
ಬೆಂಗಳೂರು (ಸೆ.23): ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎನ್‌ಡಿಎ ಜತೆ ಮೈತ್ರಿ ಅಧಿಕೃತವಾಗುತ್ತಿದ್ದಂತೆ ಜೆಡಿಎಸ್‌ನ ಕೆಲವು ಅಲ್ಪಸಂಖ್ಯಾತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷವನ್ನು ತೊರೆಯುವ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷದ ಹಿರಿಯ ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫಿಉಲ್ಲಾ ಅವರು ಪಕ್ಷದಲ್ಲಿನ ಎಲ್ಲಾ ಹುದ್ದೆಗಳಿಗೆ ಮತ್ತು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನುಳಿದಂತೆ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎನ್.ಎಂ.ನಬಿ, ರಾಜ್ಯ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್, ಯುವ ಘಟಕದ ಕಾರ್ಯಾಧ್ಯಕ್ಷ ಎನ್.ಎಂ.ನೂರ್, ಮುಖಂಡರಾದ ಮೊಹಿದ್ ಅಲ್ತಾಫ್ ಸಹ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮೈತ್ರಿ ಪ್ರಕ್ರಿಯೆ ಅಧಿಕೃತಗೊಳಿಸಿದ ಬೆನ್ನಲ್ಲೇ ನಗರದ ಕುಮಾರಕೃಪಾದಲ್ಲಿ ಪಕ್ಷದ ಅಲ್ಪಸಂಖ್ಯಾತ ನಾಯಕರು ಸಭೆ ನಡೆಸಿ ಪಕ್ಷದ ವರಿಷ್ಠರ ನಡೆಯನ್ನು ವಿರೋಧಿಸಿದರು. ಸುಧೀರ್ಘ ಚರ್ಚೆಯ ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡರು. ಸಯ್ಯದ್ ಶಫಿಉಲ್ಲಾ ಅವರು ಪಕ್ಷದ ಹಿರಿಯ ರಾಜ್ಯ ಉಪಾಧ್ಯಕ್ಷ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದು ರಾಜೀನಾಮೆ ಪತ್ರ ರವಾನಿಸಿದ್ದಾರೆ. ಇನ್ನುಳಿದವರು ಶೀಘ್ರದಲ್ಲಿಯೇ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ.
ಈ ಕುರಿತು ''ಕನ್ನಡಪ್ರಭ'' ಜತೆ ಮಾತನಾಡಿದ ಸಯ್ಯದ್ ಶಫಿಉಲ್ಲಾ, ಬಿಜೆಪಿ ಜತೆಗಿನ ಮೈತ್ರಿಗೆ ಈ ಮೊದಲೇ ವಿರೋಧ ವ್ಯಕ್ತಪಡಿಸಿದ್ದೇವು. ಆದರೂ ಬಿಜೆಪಿ ಜತೆ ಕೈ ಜೋಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ನಮ್ಮ ವಿರೋಧ ಇರುವ ಕಾರಣ ಪಕ್ಷವನ್ನು ತೊರೆಯಲು ಹಲವು ಮುಖಂಡರು ತೀರ್ಮಾನಿಸಿದ್ದಾರೆ. ನಾನು ಈಗಾಗಲೇ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ
ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಇಲ್ಲದ ಕುತಂತ್ರ ನಡೆಸಿತು. ಅಲ್ಲದೇ, ಬಿಜೆಪಿ ಜತೆ ಹೋಗಲು ನಮಗೆ ಇಷ್ಟವಿಲ್ಲ. ಮಣಿಪುರ ಸೇರಿದಂತೆ ದೇಶದ ಹಲವೆಡೆ ಹಿಂಸಾಚಾರ ನಡೆದರೂ ಅದನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಿದ್ದರೂ ಬಿಜೆಪಿ ಜತೆ ಹೋಗಿರುವುದು ಸಮಂಜಸವಲ್ಲ. ಹೀಗಾಗಿ ವರಿಷ್ಠರ ನಡೆ ವಿರೋಧಿಸಿ ಪಕ್ಷವನ್ನು ತೊರೆಯುತ್ತಿದ್ದೇವೆ. ಇನ್ನು ಹಲವು ಮುಖಂಡರು ಪಕ್ಷದ ತೊರೆಯಲು ಮುಂದಾಗಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ದಿನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.