ಮುರಿದ ಗುಡಿಸಲಿನಲ್ಲೇ ವಾಸಿಸಬೇಕಾದ ಸ್ಥಿತಿಯಲ್ಲಿದ್ದ ವೃದ್ಧೆ, ಮೊಮ್ಮಗನಿಗೆ ಸೂರಿನ ಜತೆಗೆ ಈ ಕುಟುಂಬಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಒದಗಿಸಿಕೊಡಲಾಗುವುದೆಂದು ತಿಳಿಸಿದ ಅಧಿಕಾರಿಗಳು
ಶಹಾಪುರ(ಫೆ.04): ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಖಾಲಿ ಜಾಗವಿದ್ದರೂ ಮನೆ ನಿರ್ಮಿಸಿಕೊಳ್ಳಲಾಗದೆ, ಮುರಿದ ಗುಡಿಸಲಿನಲ್ಲೇ ವಾಸಿಸಬೇಕಾದ ಸ್ಥಿತಿಯಲ್ಲಿದ್ದ ವೃದ್ಧೆ, ಮೊಮ್ಮಗನಿಗೆ ಸೂರಿನ ಜತೆಗೆ ಈ ಕುಟುಂಬಕ್ಕೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಒದಗಿಸಿಕೊಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆ2 ರಂದು ಕನ್ನಡಪ್ರಭದಲ್ಲಿ ಅಜ್ಜಿ ಮೊಮ್ಮಗನಿಗೆ ಬೇಕಿದೆ ವಸತಿ ಭಾಗ್ಯ ಎಂಬ ಶೀರ್ಷಿಕೆಯಡಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಆಡಳಿತ, ತಾಪಂ ಅಧಿಕಾರಿಗಳು ಯಕ್ಷಿಂತಿ ಗ್ರಾಮಕ್ಕೆ ತೆರಳಿ ಬಸಮ್ಮಳ ಕುಟುಂಬದ ಪರಿಸ್ಥಿತಿ ಕಣ್ಣಾರೆ ಕಂಡು, ವಡಗೇರಾ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಅವರು ತಕ್ಷಣ ಆ ವೃದ್ಧ ಮಹಿಳೆಗೆ ಸಂಧ್ಯಾ ಸುರಕ್ಷ ಯೋಜನೆ ಮಂಜೂರಾತಿ ಆದೇಶ ಪತ್ರ ನೀಡಿದರು. ಅಲ್ಲದೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಮಾದರಿ ಮನೆ ಅಡಿಯಲ್ಲಿ 15 ದಿನದೊಳಗಾಗಿ ಮನೆ ನಿರ್ಮಿಸಿ ಕೊಡುವದಾಗಿ ಕನ್ನಡಪ್ರಭಕ್ಕೆ ತಿಳಿಸಿದರು.
undefined
ಶಹಾಪುರ: ಅಜ್ಜಿ-ಮೊಮ್ಮಗನಿಗೆ ಬೇಕಿದೆ ವಸತಿ ಭಾಗ್ಯ..!
ಮಳೆ ಬಂದರೆ ಗುಡಿಸಿಲಲ್ಲಿ ನೀರು ಸೋರುತ್ತಿತ್ತು. ಅಜ್ಜಿಗೆ ಮನೆ ನಿರ್ಮಿಸಿಕೊಳ್ಳುವುದೇ ಚಿಂತೆಯಾಗಿತ್ತು. ಕುಟುಂಬಕ್ಕೆ ತುರ್ತು ಸೂರಿನ ಅವಶ್ಯಕತೆ ಇತ್ತು. ಕ್ಷಣ ಕ್ಷಣಕ್ಕೂ ತೊಂದರೆ ಅನುಭವಿಸುತ್ತಾ ಕಷ್ಟದ ಬದುಕು ಸಾಗಿಸುತ್ತಿರುವ ಈ ಕುಟುಂಬಕ್ಕೆ ಸೂರಿನ ಜೊತೆ ಸರ್ಕಾರಿ ಸೌಲಭ್ಯ ಒದಗಿಸಿ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯ ಕೂಡ ಎಂದು ಗಮನ ಸೆಳೆಯಲಾಗಿತ್ತು.
