75 ದಾಟಿದರೆ ಟಿಕೆಟಿಲ್ಲ ಎಂಬ ನಿಯಮ ಬಿಜೆಪಿಯಲ್ಲಿಲ್ಲ: ಈಶ್ವರಪ್ಪ

By Kannadaprabha NewsFirst Published Mar 9, 2023, 4:40 AM IST
Highlights

ಹೊರಟ್ಟಿಗೆ 75, ಗೆಲ್ಲಿಸಿ ಸಭಾಪತಿ ಮಾಡಲಿಲ್ವಾ?, ಮಗನಿಗೆ ಟಿಕೆಟ್‌ ಕೊಟ್ಟರೆ ನನಗೆ ಕೊಡಬೇಕಿಲ್ಲ: ಬಿಜೆಪಿ ಶಾಸಕ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ 

ವಿಜಯ್‌ ಮಲಗಿಹಾಳ

ಬೆಂಗಳೂರು(ಮಾ.09):  ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಬಗ್ಗೆ ಹಲವು ಸುದ್ದಿಗಳು ಹೊರಬೀಳುತ್ತಿವೆ. ಮೂರ್ನಾಲ್ಕು ಬಾರಿ ಗೆದ್ದವರಿಗೆ ಟಿಕೆಟ್‌ ನೀಡದೆ ಹೊಸಬರಿಗೆ ಅವಕಾಶ ನೀಡಲಾಗುತ್ತದೆ...ಎಪ್ಪತ್ತೈದು ವರ್ಷ ವಯಸ್ಸಾದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬಿತ್ಯಾದಿ. ಈ ಪೈಕಿ ಎಪ್ಪತ್ತೈದಾಗಿದೆ ಎಂಬ ಕಾರಣಕ್ಕಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರಿಗೂ ಟಿಕೆಟ್‌ ನಿರಾಕರಿಸಬಹುದು ಎನ್ನಲಾಗುತ್ತಿದೆ. ಹಾಗಂತ ಇದನ್ನು ಇದುವರೆಗೆ ಯಾರೂ ಅಧಿಕೃತವಾಗಿ ಹೇಳಿಲ್ಲ. ಈಶ್ವರಪ್ಪ ಅವರನ್ನು ಗಮನಿಸಿದರೆ ಅವರಿಗೆ ಎಪ್ಪತ್ತೈದು ವರ್ಷ ಆಯಿತೇ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಗಟ್ಟಿಯಾಗಿ ಓಡಾಡಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

Latest Videos

ಪ್ರತಿಪಕ್ಷ ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಬಿಜೆಪಿ ನಾಯಕರಲ್ಲಿ ಈಶ್ವರಪ್ಪ ಮುಂಚೂಣಿಯಲ್ಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ತಂಡಗಳಲ್ಲಿ ಅವರ ನೇತೃತ್ವದ ತಂಡವೂ ಒಂದು. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಉಸ್ತುವಾರಿಯೂ ಆಗಿರುವ ಈಶ್ವರಪ್ಪ ಅವರನ್ನು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ‘ಮುಖಾಮುಖಿ’ ಆದಾಗ..

ಯಡಿಯೂರಪ್ಪ ಟಿಕೆಟ್‌ ಬಾಂಬ್- ಬಿಜೆಪಿಯಲ್ಲಿ ಭಾರಿ ಕಂಪನ: ಟಿಕೆಟ್‌ ಭಾಗ್ಯ ಇಲ್ಲದ ಶಾಸಕರು ಇವರೆನಾ?

ಸಂದರ್ಶನದ ಪೂರ್ಣ ಪಾಠ ಹೀಗಿದೆ:

ನಿಮ್ಮ ನೇತೃತ್ವದ ತಂಡದ ವಿಜಯ ಸಂಕಲ್ಪ ಯಾತ್ರೆ ಆರಂಭದಿಂದ ಇಲ್ಲಿವರೆಗೂ ಚಾಮರಾಜನಗರದ ಉಸ್ತುವಾರಿ ಹಾಗೂ ನಿಮ್ಮ ತಂಡದಲ್ಲಿರುವ ಸಚಿವ ವಿ.ಸೋಮಣ್ಣ ಅವರು ಮುನಿಸಿಕೊಂಡು ದೂರ ಉಳಿದಿದ್ದಾರಲ್ಲ?

-ತಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಸ್ತಾಗಿದ್ದೇನೆ ಎಂಬ ಸ್ಪಷ್ಟನೆಯನ್ನು ಸ್ವತಃ ಸೋಮಣ್ಣ ಅವರೇ ನೀಡಿದ್ದಾರೆ. ಅದರ ಬಗ್ಗೆ ಪಕ್ಷದ ನಾಯಕರು ಕುಳಿತು ಮಾತನಾಡುತ್ತಾರೆ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ.

ನಿಮ್ಮ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ವಿಷಯವನ್ನೇ ಪ್ರತಿಪಕ್ಷ ಕಾಂಗ್ರೆಸ್‌ ಪ್ರಮುಖ ಚುನಾವಣಾ ವಿಷಯವಾಗಿ ಮಾಡಿಕೊಂಡಿದೆಯಲ್ಲ?

-ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜೈಲಿಗೆ ಹೋಗಿ ಬಂದಿದ್ದು, ಕಂತೆ ಕಂತೆ ಹಣ ಸಿಕ್ಕಿದ್ದು ಕಣ್ಣ ಮುಂದಿದೆ. ಇಂಥ ಶಿವಕುಮಾರ್‌ ನೇತೃತ್ವದ ತಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಬಿಜೆಪಿ ಸರ್ಕಾರದ ವಿರುದ್ಧ ಒಂದೇ ಒಂದು ದಾಖಲೆ ಸಮೇತ ಆರೋಪ ಮಾಡಿಲ್ಲ. ಕೇವಲ ಆರೋಪ ಮಾಡಿಕೊಂಡು ಬಂದಿದ್ದಾರೆ. ಇಲಿ ಹೋದರೆ ಹುಲಿ ಹೋಯಿತು ಎಂಬಂತೆ ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ.

40 ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂದು ಆರೋಪಿಸಿ ಕಾಂಗ್ರೆಸ್‌ ತರೇಹವಾರಿ ಪ್ರಚಾರ ಮಾಡಿದರೂ ಬಿಜೆಪಿಯಿಂದ ಅದಕ್ಕೆ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲವಲ್ಲ?

-ನಾವು ಪ್ರತ್ಯುತ್ತರ ನೀಡಬೇಕಾಗಿಲ್ಲ. ಜನರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಕಾದು ನೋಡಿ. ಸಿದ್ದರಾಮಯ್ಯ ಅವರು ಅರ್ಕಾವತಿ ಬಡಾವಣೆಯ ಪ್ರಕರಣದಲ್ಲಿ ಬೆತ್ತಲೆಯಾಗಿದ್ದಾರೆ. 800 ಎಕರೆಯಷ್ಟುಭೂಮಿಯನ್ನು ರಿಡೂ ಹೆಸರಲ್ಲಿ ಡಿನೋಟಿಫೈ ಮಾಡಿದ್ದಾರೆ. ಇದರಲ್ಲಿ ಸುಮಾರು ಎಂಟು ಸಾವಿರ ಕೋಟಿ ರು. ಲೂಟಿ ಮಾಡಿದ್ದಾರೆ ಎಂದು ವಿಚಾರಣೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗ ತಿಳಿಸಿದೆ. ಒಂದು ಕಡೆ ತಮ್ಮ ಭ್ರಷ್ಟಾಚಾರವನ್ನು ತಾವೇ ಮುಚ್ಚಿ ಹಾಕಿಸಿದ ಸಿದ್ದರಾಮಯ್ಯ. ಮತ್ತೊಂದೆಡೆ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್‌. ಇಂಥವರು 40 ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂದು 40 ಬಾರಿಯಲ್ಲ, 100 ಬಾರಿ ಹೇಳಿದರೂ ಜನರು ನಂಬುವುದಿಲ್ಲ.
ಸಿದ್ದರಾಮಯ್ಯ ಬಗ್ಗೆ ನೀವು ಸೇರಿದಂತೆ ಪಕ್ಷದ ಅನೇಕ ಮುಖಂಡರು ಹತ್ತಾರು ಆರೋಪಗಳನ್ನು ಮಾಡಿದ್ದೀರಿ. ನಿಮ್ಮದೇ ಸರ್ಕಾರವಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಒಂದು ಬಾರಿ ಕೂಡ ಅವರ ವಿರುದ್ಧ ತನಿಖಾಸ್ತ್ರ

