ಲೋಕಸಭಾ ಚುನಾವಣೆಗೆ ನಮ್ಮ ಕುಟುಂಬದ ಯಾರೂ ಸ್ಪರ್ಧಿಸಲ್ಲ: ಸಚಿವ ಸತೀಶ ಜಾರಕಿಹೊಳಿ

By Kannadaprabha NewsFirst Published Feb 25, 2024, 3:00 AM IST
Highlights

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಲು ಹೈಕಮಾಂಡ್​​ ಮಟ್ಟದಲ್ಲಿ ಚರ್ಚೆಗಳು ನಡೆದಿರುವುದು ನಿಜ. ಆದರೆ ನನಗೆ ಆಸಕ್ತಿಯಿಲ್ಲ. ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಸ್ಥಾನಗಳಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಹೆಚ್ಚು ಜನಪ್ರಿಯತೆ ಗಳಿಸಿರುವ ಇಬ್ಬರು ಉತ್ತಮ ಅಭ್ಯರ್ಥಿಗಳನ್ನು ಪಕ್ಷದ ಸ್ಥಳೀಯ ಘಟಕ ಆಯ್ಕೆ ಮಾಡುತ್ತದೆ ಎಂದು ಹೇಳಿದ ಸಚಿವ ಸತೀಶ ಜಾರಕಿಹೊಳಿ 

ಬೆಳಗಾವಿ(ಫೆ.25): ಲೋಕಸಭಾ ಚುನಾವಣೆಯಲ್ಲಿ ನಾನಾಗಲಿ, ನನ್ನ ಪುತ್ರಿ ಪ್ರಿಯಾಂಕಾ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬೆಳಗಾವಿ ತಾಲೂಕಿನ ಕಣಕುಂಬಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಇಲ್ಲವೇ ಚಿಕ್ಕೋಡಿ ಕ್ಷೇತ್ರದಿಂದ ಜಾರಕಿಹೊಳಿ ಕುಟುಂಬದ ಯಾರನ್ನೂ ಕಣಕ್ಕಿಳಿಸುವ ಯೋಚನೆ ಇಲ್ಲ. ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತೇವೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಲು ಹೈಕಮಾಂಡ್​​ ಮಟ್ಟದಲ್ಲಿ ಚರ್ಚೆಗಳು ನಡೆದಿರುವುದು ನಿಜ. ಆದರೆ ನನಗೆ ಆಸಕ್ತಿಯಿಲ್ಲ. ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಸ್ಥಾನಗಳಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಹೆಚ್ಚು ಜನಪ್ರಿಯತೆ ಗಳಿಸಿರುವ ಇಬ್ಬರು ಉತ್ತಮ ಅಭ್ಯರ್ಥಿಗಳನ್ನು ಪಕ್ಷದ ಸ್ಥಳೀಯ ಘಟಕ ಆಯ್ಕೆ ಮಾಡುತ್ತದೆ ಎಂದು ಹೇಳಿದರು.

ಬೆಳಗಾವಿ ಎಥೆನಾಲ್‌ ಉತ್ಪಾದನೆಯ ಹಬ್‌ ಆಗಲಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ತೋರಿಸಿದರೆ ಅವರ ಪುತ್ರನಿಗೆ ಟಿಕೆಟ್ ನೀಡಲಾಗುವುದು ಎಂದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನಾಗಲಿ ಅಥವಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನನ್ನ ಪುತ್ರಿ ಪ್ರಿಯಂಕಾ ಜಾರಕಿಹೊಳಿಯಾಗಲಿ ಸ್ಪರ್ಧೆ ಮಾಡುವುದಿಲ್ಲ. ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತೇವೆ. ಅಲ್ಲದೇ ನಮ್ಮ ಕ್ಷೇತ್ರದಲ್ಲಿ ಕುಟುಂಬ ಮುಖ್ಯ ಬರಲ್ಲ. ಇಲ್ಲಿ ಏನೆ ಇದ್ದರೂ ಗೆಲ್ಲುವುದೊಂದೆ ಮುಖ್ಯ ಎಂದು ಹೇಳಿದರು.

