ಪಕ್ಷದ ವಿರುದ್ಧ ಬಂಡಾಯ ಹೇಳಿಕೆ: ಬಿಜೆಪಿ ಸಭೆಯಲ್ಲಿ ಯತ್ನಾಳ್‌ ವಿರುದ್ಧ ಆಕ್ರೋಶ

By Kannadaprabha NewsFirst Published Dec 28, 2023, 6:26 AM IST
Highlights

ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವವರ ಬಗ್ಗೆ ಹೈಕಮಾಂಡ್‌ ಗಮನಹರಿಸಲಿದೆ: ವಿಜಯೇಂದ್ರ 

ಬೆಂಗಳೂರು(ಡಿ.28):  ರಾಜ್ಯ ಬಿಜೆಪಿ ಪದಾಧಿಕಾರಿಗಳ ಮೊದಲ ಸಭೆಯಲ್ಲಿಯೇ ಪಕ್ಷದ ವಿರುದ್ಧ ಬಂಡಾಯ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬಿ.ವೈ.ವಿಜಯೇಂದ್ರ ಅವರು ಬುಧವಾರ ರಾಜ್ಯ ಪದಾಧಿಕಾರಿಗಳ ಜತೆ ಸಭೆ ನಡೆಸಿದರು. ಪಕ್ಷಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಕುರಿತು ಕೆಲವು ಪದಾಧಿಕಾರಿಗಳು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.

40 ಸಾವಿರ ಕೋಟಿ ರು. ಮೊತ್ತದ ಕೋವಿಡ್‌ ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಇಂತಹ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್‌ ತರುವಂತಹದ್ದು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಸುಮಾರು ಅರ್ಧತಾಸುಗಿಂತ ಹೆಚ್ಚು ಕಾಲ ಯತ್ನಾಳ್‌ ಕುರಿತೇ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲಿಲ್ಲ: ಯತ್ನಾಳ

ಯತ್ನಾಳ್‌ ಅವರು ಕಾಂಗ್ರೆಸ್‌ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ಕಾಂಗ್ರೆಸ್ಸಿಗರು ನಮ್ಮ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ.

ವಿಜಯಪುರದಲ್ಲಿ ಅವರೊಬ್ಬರು ಮಾತ್ರ ಗೆದ್ದಿದ್ದು, ಉಳಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸೋಲಾಗಿದೆ. ಇದಕ್ಕೆ ಕಾರಣ ಯತ್ನಾಳ್ ಅವರ ಹೊಂದಾಣಿಕೆ ರಾಜಕಾರಣ. ಪಕ್ಷ ಕಟ್ಟಿದವರ ವಿರುದ್ಧ ಹರಿಹಾಯುತ್ತಿರುವುದು ಸರಿಯಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪದಾಧಿಕಾರಿಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವವರ ಬಗ್ಗೆ ಹೈಕಮಾಂಡ್‌ ಗಮನಹರಿಸಲಿದೆ ಎಂದರು ಎಂದು ಮೂಲಗಳು ತಿಳಿಸಿವೆ.

click me!