ಪ್ರಯೋಗಿಸಲಿಲ್ಲ ಯಾಕೆ?

-ಪ್ರಕರಣ ದಾಖಲಿಸುವುದು ಒತ್ತಟ್ಟಿಗರಲಿ. ನಮ್ಮ ವಿರುದ್ಧ 40 ಪರ್ಸೆಂಟ್‌ ಕಮೀಷನ್‌ ಆರೋಪ ಮಾಡುವ ಅವರು ದಾಖಲೆಗಳನ್ನು ಮುಂದಿಟ್ಟು ಪ್ರಕರಣ ದಾಖಲಿಸಲಿ. ಅವರನ್ನು ತಡೆದವರು ಯಾರು? ಗುತ್ತಿಗೆದಾರರ ಸಂಘದ ಅಧ್ಯಕ್ಷರು

ಸರ್ಕಾರದ ವಿರುದ್ಧ ಆರೋಪ ಮಾಡಿದ ಬಳಿಕ ಸಚಿವ ಮುನಿರತ್ನ ಅವರು ಅವರ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲಿಸಿದ್ದಾರೆ. ಕೆಂಪಣ್ಣ ಕಾಂಗ್ರೆಸ್‌ನ ಏಜೆಂಟ್‌ ಆಗಿ ಮಾಡಿದ ಕುತಂತ್ರವದು. ಅದರಲ್ಲಿ ಯಾವುದೇ ಹುರುಳಿಲ್ಲ.
ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಆರಂಭವಾದ ಬೆನ್ನಲ್ಲೇ ಪಕ್ಷದ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಅವರ ವಿರುದ್ಧದ ಲಂಚ ಪ್ರಕರಣ ಹೊರಬಿದ್ದಿರುವುದು ಮುಜುಗರವಾಗುವುದಿಲ್ಲವೇ?

-ತಮಗೆ ಸಂಬಂಧವೇ ಇಲ್ಲದಿದ್ದರೂ ಲೋಕಾಯುಕ್ತ ಪೊಲೀಸರು ಹೇಗೆ ಮೊದಲ ಆರೋಪಿ ಮಾಡಿದರು ಎಂಬುದು ಅರ್ಥ ಆಗುತ್ತಿಲ್ಲ ಎಂಬ ಮಾತನ್ನು ಮಾಡಾಳು ವಿರೂಪಾಕ್ಷಪ್ಪ ಹೇಳುತ್ತಿದ್ದಾರೆ. ಹೀಗಾಗಿ, ನಮಗೆ ಮುಜಗರವೇನೂ ಇಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎನ್ನುವುದು ಪಕ್ಷದ ತೀರ್ಮಾನ. ಇದರಲ್ಲಿ ಯಾವುದೂ ಮುಚ್ಚುಮರೆ ಇಲ್ಲ.

ಪ್ರಕರಣ ಇಷ್ಟೊಂದು ಗಂಭೀರವಾಗಿದ್ದರೂ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಮೀನಮೇಷ ಎಣಿಸುತ್ತಿದ್ದೀರಲ್ಲ?