ಖಂಡಿತವಾಗಿಯೂ ಅಭ್ಯರ್ಥಿಗಳ ನಾಮನಿರ್ದೇಶನವು ಜಾತಿ ಲೆಕ್ಕಾಚಾರಗಳನ್ನು ಆಧರಿಸಿರುತ್ತದೆ. ಆದರೆ, ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಸಮುದಾಯದಲ್ಲಿ ಮಾತ್ರವಲ್ಲದೆ ಇತರ ಸಮುದಾಯಗಳಲ್ಲಿಯೂ ಜನಪ್ರಿಯರಾಗಬೇಕು. ಕಳೆದ ಬಾರಿ ಪ್ರಬಲ ಅಭ್ಯರ್ಥಿಗಳಿರಲಿಲ್ಲ. ಹಾಗಾಗಿ ನಾನೇ ಸ್ಪರ್ಧಿಸಬೇಕಾಯಿತು. ಆದರೆ, ಈ ಬಾರಿ ಪ್ರಬಲ ಅಭ್ಯರ್ಥಿಗಳಿದ್ದಾರೆ ಎಂದರು. ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬದಲಾಗದು. ಸಿಎಂ ಸಿದ್ದರಾಮಯ್ಯ ಅವರನ್ನು ಬೀಳಿಸುವವರು ಯಾರಿದ್ದಾರೆ ಎಂದು ಪ್ರಶ್ನಿಸಿದರು.

ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್‌ ಸೇರ್ಪಡೆ ಸಂಬಂಧ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಅವರು ನಮ್ಮನ್ನು ಸಂಪರ್ಕಿಸಿಲ್ಲ. ಕತ್ತಿ ಅವರಿಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ನಡೆದಿದೆ ಭಾರೀ ಕಸರತ್ತು..!

ಕಳಸಾ - ಬಂಡೂರಿ ನಾಲಾ ಕಾಮಗಾರಿಗೆ ಸುಪ್ರೀಂಕೋರ್ಟ ತಡೆಯಾಜ್ಞೆ ನೀಡಿದೆ. ಹಾಗಾಗಿ, ಈ ಕುರಿತು ಏನು ಮಾಡಲಾಗದು. ತೆರಿಗೆ ಸಂಗ್ರಹವಾದ ಬಳಿಕ ನಾವು ಎಲ್ಲ ಸಮುದಾಯಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.

ಅಪಘಾತ ತಡೆಯಲು ಜಾಗೃತಿ ಅಗತ್ಯ: ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 25 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್‌ ಜಾರಕಿಹೊಳಿ, ಅಪಘಾತ ತಡೆಗಟ್ಟಲು ಪೂಲೀಸ್‌ ಇಲಾಖೆ, ಆರ್‌ಟಿಓ ಅಧಿಕಾರಗಳು ಜಂಟಿಯಾಗಿ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆ ಇರುತ್ತದೆ. ಸರ್ವಿಸ್‌ ರಸ್ತೆಗಳು ಇರುತ್ತವೆ. ಆದರೆ ರಾಜ್ಯ ಹೆದ್ದಾರಿ, ಸ್ಥಳೀಯ ರಸ್ತೆಗಳಲ್ಲಿ ಹಾಗಲ್ಲ. ಆದ್ದರಿಂದ ಅಪಘಾತ ತಡೆಯಲು ಎಲ್ಲರೂ ಜಾಗೃತರಾಗಬೇಕೆಂದು ತಿಳಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮನೆಗೆ ಊಟಕ್ಕೆ ಆಹ್ವಾನಿಸಿಸ ಬಗ್ಗೆ ಮಾತನಾಡಿ, ನಾನು ರಣದೀಪ್‌ಸಿಂಗ್‌ ಸುರ್ಜೇವಾಲ್‌ ಅವರ ಮಗಳ ಮದುವೆ ಕಾರ್ಯಕ್ರಮಕ್ಕಾಗಿ ಚಂಡಿಗಡಕ್ಕೆ ಹೋಗಿದ್ದೆ. ಅನೇಕರು ಅಲ್ಲೇ ಇದ್ದರು. ಅದೇ ಕಾರಣಕ್ಕಾಗಿ ಊಟಕ್ಕೆ ಹೋಗಿಲ್ಲ. ರಾಜಸಭೆ ಚುನಾವಣೆಗಾಗಿ ಇನ್ನೆರಡು ದಿಗಳಲ್ಲಿ ಸಭೆ ಇದೆ. ಆ ಸಭೆಗೆ ಹೋಗುತ್ತೇನೆಂದು ಹೇಳಿದರು.

click me!