ಸಾಲಿ ಓದಿ ಶಾಣೆ ಆಗಬೇಕಾಗಿದ್ದ ಇರೋ ಒಬ್ಬ ಮೊಮ್ಮಗ ನನ್ನನ್ನ ನೋಡಿಕೊಳ್ಳುವುದರಲ್ಲಿ ಮಗುವಿನ ಜೀವನ ಹಾಳಾಗಿದೆ. ನಾನು ಸಾಯೋದ್ರೊಳಗಾಗಿ ನನ್ನ ರಾಮನಿಗೆ ಮನೆ ಇರಬೇಕೆನ್ನುವ ಆಸೆ ಆ ದ್ಯಾವರು ಕರುಣಿಸಿದ. ನಮ್ಮ ಕಷ್ಟನಾ ಅರಿತ ಪೇಪರ್ ನವರಿಗೆ ಪುಣ್ಯ ಬರಲಿ ಎಂದು ವೃದ್ಧೆ ಬಸ್ಸಮ್ಮ ಮಂದಹಾಸದಿಂದ ನುಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ, ಹಯ್ಯಾಳ ನಾಡಕಚೇರಿ ಉಪ ತಹಸೀಲ್ದಾರ್ ಪರಶುರಾಮ, ಕಂದಾಯ ನಿರೀಕ್ಷಕ ರೇವಣಸಿದ್ದಯ್ಯ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿದ್ದವೀರಪ್ಪ, ಗ್ರಾಮ ಆಡಳಿತಾಧಿಕಾರಿ ಪ್ರವೀಣ, ಶಿವಪ್ಪ ಮದರಕಲ್, ಗ್ರಾಪಂ ಸದಸ್ಯ ಹಣಮಂತ ಸೇರಿ ಇತರರಿದ್ದರು.
ಯಾದಗಿರಿ: ಕೋಹಿನೂರ್ ಸಿಕ್ಕ ಕೊಳ್ಳೂರಿಗೆ ಮರಳು ಗಣಿಗಾರಿಕೆ ಕಂಟಕ..!
ನಿಜವಾಗಲೂ ಈ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳು ಎಂದೋ ಸಿಗಬೇಕಾಗಿತ್ತು. ಅಜ್ಜಿಗೆ ಸಂಧ್ಯಾ ಸುರಕ್ಷಾ ಯೋಜನೆ, ಗೃಹಲಕ್ಷ್ಮಿ ಯೋಜನೆ ಮಂಜೂರಾತಿ ಮಾಡಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮಾದರಿ ಮನೆ ಅಡಿಯಲ್ಲಿ 15 ದಿನದೊಳಗಾಗಿ ಮನೆ ನಿರ್ಮಿಸಿಕೊಡಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ವಡಗೇರಾ ತಹಸೀಲ್ದಾರ ಶ್ರೀನಿವಾಸ್ ಚಾಪಲ್ ತಿಳಿಸಿದ್ದಾರೆ.
ನೊಂದವರ ಮತ್ತು ಸರ್ಕಾರಿ ಸೌಲಭ್ಯ ವಂಚಿತರಿಗೆ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದೆ. ಯಕ್ಷಿಂತಿ ಗ್ರಾಮದ ವೃದ್ಧೆ ಬಸ್ಸಮ್ಮಳ ಕುಟುಂಬಕ್ಕೆ ವಸತಿ ಹಾಗೂ ಸರ್ಕಾರಿ ಸೌಲಭ್ಯ ಒದಗಿಸಿಕೊಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಿರ್ದೇಶನ ನೀಡಲಾಗಿತ್ತು. ಅಧಿಕಾರಿಗಳು ಸ್ಪಂದಿಸಿ ಆ ಕುಟುಂಬಕ್ಕೆ ಅಗತ್ಯ ನೆರವು ನೀಡಿದ್ದಾರೆ ಎಂದು ಯಾದಗಿರಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರವೀಂದ್ರ ಹೊನೋಲೆ ಹೇಳಿದ್ದಾರೆ.