-ಉಚ್ಚಾಟನೆ ಕೇಳುತ್ತಿರುವವರು ಯಾರು. ಕಾಂಗ್ರೆಸ್‌ನವರು. ಮೊದಲು ಅವರು ಜೈಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಉಚ್ಚಾಟಿಸಲಿ. ದೆಹಲಿಯ ಮನೆಯಲ್ಲಿ, ಬೆಂಗಳೂರಿನ ಮನೆಯಲ್ಲಿ ಸಾಕಷ್ಟುಅಕ್ರಮ ಹಣ, ದಾಖಲೆಗಳು ಸಿಕ್ಕಿವೆ. ಮಾಡಾಳು ವಿರೂಪಾಕ್ಷಪ್ಪ ಅವರನ್ನು ಉಚ್ಚಾಟಿಸಲು ಏನಿದೆ? ಮೊದಲು ಅವರ ವಿರುದ್ಧದ ಆರೋಪ ರುಜುವಾತಾಗಲಿ.

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದರೂ ಮತ್ತೆ ಸಚಿವ ಸ್ಥಾನ ಸಿಗಲಿಲ್ಲವಲ್ಲ?

-ಸಚಿವ ಸ್ಥಾನ ನೀಡುವುದು ಬಿಡುವುದರ ತೀರ್ಮಾನ ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್‌ ತೀರ್ಮಾನವಾಗಿತ್ತು. ಅಲ್ಲಿ ಏನು ಸಮಸ್ಯೆಗಳಿದ್ದವೋ ಗೊತ್ತಿಲ್ಲ. ಹೀಗಾಗಿ, ನನ್ನಿಂದ ಪಕ್ಷ ಮತ್ತು ಸರ್ಕಾರಕ್ಕೆ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನ ಬೇಡ ಎಂದು ನಾನೇ ಸ್ಪಷ್ಟವಾಗಿ ಹೇಳಿದೆ. ಪಕ್ಷದ ವರಿಷ್ಠರು ಸಂತೋಷವಾಗಿ ಒಪ್ಪಿದರು.

ನೀವು ಸಂಪುಟ ಸೇರುವುದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಹೇಗೆ ಕಿರಿಕಿರಿ ಉಂಟಾಗುತ್ತದೆ?

-ಅಲ್ಲಿ ಏನು ಸಮಸ್ಯೆಯಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಒಬ್ಬನ ಸೇರ್ಪಡೆ ಮಾತ್ರ ಇರಲಿಲ್ಲ. ಬೇರೆ ಬೇರೆಯವರನ್ನೂ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಇತ್ತು. ಯಾಕೆ, ಏನು ಎಂಬುದು ನನಗೆ ಗೊತ್ತಿಲ್ಲ.
ರಮೇಶ್‌ ಜಾರಕಿಹೊಳಿ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನಿಮ್ಮನ್ನೂ ಸೇರಿಸಿಕೊಳ್ಳಲಿಲ್ಲವಂತೆ ಹೌದೆ?

-ಈ ಮಾತನ್ನು ನನಗೆ ಅನೇಕರು ಹೇಳಿದ್ದಾರೆ. ಇದೊಂದು ಊಹೆ. ರಮೇಶ್‌ ಜಾರಕಿಹೊಳಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಆದರೆ, ನನ್ನನ್ನು ಸಂಪುಟಕ್ಕೆ ತೆಗೆದುಕೊಂಡರೆ ಸಮಸ್ಯೆ ಆಗುತ್ತದೆ ಎಂದಾದರೆ ಬೇಡವೇ ಬೇಡ ಎಂದು ಹೇಳಿದೆ.

ನಿಮ್ಮನ್ನು ಮತ್ತೆ ಸಂಪುಟ ಸೇರ್ಪಡೆಗೆ ನಿಮ್ಮದೇ ಪಕ್ಷದ ಕೆಲವು ಹಿರಿಯ ನಾಯಕರು ತೀವ್ರ ವಿರೋಧಿಸಿದ್ದರಂತೆ?

-ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿಯಲ್ಲಿ ತಪ್ಪಿಸುವುದು, ಕೈಬಿಡುವುದು ಯಾರ ಕೈಯಲ್ಲಿಯೂ ಇಲ್ಲ. ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿಗಳು ಸಮಾಲೋಚನೆ ಮಾಡಿಯೇ ತೀರ್ಮಾನ ಮಾಡಿರುತ್ತಾರೆ.
ಹಾಲಿ ಶಾಸಕರ ಪೈಕಿ ನಾಲ್ಕೈದು ಮಂದಿಗೆ ಟಿಕೆಟ್‌ ಸಿಗಲಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ?

-ಯಡಿಯೂರಪ್ಪ ಅವರು ಯಾವ ಉದ್ದೇಶದಲ್ಲಿ, ಯಾವ ಲೆಕ್ಕದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಾಲ್ಕೈದು ಮಂದಿಗೆ ಟಿಕೆಟ್‌ ತಪ್ಪಬಹುದು. 20-30 ಮಂದಿ ಶಾಸಕರಿಗೂ ತಪ್ಪಬಹುದು. ಅಥವಾ ಯಾರನ್ನೂ ಕೈಬಿಡದೇ ಇರಬಹುದು. ಇದು ಯಡಿಯೂರಪ್ಪ ಅವರ ಭಾವನೆ. ಅದನ್ನೇ ಪಕ್ಷದ ವರಿಷ್ಠರು ಪರಿಗಣಿಸುತ್ತಾರೆಯೋ ಇಲ್ಲವೋ ಎಂಬುದು ಗೊತ್ತಿಲ್ಲ.

ನಿಮಗೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ವದಂತಿ ಪಕ್ಷದ ಪಾಳೆಯದಿಂದಲೇ ಹಬ್ಬಿದೆ?

-ನನಗೇ ಟಿಕೆಟ್‌ ಕೊಡಬೇಕು ಎಂದೇನೂ ಬಿಜೆಪಿಯಲ್ಲಿ ಬರೆದಿಲ್ಲ. ಹಾಗಂತ ನನಗೆ ಟಿಕೆಟ್‌ ಕೊಡಬಾರದು ಎಂದೂ ಬರೆದಿಲ್ಲ. ಈ ವದಂತಿಗಳಿಗೆ ನಾನು ಉತ್ತರಿಸುವುದಿಲ್ಲ. ಪಕ್ಷ ಸ್ಪರ್ಧಿಸು ಎಂದರೆ ಸ್ಪರ್ಧಿಸುತ್ತೇನೆ. ಬಿಜೆಪಿಗೆ ಯಾವುದೇ ವ್ಯಕ್ತಿ ಅನಿವಾರ್ಯ ಅಲ್ಲ.

ನಿಮ್ಮನ್ನೂ ಸೇರಿದಂತೆ 75 ವರ್ಷ ಆದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಮಾತು ಕೂಡ ಬಿಜೆಪಿಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ?

-ನೋಡಿ 75 ವರ್ಷ ಆದವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಯಾರು ಹೇಳಿದ್ದಾರೆ. ಉದಾಹರಣೆಗೆ ಬಸವರಾಜ ಹೊರಟ್ಟಿಅವರು ನಮ್ಮ ಪಕ್ಷಕ್ಕೆ ಬಂದರು. ಅವರಿಗೆ ನೀವು ಹೇಳುವಷ್ಟು(75) ವಯಸ್ಸಾಗಿದೆ. ಅವರಿಗೆ ಟಿಕೆಟ್‌ ಕೂಡ ನೀಡಿದರು. ಬಳಿಕ ವಿಧಾನಪರಿಷತ್ತಿನ ಸಭಾಪತಿಯನ್ನಾಗಿಯೂ ಮಾಡಿದರು. ಪಕ್ಷದಲ್ಲಿ ಎಲ್ಲಿಯೂ ಕೂಡ 75 ಆದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬುದು ಇಲ್ಲ. ಬಿಜೆಪಿಯಲ್ಲಿ ಟಿಕೆಟ್‌ ನೀಡಲು ವಯಸ್ಸು ಕೌಂಟ್‌ ಆಗುವುದಿಲ್ಲ. ಎಲ್ಲಿಯೂ ಕೂಡ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಒಂದು ವೇಳೆ ನಿಮಗೆ ಟಿಕೆಟ್‌ ಸಿಗದಿದ್ದರೆ ಅಥವಾ ಸ್ಪರ್ಧಿಸಲು ಬಯಸದಿದ್ದರೆ ಪುತ್ರನಿಗೆ ಟಿಕೆಟ್‌ ನೀಡುವಂತೆ ಕೇಳುವಿರಾ?

