರೆ, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದು, ಹಲವಾರು ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.

ಕ್ಷೇತ್ರದ ಕಿರು ಪರಿಚಯ:

ಕ್ಷೇತ್ರದ ಇತಿಹಾಸವನ್ನು ಗಮನಿಸುವುದಾದರೆ ಈವರೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 11 ಬಾರಿ ಗೆಲುವು ಸಾಧಿಸಿದೆ. ಆದರೆ, ಎರಡು ದಶಕಗಳಿಂದ ಈಚೆಗೆ ಈ ಕ್ಷೇತ್ರದಲ್ಲಿ ಬಿಜೆಪಿಯೇ ಪ್ರಾಬಲ್ಯ ಮೆರೆದಿದೆ. 1996ರ ಚುನಾವಣೆಯಲ್ಲಿ ಕೊನೆಯ ಬಾರಿಗೆ ಜನತಾದಳದಿಂದ ಸಿ.ಎನ್.ಭಾಸ್ಕರಪ್ಪ ಗೆಲುವು ಸಾಧಿಸಿ‌ದ್ದರು. ನಂತರ ದಳಪತಿಗಳು ಇಲ್ಲಿಂದ ಲೋಕಸಭೆ ಪ್ರವೇಶಿಸಲು ಇದುವರೆಗೆ ಸಾಧ್ಯವಾಗಿಲ್ಲ.

2004ರಲ್ಲಿ ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ, 2009ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜಿ.ಎಸ್.ಬಸವರಾಜು, 2013ರಲ್ಲಿ ಮುದ್ದಹನುಮೇಗೌಡ ಗೆಲುವು ಸಾಧಿಸಿದ್ದರು. 2014ರಲ್ಲಿ ಮೋದಿ ಅಲೆಯ ನಡುವೆಯೂ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡ, 74 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಿ.ಎಸ್.ಬಸವರಾಜು ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು. 2019ರಲ್ಲಿ ದೇವೇಗೌಡರನ್ನು ಸೋಲಿಸಿ, ಬಿಜೆಪಿಯಿಂದ ಜಿ.ಎಸ್. ಬಸವರಾಜು ಐದನೇ ಬಾರಿಗೆ ಸಂಸತ್‌ ಪ್ರವೇಶಿಸಿದ್ದರು.

ಪ್ರಚಾರದ ಅಬ್ಬರ:

ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡೂ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಗೆಲ್ಲುವ ವಿಶ್ವಾಸದಲ್ಲಿವೆ. ವೈಯಕ್ತಿಕ ವರ್ಚಸ್ಸು, ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿ ಮುದ್ದಹನುಮೇಗೌಡರಿದ್ದಾರೆ. ಇನ್ನು, ಮಾಜಿ ಸಚಿವರಾಗಿರುವ ಸೋಮಣ್ಣ, ಸ್ವಂತ ವರ್ಚಸ್ಸು, ಮೋದಿಯವರ ಅಭಿವೃದ್ಧಿ ಕಾರ್ಯಗಳ ಮೇಲೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಸೋಮಣ್ಣ ಪರವಾಗಿ ಖುದ್ದು ದೇವೇಗೌಡ, ವಿಜಯೇಂದ್ರ, ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಅಖಾಡಕ್ಕಿಳಿದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಕೊಂಡಿರುವ ಮಾಧುಸ್ವಾಮಿಯವರು ಅಷ್ಟಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿಲ. ಇನ್ನು ಕಾಂಗ್ರೆಸ್‌ನ ಮುದ್ದಹನುಮೇಗೌಡರ ಪರ ಸಿದ್ದರಾಮಯ್ಯ, ಡಿಕೆಶಿವಕುಮಾರ್‌, ಪರಮೇಶ್ವರ್‌ ಮತಯಾಚನೆ ಮಾಡಿದ್ದಾರೆ.

ಮತದಾರರ ವಿವರ:

ಒಟ್ಟು ಮತದಾರರು -16,17, 521.
ಪುರುಷರು - 8,13,103.
ಮಹಿಳೆಯರು - 8,04,118.
ಇತರರು - 3೦೦

ಜಾತಿ ಲೆಕ್ಕಾಚಾರ:

ಮತದಾರರ ಪೈಕಿ, ಲಿಂಗಾಯತರು 3,89,000, ಒಕ್ಕಲಿಗರು 3,14,000, ಎಸ್‌ಸಿ 2,75,000, ಎಸ್‌ಟಿ 1,40,000, ಕುರುಬರು 1,35,000, ಮುಸ್ಲಿಮರು 1,98,000, ಇತರರು 1,66,521ಇದ್ದಾರೆ. ಒಕ್ಕಲಿಗ, ಲಿಂಗಾಯತರ ಮತಗಳೇ ನಿರ್ಣಾಯಕವಾಗಿದ್ದರೂ ಗೆಲುವಿನ ದಡ ಸೇರಲು ಅಹಿಂದ ಮತಗಳು ಅತ್ಯವಶ್ಯ.

ಮೋದಿಗೆ ಅಧಿಕಾರ ಸಿಕ್ಕರೆ ರಾಜ್ಯದ ಪ್ರಗತಿ ಕುಂಠಿತ: ಸಿಎಂ ಸಿದ್ದರಾಮಯ್ಯ

2019ರ ಫಲಿತಾಂಶ:

ಜಿ.ಎಸ್ ಬಸವರಾಜು - ಬಿಜೆಪಿ - 5,96,127.
ಎಚ್‌.ಡಿ.ದೇವೇಗೌಡ - ಜೆಡಿಎಸ್‌ - 5,82,788.

ಅಭ್ಯರ್ಥಿಗಳ ಪರಿಚಯ:

ವಿ. ಸೋಮಣ್ಣ:

ಬಿಬಿಎಂಪಿ ಚುನಾವಣೆಯಿಂದ ರಾಜಕೀಯ ಜೀವನ ಆರಂಭಿಸಿರುವ ವಿ. ಸೋಮಣ್ಣ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಿಂಗಾಯತ ಸಮುದಾಯದ ನಾಯಕರಾಗಿರುವ ಇವರು ಎಲ್ಲ ಸಮುದಾಯದ ಮಠ ಮಾನ್ಯಗಳ ಜೊತೆ ಗುರುತಿಸಿಕೊಂಡಿದ್ದಾರೆ. ಮುನ್ನುಗ್ಗುವ ಛಾತಿಯನ್ನು ಹೊಂದಿರುವ ಸೋಮಣ್ಣ ಅವರಿಗೆ ಎಲ್ಲ ಪಕ್ಷದ ಮುಖಂಡರ ಜೊತೆ ಒಡನಾಟವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿ ಪರಾಭವಗೊಂಡಿದ್ದು ಈಗ ಸಂಸತ್ ಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಮುದ್ದಹನುಮೇಗೌಡ:

ಮೂಲತಃ ತುಮಕೂರು ಜಿಲ್ಲೆಯವರಾದ ಮುದ್ದಹನುಮೇಗೌಡ ನ್ಯಾಯಾಧೀಶರಾಗಿದ್ದರು. ಆ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದರು. ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಸಂಸತ್ ಸದಸ್ಯರಾಗಿದ್ದರು. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸೌಮ್ಯ ಸ್ವಭಾವದ ಮುದ್ದಹನುಮೇಗೌಡರು ಕಳೆದ ಬಾರಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟು ಕೊಟ್ಟಿದ್ದರು. ಬಳಿಕ, ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಈಗ ಪುನಃ ಕಾಂಗ್ರೆಸ್ ಗೆ ಮರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