* ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಯುಟರ್ನ್
* ಒಂದೇ ಫೋನ್ ಕಾಲ್‌ಗೆ ರಾಜೀನಾಮೆ ಕೈಬಿಟ್ಟ ಸಿಎಂ ಇಬ್ರಾಹಿಂ
* ಫೆ.14ಕ್ಕೆ ರಾಜೀನಾಮೆ ನೀಡಲ್ಲ ಎಂದ ಇಬ್ರಾಹಿಂ
ಹುಬ್ಬಳ್ಳಿ, (ಫೆ.13): ವಿಧಾನಪರಿಷತ್ ಸ್ಥಾನಕ್ಕೆ ಫೆ.14ಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಸಿ.ಎಂ. ಇಬ್ರಾಹಿಂ ಇದೀಗ ಯುಟರ್ನ್ ಹೊಡೆದಿದ್ದಾರೆ.
ಹೌದು..ಕಾಂಗ್ರೆಸ್ ಹೈಕಮಾಂಡ್‌ನಿಂದ ನನಗೆ ಬುಲಾವ್ ಬಂದಿದೆ. ಹೈಕಮಾಂಡ್ನವರು ಏನು ಹೇಳುತ್ತಾರೋ ನೋಡೋಣ. ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಮುಖಂಡರ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಇನ್ನೇನು ಕಾಂಗ್ರೆಸ್ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಮಯಕ್ಕೆ ಕ್ಷಣಗಣನೆ ಆರಂಭವಾಗಿದ್ದೇ ತಡ ಸಿಎಂ ಇಬ್ರಾಹಿಂ ಹಿಂದೆ ಸರಿದಿದ್ದಾರೆ. ಇದರಿಂದ ದಳಪತಿಗಳಿಗೆ ನಿರಾಸೆಯಾಗಿದೆ.
ಇನ್ನೇನು ಕಾಂಗ್ರೆಸ್ ರಾಜೀನಾಮೆ ನೀಡುತ್ತಾರೆ. ಅಲ್ಪಸಂಖ್ಯಾತ ಸಮುದಾಯದ ಒfರಭಾವಿ ನಾಯಕ ಜೆಡಿಎಸ್ ಸೇರುತ್ತಾರೆ ಎಂದು ಕಾತರದಲ್ಲಿ ದಳಪತಿಗಳಿಗೆ ಇಬ್ರಾಹಿಂ ಬಿಗ್ ಶಾಕ್ ಕೊಟ್ಟಿದ್ದಾರೆ.
ದಿಲ್ಲಿಯಿಂದ ಬಂತು ಆಹ್ವಾನ, ಮನಸ್ಸು ಬದಲಿಸಿ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ ಸಿಎಂ ಇಬ್ರಾಹಿಂ?
ಹುಬ್ಬಳ್ಳಿಯಲ್ಲಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, ಒಂದು ಕಡೆ ಬೈಯ್ಯುತ್ತಿದ್ದಾರೆ, ಮತ್ತೊಂದೆಡೆ ಹೊಗಳುತ್ತಿದ್ದಾರೆ. ವಿ.ಎಸ್. ಉಗ್ರಪ್ಪರಿಂದ ಭ್ರಷ್ಟಾಚಾರ ಆರೋಪ ಮಾಡಿಸುತ್ತಾರೆ. ವಕ್ಫ್ ಬೋರ್ಡ್ನಲ್ಲಿ ಭ್ರಷ್ಟಾಚಾರ ಮಾಡಿರುವುದಾಗಿ ಆರೋಪ ಮಾಡುತ್ತಾರೆ. ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ. ನಾನು ಏನೂ ಇಲ್ಲ ಅಂದ್ಮೇಲೆ ನಮ್ಮ ಪಾಡಿಗೆ ಬಿಟ್ಟುಬಿಡಬೇಕು ಎಂದರು.
ಪರಿಷತ್ನಲ್ಲಿ ಮತಾಂತರ ನಿಷೇಧ ಬಿಲ್ ಮಂಡನೆ ಆಗಲಿದೆ. ನಾನು ರಾಜೀನಾಮೆ ಕೊಟ್ಟರೆ ಬಿಜೆಪಿಗೆ ಲಾಭವಾಗುತ್ತೆ. ಬಿಜೆಪಿಯವರಿಂದ ಹಣ ಪಡೆದಿದ್ದಾರೆಂದು ಆರೋಪ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಬಗ್ಗೆ ನಿರ್ಧರಿಸುವೆ ಎಂದು ಹೇಳಿದರು. ಈ ಮೂಲಕ, ಕಾಂಗ್ರೆಸ್ ಪಕ್ಷ ತ್ಯಜಿಸುವ, ಮತ್ತೊಂದು ಪಕ್ಷ ಸೇರುವ ಬಗ್ಗೆ ನಿರ್ಧಾರ ತಿಳಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಿದಂತಾಗಿದೆ.
