
ಬೆಂಗಳೂರು (ಜೂ.26): ಬಿಜೆಪಿಯಲ್ಲಿ ಚುನಾವಣಾ ಸೋಲಿನ ಪ್ರತಿಧ್ವನಿ ಈಗ ಹಂತ ಹಂತವಾಗಿ ಹೊರಬೀಳುತ್ತಿದ್ದು, ನಮ್ಮವರೇ ನಮ್ಮ ಸೋಲಿಗೆ ಪ್ರಯತ್ನಿಸಿದರು ಎಂಬ ಆಕ್ರೋಶ ಪಕ್ಷದ ಅಭ್ಯರ್ಥಿಗಳಿಂದ ಹಾಗೂ ಕಾರ್ಯಕರ್ತರಿಂದ ವ್ಯಕ್ತವಾಗಿದೆ. ಭಾನುವಾರ ನಡೆದ ಬೆಂಗಳೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲೇ ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಸಮ್ಮುಖದಲ್ಲಿ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಹಲವು ಮುಖಂಡರು ಬಹಿರಂಗವಾಗಿಯೇ ಹರಿಹಾಯ್ದಿದ್ದರು.
ಧಮ್ ಇದ್ರೆ 15 ಕೆ.ಜಿ. ಅಕ್ಕಿ ಕೊಡಿ: ಸಿದ್ದುಗೆ ಸವಾಲ್ ಹಾಕಿದ ಮಾಜಿ ಸಿಎಂ ಬೊಮ್ಮಾಯಿ
ಬೆನ್ನಿಗೆ ಚೂರಿ: ಶಾಸಕ ಮುನಿರಾಜು ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಲೇಬೇಕು ಎಂದು ಪಣ ತೊಟ್ಟು ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಿದರು. ಆದರೆ ಕೆಲವರು ಬೆನ್ನಿಗೆ ಚೂರಿ ಹಾಕಿದರು. ಯಾರು ಬೆನ್ನಿಗೆ ಚೂರಿ ಹಾಕಿದರೋ ಅವರನ್ನು ಪಕ್ಷದಿಂದ ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕಬೇಕು. ಅಂತಹವರನ್ನು ಬೆಳೆಸುವುದು ಪಕ್ಷಕ್ಕೆ ಮುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆನ್ನಿಗೆ ಚೂರಿ ಹಾಕುವ ಕಾರ್ಯಕರ್ತರಿಗೆ ಕೆಲವರು ಹೂವಿನ ಹಾರ ಹಾಕುತ್ತಾರೆ, ಸನ್ಮಾನ ಮಾಡುತ್ತಾರೆ. ಅಂತಹ ಕಾರ್ಯಕರ್ತರನ್ನು ಪಕ್ಷದಿಂದಲೇ ಹೊರ ಹಾಕಬೇಕು. ಇಂತಹವರಿಂದಲೇ ಪಕ್ಷಕ್ಕೆ ಕೆಟ್ಟಹೆಸರು ಎಂದು ತರಾಟೆ ತೆಗೆದುಕೊಂಡರು.
ಮೇಣದ ಬತ್ತಿಯಂತೆ ಉರಿದು ಪಕ್ಷಕ್ಕೆ ಬೆಳಕು ನೀಡಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು. ರಾಜ್ಯದಲ್ಲಿ ಬಿಜೆಪಿ ಎರಡು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದ್ದ ಕಾಲದಿಂದ ಇಲ್ಲಿಯವರೆಗೂ ಪಕ್ಷವನ್ನು ಕಟ್ಟಿಬೆಳೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಈ ಬಗ್ಗೆ ಕೇಂದ್ರ ನಾಯಕರು ಅವಲೋಕನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ‘ಚುನಾವಣೆಯಲ್ಲಿ ಪಕ್ಷಕ್ಕೆ ಚೂರಿ ಹಾಕಿದವರನ್ನು ಹೊರ ಹಾಕಬೇಕು. ಒಂದು ಉದಾಹರಣೆ ಹೇಳಿ ನನ್ನ ಮಾತು ಮುಗಿಸುತ್ತೇನೆ. ನನ್ನ ಕ್ಷೇತ್ರದಲ್ಲಿ...’ ಎಂದು ಮುನಿರಾಜು ಹೇಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಕೆಲವರು ಗದ್ದಲ ಆರಂಭಿಸಿದರು. ನೀವು ಚೂರಿ ಹಾಕಿದರೆ ನಡೆಯುತ್ತದಾ ಎಂದು ಮುಖಂಡರೊಬ್ಬರು ಏರಿದ ಧ್ವನಿಯಲ್ಲಿ ಪ್ರಶ್ನಿಸಿದಾಗ ಸಭೆ ಗೊಂದಲದ ಗೂಡಾಯಿತು. ಆಗ ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ತಮ್ಮೇಶ್‌ಗೌಡ ಆಕ್ರೋಶ: ಕಾಂಗ್ರೆಸ್ ಪರ ಕೆಲಸ ಮಾಡಿರುವ ಪಕ್ಷದ ಮುಖಂಡ ಮುನೀಂದ್ರಕುಮಾರ್ ಅವರನ್ನು ಹೊರಗೆ ಕಳುಹಿಸುವಂತೆ ಬ್ಯಾಟರಾಯನಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ತಮ್ಮೇಶ್‌ಗೌಡ ಪಟ್ಟು ಹಿಡಿದ ಪ್ರಸಂಗವೂ ನಡೆಯಿತು. ಸಭೆ ಆರಂಭಕ್ಕೂ ಮೊದಲು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಎದುರು ತಮ್ಮೇಶ್‌ಗೌಡ ಆಕ್ರೋಶ ಹೊರಹಾಕಿದರು. ಇದೇ ವೇಳೆ ಯಡಿಯೂರಪ್ಪ ಆಗಮಿಸಿದರು. ಅವರನ್ನು ಕಂಡ ಬಳಿಕ ಕಾಲಿಗೆರಗಿ ನಮಸ್ಕರಿಸಿದ ತಮ್ಮೇಶ್, ನಮ್ಮ ಪಕ್ಷದ ವಿರುದ್ಧ ಕೆಲಸ ಮಾಡಿದ ಮುನಿಂದ್ರಕುಮಾರ್ ಅವರನ್ನು ವೇದಿಕೆ ಮೇಲೆ ಕೂರಿಸಿದ್ದಾರೆ. ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದರು. ಯಡಿಯೂರಪ್ಪ ಅವರ ಮನವೊಲಿಕೆ ಬಳಿಕ ತಮ್ಮೇಶ್‌ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಷ್ಟ ಹೇಳಿಕೊಳ್ಳಿ, ಗಲಾಟೆ ಮಾಡಿದ್ರೆ ಸಹಿಸಲ್ಲ: ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮುನಿರಾಜು ಆಗ್ರಹಿಸಿದಾಗ, ಸಭೆಯಲ್ಲಿದ್ದ ಕೆಲವು ಕಾರ್ಯಕರ್ತರು ಎದ್ದುನಿಂತು ನೀವು ಚೂರಿ ಹಾಕಿದರೆ ನಡೆಯುತ್ತದಾ ಎಂದು ಪ್ರಶ್ನಿಸಿದರು. ಆಗ ಗದ್ದಲದ ವಾತಾವರಣ ನಿರ್ಮಾಣವಾಗಿ ಯಡಿಯೂರಪ್ಪ ಮಧ್ಯಪ್ರವೇಶಿಸಿದರು.
ಕೈಗಾರಿಕೋದ್ಯಮಿಗಳ ಪ್ರತಿಭಟನೆ, ವಿದ್ಯುತ್ ನೀತಿ ಹಳಿ ತಪ್ಪಿರುವುದಕ್ಕೆ ಸಾಕ್ಷಿ: ಮಾಜಿ ಸಿಎಂ ಬೊಮ್ಮಾಯಿ
ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿ ಕೈಗೆ ಮೈಕ್ ತೆಗೆದುಕೊಂಡು ಸಿಟ್ಟಿನಿಂದಲೇ ಮಾತನಾಡಿದ ಯಡಿಯೂರಪ್ಪ, ‘ನೀವು ಸುಮ್ಮನಿರದಿದ್ದರೆ ನಾನು ಹೊರಟು ಹೋಗುತ್ತೇನೆ. ನಿಮಗೆ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂಬ ಇಚ್ಛೆ ಇದ್ದರೆ ಬಂದು ಹೇಳಿ. ನಾನು ಅರ್ಧ ಗಂಟೆ ಇಲ್ಲೇ ಇರುತ್ತೇನೆ’ ಎಂದು ಕಾರ್ಯಕರ್ತರಿಗೆ ಆತ್ಮೀಯ ಶೈಲಿಯಲ್ಲಿ ಗದರಿದರು. ‘ಇದು ಬಿಜೆಪಿ ಸಭೆ. ನಾಳೆ ಮಾಧ್ಯಮದಲ್ಲಿ ಇದೇ ಸುದ್ದಿ ಬರುತ್ತದೆ. ಮನವಿ ಮಾಡುತ್ತೇನೆ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುತ್ತೇನೆ. ಪಕ್ಷದ ಸಂಘಟನೆ ಬಲಪಡಿಸಿ. ಎಲ್ಲರೂ ಸುಮ್ಮನಿರಿ’ ಎಂದು ಹೇಳಿ ಕೊನೆಗೆ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.