ಮುಂದಿನ ಬಜೆಟ್‌ನಲ್ಲಿ ವೃದ್ಧಾಪ್ಯ ವೇತನ ಏರಿಕೆ: ಸಿಎಂ ಸಿದ್ದು ಘೋಷಣೆ

By Kannadaprabha NewsFirst Published Oct 2, 2023, 4:45 AM IST
Highlights

ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

ಬೆಂಗಳೂರು (ಅ.02): ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು. ಹಿರಿಯ ನಾಗರಿಕರಿಗೆ ಸದ್ಯ 1200 ರು. ಮಾಸಾಶನ ನೀಡಲಾಗುತ್ತಿದೆ. 

ಇದನ್ನು 2000 ರು.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಳ ಮಾಡುವ ಕೆಲಸ ಮಾಡುತ್ತೇನೆ. ಆದರೆ ಎಷ್ಟು ಹೆಚ್ಚಳ ಮಾಡುತ್ತೇನೆ ಎಂದು ಈಗಲೇ ಹೇಳುವುದಿಲ್ಲ. ಪರಿಶೀಲನೆ ಮಾಡಿ ಮುಂದಿನ ಬಜೆಟ್‌ನಲ್ಲಿ ಮಾಸಾಶನ ಹೆಚ್ಚಳದ ಘೋಷಣೆ ಮಾಡುತ್ತೇನೆ ಎಂದು ಹೇಳಿದರು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು ನೀವೆಲ್ಲಾ ಎಷ್ಟು ವರ್ಷ ಬದುಕುತ್ತೀವಿ? ಬದುಕಿದಷ್ಟೇ ದಿನ ಸಾರ್ಥಕ ಬದುಕು ನಡೆಸುವುದು, ಮನುಷ್ಯತ್ವದಿಂದ ಬಾಳುವುದು ಬಹಳ ಮುಖ್ಯ ಎಂದರು. 

ಅಲ್ಪಸಂಖ್ಯಾತರಿಗೆ 10000 ಕೋಟಿ ಅನುದಾನ ನೀಡುವೆ: ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲ್, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್.ಗಿರಿರಾಜ್ ಅವರನ್ನು ಮುಖ್ಯಮಂತ್ರಿಗಳು ಸನ್ನಾನಿಸಿ ಇವರೆಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂದು ಮೆಚ್ಚುಗೆ ಸೂಚಿಸಿದರು. ಇದಕ್ಕೂ ಮುನ್ನ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಸ್ತುತ 48 ಲಕ್ಷ ಹಿರಿಯ ನಾಗರಿಕರಿಗೆ ಮಾಸಿಕ 1200 ವೃದ್ಧಾಪ್ಯವೇತನ ನೀಡಲಾಗುತ್ತಿದ್ದು, ಅದನ್ನು 2000 ರು.ಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. 

ಬಿಜೆಪಿ-ಜೆಡಿಎಸ್ ಮೈತ್ರಿ: ಅಸಮಾಧಾನ ಹೋಗಲಾಡಿಸಲು ಶಾಸಕರು, ಎಂಎಲ್‌ಸಿಗಳ ಸಭೆ ನಡೆಸಿದ ದೇವೇಗೌಡರು!

ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ರಾಜ್ಯದ ಕೆಲ ವೃದ್ಧಾಶ್ರಮದಲ್ಲಿ ನ್ಯೂನತೆಗಳಿರುವುದನ್ನು ಗಮನಿಸಿದ್ದೇನೆ. ಶೀಘ್ರ ಅವುಗಳನ್ನು ಪರಿಹರಿಸಲಾಗುವುದು. ಹಿರಿಯ ನಾಗರಿಕರಿಗೆ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್‌, ನಿರ್ದೇಶಕ ಎನ್‌.ಸಿದ್ದೇಶ್ವರ ಮತ್ತಿತರರು ಉಪಸ್ಥಿತರಿದ್ದರು.

click me!