-ಅವನು ಜಿಲ್ಲಾ ಪಂಚಾಯತ್‌ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದಾನೆ. ಅವನ ರಾಜಕಾರಣ ಅವನು ಮಾಡಿಕೊಂಡು ಹೋಗುತ್ತಾನೆ. ನನ್ನ ರಾಜಕಾರಣ ನಾನು ಮಾಡುತ್ತೇನೆ. ಆತನಿಗೆ ಟಿಕೆಟ್‌ ನೀಡಬೇಕು ಎಂಬುದಾದರೆ ಕೊಡಲಿ. ನನಗೆ ಕೊಡಬೇಕಾದರೆ ಕೊಡಲಿ. ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಎಂಬ ಪಕ್ಷದಲ್ಲಿನ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಆದರೆ, ಇದು ಕೂಡ ಎಲ್ಲೂ ತೀರ್ಮಾನವಾಗಿಲ್ಲ. ಪಕ್ಷದ ಸಂವಿಧಾನದಲ್ಲಿ ಇಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಎಂಬುದು ಬಿಜೆಪಿಯಲ್ಲಿ ನೂರಕ್ಕೆ ನೂರರಷ್ಟುಅನುಷ್ಠಾನಕ್ಕೆ ಬರುವುದಕ್ಕೆ ಸಾಧ್ಯವೇ?

-ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅಷ್ಟಾಗಿ ಯಾರ ಬೆಂಬಲವೂ ಇಲ್ಲ. ಎಷ್ಟುಸಾಧ್ಯವೋ ಅಷ್ಟುಅನುಷ್ಠಾನಕ್ಕೆ ತರಲಾಗುತ್ತಿದೆ. ಒಂದು ವೇಳೆ ನನ್ನ ಮಗನಿಗೆ ಟಿಕೆಟ್‌ ಕೊಟ್ಟರೆ ನಾನು ಸ್ಪರ್ಧಿಸಲ್ಲ. ನನಗೆ ಟಿಕೆಟ್‌ ನೀಡಿದಲ್ಲಿ ನನ್ನ ಮಗನಿಗೆ ಬೇಡ ಎಂದು ಮನವಿ ಮಾಡುತ್ತೇನೆ. ಇಬ್ಬರಿಗೂ ಕೊಡುವ ಸಾಧ್ಯತೆ ಶೇ.99ರಷ್ಟುಇಲ್ಲ.

ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್‌.ಈಶ್ವರಪ್ಪ

ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಹಲವು ಸಚಿವರು, ಶಾಸಕರು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆಯಲ್ಲ?

