‘ಅನರ್ಹರ ರಾಜೀನಾಮೆಗೂ ನನಗೂ ಸಂಬಂಧವಿಲ್ಲ’

By Kannadaprabha NewsFirst Published Nov 4, 2019, 7:17 AM IST
Highlights

ಅನರ್ಹ ಶಾಸಕರಿಗೂ ನನಗೂ ಯಾವುದೇ ಸಂಬಂಧಿವಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಬೆಂಗಳೂರು [ನ.04]:  ಸಮ್ಮಿಶ್ರ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಅನರ್ಹ ಶಾಸಕರ ರಾಜೀನಾಮೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್‌ ಕಾಲೋನಿಯಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನರ್ಹ ಶಾಸಕರ ಕುರಿತ ನನ್ನ ಹೇಳಿಕೆಯೊಂದನ್ನು ತಿರುಚಿ, ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಗೊಂದಲ ಹುಟ್ಟಿಸುವ ಷಡ್ಯಂತ್ರ ರೂಪಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಅನರ್ಹ ಶಾಸಕರು ತಮ್ಮದೇ ಆದ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು.

ಟಿಕೆಟ್‌ ಕೊಡುತ್ತೇವೆ ಎಂದು ಅನರ್ಹ ಶಾಸಕರಿಗೆ ಹೇಳಿಲ್ಲ. ನಾನು ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ತಿರುಚಿ ಕಾಂಗ್ರೆಸ್‌ನವರು ಮನಬಂದಂತೆ ವ್ಯಾಖ್ಯಾನಿಸುತ್ತಿದ್ದಾರೆ. ಈ ಆಡಿಯೋ ವಿಚಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾಪಿಸಿದರೆ ಕಾಂಗ್ರೆಸ್‌ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣಕ್ಕಾಗಿ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಸುಭದ್ರವಾಗಿದ್ದು, ಉಪ ಚುನಾವಣೆ ಬಳಿಕ ಮತ್ತಷ್ಟುಗಟ್ಟಿಯಾಗಲಿದೆ. ನನ್ನ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಭೇಟಿ ಮಾಡಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರ. ಆಡಿಯೋ ಇಟ್ಟುಕೊಂಡು ರಾಜ್ಯಪಾಲರ ಬಳಿ ಹೋಗಿರುವುದರಲ್ಲಿ ಅರ್ಥ ಇಲ್ಲ. ಸಿದ್ದರಾಮಯ್ಯ ಅವರು ದೊಡ್ಡ ನಾಯಕರಂತೆ ಬಿಂಬಿಸಿಕೊಳ್ಳಲು ಹೋಗುತ್ತಿದ್ದಾರೆ. ಅನರ್ಹಗೊಂಡಿರುವ ಶಾಸಕರು ಮುಂಬೈಗೆ ಹೋಗಿದ್ದು ಇಡೀ ದೇಶಕ್ಕೆ ಗೊತ್ತಾಗಿದೆ. ಇದಕ್ಕೂ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಏನು ಸಂಬಂಧ? ವಿನಾಕಾರಣ ಅವರ ರಾಜೀನಾಮೆ ಕೇಳುವುದು ಮೂರ್ಖತನದ ಪರಮಾವಧಿ ಎಂದು ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸಿಗರು ಪ್ರಚಾರ ಪ್ರಿಯರು. ಏನೋ ಹೇಳಿ ಅದನ್ನು ಪತ್ರಿಕೆಯಲ್ಲಿ ಬರುವಂತೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಇದಕ್ಕೆ ಗೌರವವೂ ಇಲ್ಲ, ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಕಾಂಗ್ರೆಸ್‌ನ ಈ ವರ್ತನೆಗೆ ಉಪ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

click me!