ವಾಜಪೇಯಿ ಹೆಸರೆತ್ತಿ ಕೇಂದ್ರಕ್ಕೆ ಪರೋಕ್ಷ ಸಂದೇಶ ಕೊಟ್ರಾ ಬಿಎಸ್‌ವೈ?

By Suvarna NewsFirst Published Jul 26, 2021, 1:25 PM IST
Highlights

* ಸಾಧನಾ ಸಮಾವೇಶದ ಭಾಷಣದಲ್ಲಿ ಕೆಂದ್ರಕ್ಕೆ ಪರೋಕ್ಷ ಸಂದೇಶ ಕೊಟ್ಟ ಬಿಎಸ್‌ವೈ

* ರಾಜೀನಾಮೆ ಬಳಿಕವೂ ಮಾಧ್ಯಮದೆದುರು ಅದೇ ಮಾತು

* ಮತ್ತೊಂದು ಪವರ್ ಸೆಂಟರ್ ಆಗ್ತಾರಾ ಯಡಿಯೂರಪ್ಪ

ಬೆಂಗಳೂರು(ಜು.26): ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯಪಾಲರನ್ನು ಇದನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಎಲ್ಲಾ ಸವಾಲುಗಳನ್ನೆದುರಿಸಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಅವಧಿ ಎರಡು ವರ್ಷಕ್ಕೆ ಕೊನೆಗೊಂಡಿದೆ. ಬಿಎಸ್‌ವೈ ಆಡಳಿತದ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ವಿದಾಯ ಭಾಷಣ ನೀಡಿರುವ ಯಡಿಯೂರಪ್ಪ, ರಾಜೀನಾಮೆ ಘೋಷಿಸಿದ್ದಾರೆ. ಆದರೆ ಇದರೊಂದಿಗೆ ಕೇಂದ್ರಕ್ಕೂ ಪರೋಕ್ಷ ಸಂದೇಶವೊಂದನ್ನು ನೀಡಿದ್ದಾರೆ.

ಹೌದು ಸಾಧನಾ ಸಮಾವೇಶ ವೇದಿಕೆಯನ್ನೇ ವಿದಾಯ ಭಾಷಣಕ್ಕಾಗಿ ಬಳಸಿದ ಬಿ. ಎಸ್. ಯಡಿಯೂರಪ್ಪ ಭಾಷಣದಲ್ಲಿ ತಮ್ಮ ರಾಜಕೀಯ ಬದುಕನ್ನು ನೆನಪಿಸಿಕೊಂಡಿದ್ದಾರೆ. ಹೇಗೆ ರಾಜ್ಯದಲ್ಲಿ ತಾವು ಕಷ್ಟಪಟ್ಟು ಕಾರ್ಯಕರ್ತರ ಸಹಕಾರದಿಂದ ಪಕ್ಷವನ್ನು ಅಭಿವೃದ್ಧಿಪಡಿಸಿದೆವು ಎಂದೂ ಉಲ್ಲೇಖಿಸಿದ್ದಾರೆ. ಅಲ್ಲದೇ ಮುಂದೆಯೂ ತಾವು ಕರ್ನಾಟಕದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮ ವಹಿಸುವುದಾಗಿಯೂ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್‌. ಯಡಿಯೂರಪ್ಪ ರಾಜೀನಾಮೆ, ವಿದಾಯ ಭಾಷಣ!

ಇದೇ ವೇಳೆ ದಿವಂಗತ ಪ್ರಧಾನಿ ವಾಜಪೇಯಿ ಅವರೊಂದಿಗಿನ ಮಾತುಕತೆಯನ್ನು ಮೆಲುಕು ಹಾಕಿದ ಬಿ. ಎಸ್. ಯಡಿಯೂರಪ್ಪ ಅಂದು ವಾಜಪೇಯಿ ಕೇಂದ್ರದಲ್ಲಿ ನನಗೆ ಸಚಿವರಾಗುವಂತೆ ಸೂಚಿಸಿದ್ದರು. ಆದರೆ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು. ಯಾವ ಕಾರಣಕ್ಕೂ ದೆಹಲಿಗೆ ಬರಲ್ಲ ಎಂದು ಹೇಳಿದ್ದೆ ಎಂದಿದ್ದಾರೆ. ಈ ಮಾತನ್ನು ಉಲ್ಲೇಖಿಸುವ ಮೂಲಕ ಬಿಎಸ್‌ವೈ ಪರೋಕ್ಷವಾಗಿ ಕೇಂದ್ರಕ್ಕೆ ತಾವು ರಾಜ್ಯಪಾಲರಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಹೌದು ಬಿಎಸ್‌ವೈ ಸಿಎಂ ಸ್ಥಾನ ತೊರೆದರೆ, ಅದಕ್ಕೂ ಉನ್ನತವಾದ ರಾಜ್ಯಪಾಲರ ಹುದ್ದೆ ನೀಡುವುದು. ಈ ಮೂಲಕ ಅವರ ಘನತೆಗೆ ತಕ್ಕ ಸ್ಥಾನಮಾನ ನೀಡಿ ವೀರಶೈವ, ಲಿಂಗಾಯತ ಸಮುದಾಯವನ್ನು ಸಮಾಧಾನಪಡಿಸುವ ಸಂದೇಶ ನೀಡುವುದು ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆದರೀಗ ಈ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಸಾಧನಾ ಸಮಾವೇಶದಲ್ಲಿ ವಾಜಪೇಯಿ ಜೊತೆಗಿನ ಪ್ರಸಂಗ ಉಲ್ಲೇಖಿಸಿ ಪರೋಕ್ಷ ಸಂದೇಶ ನೀಡಿರುವ ಯಡಿಯೂರಪ್ಪ, ರಾಜ್ಯಪಾಲರಿಗೆ ರಾಜೀನಾಮೆ ಕೊಟ್ಟ ಬಳಿಕ ಮಾಧ್ಯಮಗಳೆದುರೂ ತಾವು ರಾಜ್ಯಪಾಲ ಸ್ಥಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ರಾಜ್ಯದಲ್ಲೇ ಪಕ್ಷ ಸಂಘಟನೆ ಮಾಡುತ್ತೇನೆ, ಸಕ್ರಿಯ ರಾಜಕಾರಣದಲ್ಲೇ ತೊಡಗಿಸಿಕೊಳ್ಳುತ್ತೇನೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಬಿಎಸ್‌ವೈ ಈ ಮಾತುಗಳಿಂದ ಕೇಂದ್ರ ಮುಂದೇನು ಮಾಡುತ್ತದೆ. ಬಿಎಸ್‌ವೈ ಬೆಂಬಲಿಗರ ನಡೆ ಏನಾಗಲಿದೆ? ವೀರಶೈವ ಸಮುದಾಯದ ಒಲವು ಯಾರ ಕಡೆ ವಾಲುತ್ತದೆ ಎಂಬಿತ್ಯಾದಿ ಸವಾಲುಗಳು ಎದ್ದಿವೆ. ಜೊತೆಗೆ ಯಡಿಯೂರಪ್ಪ ಅವರ ಹೇಳಿಕೆ ಮತ್ತೊಂದು ಪವರ್ ಸೆಂಟರ್ ಆಗುವ ಸುಳಿವೂ ಕೊಟ್ಟಿದೆ. 

click me!