
ಬೆಂಗಳೂರು(ಮೇ.12): ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈವರೆಗಿನ 11 ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಲಿದೆ ಅಥವಾ ಬಹುಮತ ಗಳಿಸಲಿದೆ ಎಂದು 8 ಸಮೀಕ್ಷೆ ಹೇಳಿವೆ. ಉಳಿದಂತೆ 3 ಸಮೀಕ್ಷೆಗಳು ಬಿಜೆಪಿ ದೊಡ್ಡ ಪಕ್ಷವಾಗಲಿದೆ ಅಥವಾ ಸ್ಪಷ್ಟಬಹುಮತ ಪಡೆಯಲಿದೆ ಎಂದು ತಿಳಿಸಿವೆ. ಇನ್ನೇನು ಶನಿವಾರ ಅಂತಿಮ ಫಲಿತಾಂಶವೂ ಹೊರಬೀಳಲಿದ್ದು, ಈ ವೇಳೆ ಯಾವ ಪಕ್ಷ 113ರ ಮಾಯಾ ಸಂಖ್ಯೆಯನ್ನು ದಾಟಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಅಂತಿಮ ಫಲಿತಾಂಶದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಿ ರಾಜ್ಯದ ಚುಕ್ಕಾಣಿ ಹಿಡಿಯಬಹುದು? ಯಾರು ಮುಖ್ಯಮಂತ್ರಿ ಗಾದಿ ಆರೋಹಣ ಮಾಡಬಹುದು ಎಂಬ ಸಾಧ್ಯಾಸಾಧ್ಯತೆಯ ಲೆಕ್ಕಾಚಾರ ಇಲ್ಲಿದೆ.
ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದರೆ?
ಕಾಂಗ್ರೆಸ್ ಬಹುಮತ ಗಳಿಸಿದರೂ ಪಕ್ಷಕ್ಕೆ ಎಷ್ಟುಸೀಟುಗಳು ಸಿಗುತ್ತವೆ ಎಂಬುದರ ಆಧಾರದ ಮೇಲೆ ಮುಖ್ಯಮಂತ್ರಿ ಯಾರು ಎಂಬುದು ನಿರ್ಧಾರವಾಗಲಿದೆ. 120ಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ಸಹಜವಾಗಿ ಸಿದ್ದರಾಮಯ್ಯ ಗದ್ದುಗೆಗೇರುತ್ತಾರೆ. ಈ ಹಂತದಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ (ತಲಾ 2.5 ವರ್ಷ?) ಸೂತ್ರ ರೂಪಿತವಾಗಬಹುದು. ಸರಳ ಬಹುಮತ ಅಥವಾ ಬಹುಮತಕ್ಕೆ ಸಣ್ಣ ಮಟ್ಟದ ಕೊರತೆ ಮೂಡಿದರೆ ಆಗ ಈ ಗಾದಿಗೆ ಪೈಪೋಟಿ ಶುರುವಾಗಬಹುದು. ಪಕ್ಷೇತರ ಅಥವಾ ಅನ್ಯ ಪಕ್ಷಗಳಿಂದ ಬೆಂಬಲವನ್ನು ಗಳಿಸುವ ನಾಯಕ ಗದ್ದುಗೆಗೆ ದಾವೆದಾರ ಆಗಬಹುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಇಂತಹ ಪ್ರಯತ್ನಕ್ಕೆ ಕೈಹಾಕಿ, ಯಾರು ಹೆಚ್ಚು ಮಂದಿಯ ಬೆಂಬಲ ತರುತ್ತಾರೋ ಅವರು ಸಿಎಂ ಆಗಬಹುದು.
'ಕೈ'ಗೆ ಅತಂತ್ರ ಫಲಿತಾಂಶ ಭಯ, ಅಭ್ಯರ್ಥಿಗಳಿಗೆ ಖಡಕ್ ಸೂಚನೆ ಕೊಟ್ಟ ಕಾಂಗ್ರೆಸ್ ನಾಯಕರು..!
ಬಿಜೆಪಿ ಸ್ಪಷ್ಟ ಬಹುಮತ ಪಡೆದರೆ?
ಒಂದು ವೇಳೆ ಬಿಜೆಪಿಗೆ ಸ್ಪಷ್ಟಬಹುಮತ ಬಂದಿದ್ದೇ ಆದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ಬಿಜೆಪಿ 120-125ಕ್ಕೂ ಹೆಚ್ಚು ಸ್ಥಾನಗಳಿಂದ ಭರ್ಜರಿಯಾಗಿ ಗೆದ್ದರೆ ಬಿಜೆಪಿಯು ಪ್ರಯೋಗಕ್ಕೆ ಕೈಹಾಕಬಹುದು. ಆಗ ಅಚ್ಚರಿ ಆಯ್ಕೆಯ ಸಾಧ್ಯತೆಯೂ ಇದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯ ಸ್ಥಾನಕ್ಕೆ ಬೇಡ ಎಂದು ಹೈಕಮಾಂಡ್ ನಿರ್ಧರಿಸಿದರೆ ಆಗ ಲಿಂಗಾಯತ ಸಮುದಾಯದವರಿಗೇ ಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆ ಇದೆ. ಈ ಹಂತದಲ್ಲಿ ಸಹಜವಾಗಿಯೇ ಒಂದಷ್ಟುಡಿಸಿಎಂ ಹುದ್ದೆಗಳು ಸೃಷ್ಟಿಯಾಗಬಹುದು.
ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾದರೆ?
ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾದರೆ ಬಹುಮತ ಗಳಿಸಲು ಪಕ್ಷೇತರ ಶಾಸಕರೇ ಮೊದಲ ಆಯ್ಕೆಯಾಗಿ ಕಾಂಗ್ರೆಸ್ ಪರಿಗಣಿಸಬಹುದು. ಬಹುಮತದ ಕೊರತೆ ತುಂಬುವಷ್ಟುಪಕ್ಷೇತರರು ಗೆಲ್ಲದಿದ್ದರೆ ಜೆಡಿಎಸ್‌ನ ಮೊರೆ ಹೋಗಬಹುದು. ರಾಹುಲ್ ಅಥವಾ ಸೋನಿಯಾ ಗಾಂಧಿ ಮಧ್ಯಪ್ರವೇಶದಲ್ಲಿ ಜೆಡಿಎಸ್ ಬೆಂಬಲದ ಕಾಂಗ್ರೆಸ್ ಸರ್ಕಾರ ರಚನೆ ಆಗಬಹುದು ಅಥವಾ ಜೆಡಿಎಸ್ ತನಗೆ ಬಾಹ್ಯ ಬೆಂಬಲ ನೀಡುವಂತೆ ಕಾಂಗ್ರೆಸ್ಸನ್ನು ಕೇಳಬಹುದು. ಇಲ್ಲವೇ, ತನಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಆಗ್ರಹಿಸಬಹುದು ಅಥವಾ ತನ್ನ ಆಯ್ಕೆಯ ಕಾಂಗ್ರೆಸ್ಸಿಗನನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವಂತೆ ಷರತ್ತು ಹಾಕಬಹುದು.
Karnataka assembly election: ಆತಂಕದಲ್ಲಿಯೇ ವಿಶ್ರಾಂತಿಗೆ ಜಾರಿರುವ ಅಭ್ಯರ್ಥಿಗಳು
ಬಿಜೆಪಿ ಅತಿ ದೊಡ್ಡ ಪಕ್ಷವಾದರೆ?
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿಯೂ ಬಹುಮತದ ಗೆರೆ ದಾಟಲು ವಿಫಲವಾದರೆ ಪಕ್ಷೇತರರು ಅಥವಾ ಜೆಡಿಎಸ್ ನೆರವಿನಿಂದ ಬಿಜೆಪಿ ಸರ್ಕಾರ ರಚಿಸಬಹುದು. ಈ ಸನ್ನಿವೇಶದಲ್ಲಿ ಜೆಡಿಎಸ್ ಮುಖ್ಯಮಂತ್ರಿ ಸ್ಥಾನ ತನಗೇ ಬೇಕು ಎಂಬಂತಹ ಪಟ್ಟು ಹಿಡಿಯುವುದು ಕಷ್ಟ. ಇನ್ನು ಜೆಡಿಎಸ್ ಪಕ್ಷ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದರೆ ಅಥವಾ ಜಾತ್ಯತೀತ ಸಿದ್ಧಾಂತಕ್ಕೆ ಕಟ್ಟುಬಿದ್ದು ಬಿಜೆಪಿ ಜತೆ ಕೈಜೋಡಿಸಲು ಒಪ್ಪದಿದ್ದರೆ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಉಂಟಾಗಬಹುದು. ಬಿಜೆಪಿಯು ಹಿಂದಿನ ಅನುಭವ ಹಾಗೂ ಎಲ್ಲಾ ಅಸ್ತ್ರ ಬಳಸಿ ಮತ್ತೊಮ್ಮೆ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಗೆ ಮುಂದಾಗಬಹುದು.
ಜೆಡಿಎಸ್ ಕಿಂಗ್‌ಮೇಕರ್ ಆಗುತ್ತಾ?
ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ಖಚಿತವಾಗಿ ಕಿಂಗ್ ಮೇಕರ್ ಆಗಲಿದೆ. ಒಂದು ವೇಳೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಪಕ್ಷೇತರರನ್ನು ಸೆಳೆದರೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ. ಜೆಡಿಎಸ್ ವಿಧಿಸುವ ಷರತ್ತುಗಳನ್ನು ಒಪ್ಪಿ ಮೈತ್ರಿ ಸರ್ಕಾರ ರಚಿಸುವ ಅನಿವಾರ್ಯತೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಒದಗಬಹುದು. ಈ ಹಂತದಲ್ಲಿ ಯಾವ ಪಕ್ಷ ತನಗೆ ಬಾಹ್ಯ ಬೆಂಬಲ ನೀಡುವುದೋ ಅದನ್ನು ಜೆಡಿಎಸ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ಎರಡೂ ಪಕ್ಷಗಳು ಬಾಹ್ಯ ಬೆಂಬಲಕ್ಕೆ ಒಪ್ಪದಿದ್ದರೆ ಅಧಿಕಾರ ಹಂಚಿಕೆ ಸೂತ್ರದ ಅನ್ವಯ ಮೊದಲು ಮುಖ್ಯಮಂತ್ರಿ ಪಟ್ಟತನಗೆ ನೀಡುವಂತೆ ಜೆಡಿಎಸ್ ಷರತ್ತು ಹಾಕಬಹುದು. ನಂತರವೂ ತಾನು ಹೇಳಿದವರನ್ನು ಮುಖ್ಯಮಂತ್ರಿ ಮಾಡಲು ಪಟ್ಟು ಹಿಡಿಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.