
ಬೆಂಗಳೂರು (ಅ.07): ‘ಜಾತಿ ಗಣತಿಗೆ ಬಿಜೆಪಿ ವಿರೋಧವಿಲ್ಲ. ಆದರೆ ವೈಜ್ಞಾನಿಕವಾಗಿ ನಡೆಯಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಾತಿ ಗಣತಿ ನಡೆಸಿದ್ದರು. ಆಗ ಅವರ ಅವಧಿಯಲ್ಲೇ ಇದನ್ನು ಏಕೆ ಅನುಷ್ಠಾನಗೊಳಿಸಲಿಲ್ಲ. ಇದನ್ನು ನಾನು ಕೇಳುತ್ತಿಲ್ಲ. ಅವರದೇ ಪಕ್ಷದ ಶಾಸಕ ಬಾಲಕೃಷ್ಣ, ಸಂಸದ ಡಿ.ಕೆ.ಸುರೇಶ್ ಕೇಳುತ್ತಿದ್ದಾರೆ. ಜಾತಿ ಗಣತಿಯನ್ನು ಬಿಜೆಪಿ ವಿರೋಧಿಸುತ್ತಿಲ್ಲ. ಅವೈಜ್ಞಾನಿಕವಾಗಿ ಗಣತಿ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳಿದ್ದಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸಹ ವಿರೋಧಿಸಿದ್ದಾರೆ. ಆದ್ದರಿಂದ ವೈಜ್ಞಾನಿಕವಾಗಿ ನಡೆಯಬೇಕು ಎಂದು ಹೇಳಿದರು.
ಅನ್ಯಾಯ ಸರಿಪಡಿಸಲು ಹೋರಾಟ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಈಗ ಅವರು ಜಾತಿ ಗಣತಿ ಜಾರಿಗೊಳಿಸುವ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸಲಿದೆ. ವಾಲ್ಮೀಕಿ ನಿಗಮದ ಹಣ ದುರುಪಯೋಗ ಮಾಡಿಕೊಂಡು ತುಳಿತಕ್ಕೊಳಗಾದ ಸಮುದಾಯಕ್ಕೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ಅನ್ಯಾಯ ಸರಿಪಡಿಸಲು ಹೋರಾಟ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸುಳ್ಳು ಆರೋಪ ಮಾಡಿದರೆ ಜನರ ಮುಂದೆ ವಸ್ತುಸ್ಥಿತಿ ಇಡುತ್ತೇವೆ: ಸಿಎಂ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹುಟ್ಟೂರಿಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಅಂಬೇಡ್ಕರ್ ನಮ್ಮ ಪಕ್ಷಕ್ಕೆ ಸೇರಿದವರು ಎಂದು ಹೇಳಿಕೊಳ್ಳುವವರು ಅಂಬೇಡ್ಕರ್ ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಆಗಮಿಸಿರಲಿಲ್ಲ. ಅಂಬೇಡ್ಕರ್ ಅವರನ್ನ ತುಳಿಯುವ ಕೆಲಸವನ್ನು ಮಾಡಿದರು ಎಂದು ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.