ಫೆ14ಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಇಬ್ರಾಹಿಂ
ಈಗಾಗಲೇ ಕಾಂಗ್ರೆಸ್‌ನಿಂದ ಹೊರಬಂದಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಅಲ್ಲದೇ ವಿಧಾನಪರಿಷತ್ ಸ್ಥಾನಕ್ಕೆ ಲವರ್ಸ್ ಡೇ ಫೆ. 14ರಂದು ರಾಜೀನಾಮೆ ನೀಡುವುದಾಗಿ ಇತ್ತೀಚೆಗೆಷ್ಟೇ ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಆದ್ರೆ, ಹೈಕಮಾಂಡ್‌ನಿಂದ ಫೋನ್ ಬಂದಿರುವುದರಿಂದ ಮುನಿಸಿಕೊಂಡಿದ್ದ ಸಿಎಂ ಇಬ್ರಾಹಿಂ ಕೊಂಚ ತಣ್ಣಗಾಗಿದ್ದಾರೆ.
ಸಿದ್ದರಾಮಯ್ಯ ಮನವೊಲಿಕೆ
ಯೆಸ್. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಇಬ್ರಾಹಿ ಅವರನ್ನ ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ಬಳಿಕ ತಮ್ಮ ಆಪ್ತ ಎಚ್‌ಸಿ ಮಹಾದೇವಪ್ಪ ಅವರನ್ನ ಇಬ್ರಾಹಿಂ ನಿವಾಸಕ್ಕೆ ಕಳುಹಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ.
ದಿಲ್ಲಿಯಿಂದ ಬಂತು ಆಹ್ವಾನ
ಸಿಎಂ ಇಬ್ರಾಹಿಂ ಅವರನ್ನ ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳಲು ಹೈಕಮಾಂಡ್ ಸಹ ಮುಂದಾಗಿದ್ದು, ಚರ್ಚಿಸಲು ದೆಹಲಿ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಬಗ್ಗೆ ಸ್ವತಃ ಇಬ್ರಾಹಿಂ ಅವರೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ದೆಹಲಿಯಿಂದಲೂ ಮಾತನಾಡಲು ಆಹ್ವಾನ ಬಂದಿದೆ. ಯಾರು ಕರೆದಿದ್ದಾರೆ, ಯಾರನ್ನ ಭೇಟಿಯಾಗಬೇಕು ಅದನ್ನ ಈಗ ಹೇಳಲ್ಲ.
ದೆಹಲಿಗೆ ಹೋಗುವ ಬಗ್ಗೆ ಒಂದೆರಡು ದಿನದಲ್ಲಿ ದಿನಾಂಕ ಹೇಳ್ತೇವೆ. ಹೋಗ್ಬೇಕಾ, ಬೇಡವಾ ಎಂಬುದನ್ನ ಜನರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇನೆ ಎಂದು ಹೇಳಿದ್ದರು.
ಎಚ್ ಸಿ ಮಹದೇವಪ್ಪ ಹೇಳಿದ್ದೇನು?
ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಸಿಎಂ ಇಬ್ರಾಹಿಂ ನಿವಾಸಕ್ಕೆ ಹೋಗಿ ಎಚ್‌ಸಿ ಮಾಹಾದೇವಪ್ಪ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾದೇವಪ್ಪ, ಸದ್ಯದಲ್ಲೇ ಸಿಎಂ ಇಬ್ರಾಹಿಂ ಮನೆಗೆ ಸಿದ್ದರಾಮಯ್ಯ ಊಟಕ್ಕೆ ಹೋಗುತ್ತಾರೆ. ಇಬ್ರಾಹಿಂ ಮನಸಿಗೆ ಬೇಜಾರು ನೋವು ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಹೋಗಿ ಮಾತನಾಡುವಂತೆ ಸೂಚಿಸಿದ್ದರು. ನಾನು ಹೋಗಿ ಮಾತನಾಡಿದ್ದೇನೆ. ಸಿಎಂ ಇಬ್ರಾಹಿಂ ಪ್ರೀತಿ ವಿಶ್ವಾಸದಿಂದ ಮಾತನಾಡಿದರು ಎಂದರು.
ದೇಶದಲ್ಲಿ ಅಧರ್ಮ ಅನೀತಿ ತುಂಬಿದೆ. ಸಂವಿಧಾನಕ್ಕೆ ಧಕ್ಕೆ ಬಂದಿದೆ ಇದರ ವಿರುದ್ದ ನಾವು ಹೋರಾಟ ಮಾಡಬೇಕು ಅಂತಾ ಹೇಳಿದ್ದೇನೆ.
ಬೇಜಾರು ನೋವು ಮಾಡಿಕೊಳ್ಳದಂತೆ ಮನವಿ ಮಾಡಿದ್ದೇನೆ. ಪ್ರಜಾಪ್ರಭುತ್ವ ಸಂರಕ್ಷಣೆ ಮಾಡೋಣ ಅಂತಾ ತಿಳಿಸಿದ್ದೇನೆ. ಇಬ್ರಾಹಿಂ ಭರವಸೆ ನೀಡಿದ್ದಾರೆ. ನಾನು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಆಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಅವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಅನಿಸುವುದಿಲ್ಲ ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