-ಯಾರಾರ‍ಯರು ಬಿಜೆಪಿ ತೊರೆದು ತಮ್ಮ ಪಕ್ಷ ಸೇರಲಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್‌ ನಾಯಕರು ಪಟ್ಟಿಯನ್ನಾದರೂ ಪ್ರಕಟಿಸಲಿ. ಕಾಂಗ್ರೆಸ್‌ ಪಕ್ಷ ಹೇಳುವ ನೂರು ಸುಳ್ಳುಗಳಲ್ಲಿ ಇದು ಕೂಡ ಒಂದು. ಬಿಜೆಪಿಗೆ ಬಂದವರು ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡು ತಮ್ಮ ಜನ್ಮ ಪಾವನವಾಯಿತು ಎಂದುಕೊಂಡ ಅನೇಕರನ್ನು ನೋಡಿದ್ದೇನೆ. ವಿಶ್ವನಾಯಕ ನರೇಂದ್ರ ಮೋದಿ ನೇತೃತ್ವದ ಪಕ್ಷದಲ್ಲಿ ಇದ್ದೇನೆ ಎಂಬ ಭಾವನೆ ಇರುತ್ತದೆ. ನೇತೃತ್ವ, ಸಂಘಟನೆ, ಅಭಿವೃದ್ಧಿ ಮತ್ತು ಭಾರತೀಯ ಸಂಸ್ಕೃತಿ ಇವು ಬಿಜೆಪಿಯಲ್ಲಿ ಮಾತ್ರ. ಇದರ ನಡುವೆಯೂ ಅಲ್ಲೊಬ್ಬ ಇಲ್ಲೊಬ್ಬರು ಪಕ್ಷ ತೊರೆದು ಹೋದರೂ ಅದಕ್ಕೆ ಅಚ್ಚರಿ ಪಡಬೇಕಾಗಿಲ್ಲ.

ಈ ಬಾರಿ ಮೂರ್ನಾಲ್ಕು ಬಾರಿ ಗೆದ್ದವರನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್‌ ಹಂಚಿಕೆಯಲ್ಲಿ ಅವಕಾಶ ನೀಡಬೇಕು ಎಂಬ ಚರ್ಚೆ ನಿಮ್ಮ ಪಕ್ಷದಲ್ಲಿ ನಡೆದಿದೆಯಂತೆ?

-ಇಲ್ಲ. ಇದರ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆಯೂ ನಡೆದಿಲ್ಲ. ಕೇವಲ ವದಂತಿಯಷ್ಟೇ. ಗುಜರಾತ್‌, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಲೆಕ್ಕಾಚಾರದ ಆಧಾರದ ಮೇಲೆ ಟಿಕೆಟ್‌ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಟಿಕೆಟ್‌ ಹಂಚಿಕೆ ಬಗ್ಗೆ ಯಾವುದೇ ನೀತಿ, ನಿಯಮ ರೂಪುಗೊಂಡಿಲ್ಲ.

- ಪಕ್ಷದಲ್ಲಿ ಟಿಕೆಟ್‌ ನೀಡಲು ವಯಸ್ಸು ಕೌಂಟ್‌ ಆಗಲ್ಲ
- 3-4 ಬಾರಿ ಗೆದ್ದವರಿಗೆ ಟಿಕೆಟ್‌ ಇಲ್ಲ ಎಂಬುದು ಕೇವಲ ವದಂತಿ
- ಪಕ್ಷ ಸ್ಪರ್ಧಿಸು ಎಂದರೆ ಕಣಕ್ಕಿಳಿವೆ, ಪಕ್ಷಕ್ಕೆ ವ್ಯಕ್ತಿ ಅನಿವಾರ್ಯವಲ್ಲ
- ಬಿಜೆಪಿಯಿಂದ ಒಂದಿಬ್ಬರು ಪಕ್ಷಾಂತರ ಮಾಡಿದರೆ ಅಚ್ಚರಿ ಇಲ್ಲ
- ಸೋಮಣ್ಣ ‘ಮುನಿಸಿನ’ ಬಗ್ಗೆ ನಾಯಕರು ಮಾತಾಡ್ತಾರೆ, ನಾನೇನೂ ಹೇಳಲ್ಲ
- ನನ್ನನ್ನು ಮತ್ತೆ ಯಾಕೆ ಮಂತ್ರಿ ಮಾಡಲಿಲ್ಲ ಎಂದು ಗೊತ್ತಿಲ್ಲ
- ಮಾಡಾಳು ಕೇಸಿನಿಂದ ಪಕ್ಷಕ್ಕೆ ಮುಜುಗರ ಏನೂ ಆಗಿಲ್ಲ, ವಜಾ ಅನಗತ್ಯ

click me!