
ಬೆಂಗಳೂರು (ಜು.27): ದೇಶದ ಮೊದಲ ದೇಶೀ ನಿರ್ಮಿತ 8-ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್‌ಗೆ ಮುಂಬರುವ ನವೆಂಬರ್‌ನಲ್ಲಿ ಅಮರಾವತಿಯಲ್ಲಿ ಚಾಲನೆ ಸಿಗಲಿದೆ ಎಂಬ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿರುಗೇಟು ನೀಡಿದ್ದಾರೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಯಾರೇ ಆದರೂ ಪ್ರಗತಿಯನ್ನು ಸಂಭ್ರಮಿಸುವಾಗ ಸತ್ಯ ಹಾಗೂ ಅಂಕಿ-ಅಂಶಗಳನ್ನು ಪರಿಗಣಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಬೆಂಗಳೂರಿನಲ್ಲಿದ್ದು, ಸೇವೆ ನೀಡುತ್ತಿದೆ. ಕರ್ನಾಟಕ ರಾಜ್ಯ ಕ್ವಾಂಟಮ್ ನಾವೀನ್ಯತೆಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದು, ದೇಶದ ಕ್ವಾಂಟಮ್ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ. ಬೆಂಗಳೂರು ನಗರ ಭಾರತದ ಕ್ವಾಂಟಮ್ ಕ್ಷೇತ್ರದ ಕೇಂದ್ರಬಿಂದುವಾಗಿ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ.
ಕ್ಯೂಪೈಎಐ ಸಂಸ್ಥೆ ಬೆಂಗಳೂರು ನಗರದಲ್ಲಿ ದೇಶೀಯವಾಗಿ ನಿರ್ಮಿಸಿ ಕಾರ್ಯನಿರ್ವಹಿಸುತ್ತಿರುವ 25 ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಇಂಡಸ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಅಲ್ಲದೆ, ಬೆಂಗಳೂರಿನ ಐಐಎಸ್ಸಿಯಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್ ಕೂಡ ಸ್ಥಾಪಿಸಲಾಗಿದೆ. ಅದರ 2ನೇ ಹಂತದ ಅಭಿವೃದ್ಧಿಗಾಗಿ 48 ಕೋಟಿ ರು. ನೀಡಲು ಸಚಿವ ಸಂಪುಟ ಸಭೆಯಲ್ಲೂ ತೀರ್ಮಾನಿಸಲಾಗಿದೆ. ಪ್ರಗತಿಯನ್ನು ಸಂಭ್ರಮಿಸುವಾಗ ನಾವು ಸತ್ಯ ಹಾಗೂ ಅಂಕಿ-ಅಂಶಗಳನ್ನು ಪರಿಗಣಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಬೋಸರಾಜು ತಿಳಿಸಿದರು.
ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜು.31 ಮತ್ತು ಆ.1ರಂದು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಸಮ್ಮೇಳನ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರು ಭಾಗವಹಿಸಲಿದ್ದಾರೆ. ಕರ್ನಾಟಕವನ್ನು ಕ್ವಾಂಟಮ್ ಕ್ಷೇತ್ರದ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ರೋಡ್ ಮ್ಯಾಪ್ ಸಿದ್ಧಪಡಿಸಲಾಗುತ್ತಿದೆ. ಜು.31ರಂದು ಈ ಕ್ವಾಂಟಮ್ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೋಡ್ ಮ್ಯಾಪ್ ಅನಾವರಣಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.