
ಬೆಂಗಳೂರು(ಅ.23): 'ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ' ಎಂದೂ ಅವರು ಖಡಕ್ಕಾಗಿ ಹೇಳಿದ್ದಾರೆ.
ಮಂಗಳವಾರ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕರೆ ಮಾಡಿ ಸಿ.ಪಿ.ಯೋಗೇಶ್ವರ್‌ಗೆ ಬಿಜೆಪಿಯಿಂದಲೇ ಸ್ಪರ್ಧೆಗೆ ಬಿಟ್ಟುಕೊಡಿ ಎಂದಿದ್ದಾರೆ.
ಯೋಗೇಶ್ವರ್ ದಿಢೀರ್ ರಾಜೀನಾಮೆ: ಸ್ವತಂತ್ರ ಸ್ಪರ್ಧೆ?, ಕಾಂಗ್ರೆಸ್ ಸೇರ್ಪಡೆ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಲಿ ಎಂದಿದ್ದಾರೆ. ಚರ್ಚೆ ನಡೆಯುತ್ತಿದೆ. ನಾಮಪತ್ರ ಸಲ್ಲಿಸಲು ಇನ್ನೂ ಸಮಯ ಇದೆ. ನೋಡೋಣ ಎಂದು ಮಾರ್ಮಿಕವಾಗಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಸರದಿಯಲ್ಲಿ ನಿಂತಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ಸಿಗರು ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಸಾಲು ಸಾಲಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೂರು ದಿನಗಳ ಹಿಂದೆ ಜೆ.ಪಿ.ನಡ್ಡಾ ನನ್ನ ಮುಂದೆ ಪ್ರಸ್ತಾವನೆ ಇಟ್ಟು, ಅವರಿಗೆ ಜೆಡಿಎಸ್ ಪಕ್ಷದಿಂದಲೇ ಜಿ ಫಾರಂ ಕೊಡಿ ಎಂದಿದ್ದರು. ಅವರ ಮಾತಿಗೆ ಗೌರವ ಕೊಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಪಕ್ಷದ ವೇದಿಕೆಯಲ್ಲಿಯೂ ಈ ಬಗ್ಗೆ ಸಮಾಲೋಚನೆ ನಡೆಸಿದ್ದೆ ಎಂದು ತಿಳಿಸಿದರು. ಮೊದಲು ಯಾವ ಪಕ್ಷದಿಂದಲಾದರೂ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದಿದ್ದ ಯೋಗೇಶ್ವರ್, ಆಮೇಲೆ ವರಸೆ ಬದಲಿಸಿದರು ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.