ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಫಲಿತಾಂಶ ಏನಾಗುತ್ತದೊ ಎಂಬ ಆತಂಕದಲ್ಲಿಯೇ ವಿಶ್ರಾಂತಿಗೆ ಶರಣಾಗಿದ್ದರೆ, ಕೆಲವರು ವಿಶ್ರಾಂತಿಯನ್ನು ಬಯಸದೆ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ರಾಮನಗರ (ಮೇ.12) : ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಫಲಿತಾಂಶ ಏನಾಗುತ್ತದೊ ಎಂಬ ಆತಂಕದಲ್ಲಿಯೇ ವಿಶ್ರಾಂತಿಗೆ ಶರಣಾಗಿದ್ದರೆ, ಕೆಲವರು ವಿಶ್ರಾಂತಿಯನ್ನು ಬಯಸದೆ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರ(Channapattana constituency)ದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(HD Kumaraswamy) ಸದ್ಯ ಸಿಂಗಾಪುರಕ್ಕೆ ವಿಶ್ರಾಂತಿಗಾಗಿ ತೆರೆಳಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಸಂಜೆವರೆಗೂ ಕುಮಾರಸ್ವಾಮಿ ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದರು. ಆದರೆ, ಈ ಬಾರಿ ಕ್ಷೇತ್ರ ಸಂಚಾರ ನಡೆಸದೆ ವಿಶ್ರಾಂತಿ ಬಯಸಿದ್ದಾರೆ. ಮತದಾನದ ದಿನ ಕೇತಗಾನಹಳ್ಳಿಯಲ್ಲಿ ಮತ ಚಲಾಯಿಸಿ ಕ್ಷೇತ್ರಗಳಲ್ಲಿ ಸಂಚರಿಸದೆ ವಾಪಸ್ಸಾಗಿದ್ದರು. ಬೆಂಗಳೂರು ಅಥವಾ ಬಿಡದಿಯ ಕೇತಗಾನಹಳ್ಳಿಯಲ್ಲಿ ಇದ್ದರೆ ಕುಮಾರಸ್ವಾಮಿ ಅವರಿಗೆ ವಿಶ್ರಾಂತಿ ಸಿಗುವುದಿಲ್ಲ. ಹೀಗಾಗಿ ಅವರು ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ಸ್ಟಾರ್ ಕ್ಷೇತ್ರಗಳ ಫಲಿತಾಂಶದ ಮೇಲೆ ಮತದಾರನ ಕಣ್ಣು!
ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್(DK Shivakumar) ಜಾಲಿ ಮೂಡ್ನಲ್ಲಿದ್ದರು. ಕನಕಪುರದ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದ ಶಿವಕುಮಾರ್, ಬೆಳಗ್ಗೆ ಎದ್ದಾಕ್ಷಣ ಗಡ್ಡ ಟ್ರಿಮ್ ಮಾಡಿಸಿಕೊಂಡು ಲಗುಬಗೆಯಿಂದ ರೆಡಿಯಾದರು. ಸಹೋದರ ಡಿ.ಕೆ.ಸುರೇಶ್(DK Suresh) ಅವರೊಂದಿಗೆ ಕನಕಪುರದಲ್ಲಿನ ವಾಸು ಹೋಟೆಲ್‌ಗೆ ತೆರಳಿ ಮಸಾಲೆ ದೋಸೆ ಸವಿದರು. ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ತರುವಾಯ ಕೋಡಿಹಳ್ಳಿಯ ಫಾಮ್‌ರ್‍ಹೌಸ್‌ಗೆ ತೆರಳಿ ತಾಯಿ ಗೌರಮ್ಮ ಅವರಿಂದ ಆಶೀರ್ವಾದ ಪಡೆದು ಬೆಂಗಳೂರಿಗೆ ತೆರಳಿದರು.
ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜು(JDS candidate Nagaraju) ಕನಕಪುರದ ತಮ್ಮ ನಿವಾಸದಲ್ಲಿ ಕಾಲ ಕಳೆದರು. ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ತಮ್ಮ ಕಟುಂಬವರ್ಗದೊಡನೆ ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಂಡರು ಎನ್ನಲಾಗಿದೆ.
ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಹುಸೇನ್, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದರೆ, ಬಿಜೆಪಿ ಅಭ್ಯರ್ಥಿ ಗೌತಮ್‌ಗೌಡ ತಮ್ಮ ಕುಟುಂಬ ವರ್ಗದೊಂದಿಗೆ ಕಾಲ ಕಳೆದಿರುವುದಾಗಿ ತಿಳಿದುಬಂದಿದೆ.
ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಂಡರೆ, ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಬಿಡದಿ ಮನೆಯಲ್ಲಿ ಉಳಿದುಕೊಂಡಿದ್ದರು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಮೀಕ್ಷೆ ಬೆನ್ನಲ್ಲೇ ಅತಂತ್ರ ವಿಧಾನಸಭೆ ಆತಂಕ, ಶುರುವಾಗಿದೆ ರಣತಂತ್ರ!
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಬೆಂಗಳೂರಿನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮತದಾನ ಪ್ರಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು, ಬೂತ್ ಮಟ್ಟದಲ್ಲಿ ಆಗಿರುವ ಮತದಾನದ ವಿವರಗಳನ್ನು ಕಲೆ ಹಾಕಿ ತಮ್ಮ ಆಪ್ತರೇಷ್ಟರ ಜೊತೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.