ಚಿತ್ತಾಪುರ ಘಟನೆಗೆ ದೂರು ಕೊಟ್ಟಿದ್ದರೂ ಕ್ರಮ ಕೈಗೊಂಡಿಲ್ಲ: ಛಲವಾದಿ ನಾರಾಯಣಸ್ವಾಮಿ

Kannadaprabha News   | Kannada Prabha
Published : May 30, 2025, 05:43 AM IST
LoP Karnataka Legislative Council, Chalavadi Narayanaswamy (Photo/ANI)

ಸಾರಾಂಶ

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನನ್ನ ವಿರುದ್ಧ ನಡೆದ ದಿಗ್ಬಂಧನ, ಅಹಿತಕರ ಘಟನೆಗಳ ಕುರಿತು ದೂರು ಕೊಟ್ಟಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ.30): ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನನ್ನ ವಿರುದ್ಧ ನಡೆದ ದಿಗ್ಬಂಧನ, ಅಹಿತಕರ ಘಟನೆಗಳ ಕುರಿತು ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ತಾಪುರದಲ್ಲಿ ಐದು ಗಂಟೆಗಳ ಕಾಲ ನನ್ನನ್ನು ಕೂಡಿ ಹಾಕಿದ್ದರು. ನಮ್ಮ ಜನ ಬರದಂತೆ ತಡೆದರು. ನನ್ನ ಕಾರಿನ ಮೇಲೆ ಮಸಿ ಸುರಿದರು.

ಕಲ್ಲುಗಳನ್ನು ಜಮಾಯಿಸಿ ಇಟ್ಟಿದ್ದರು. ಮೊಟ್ಟೆ ತೂರಲು, ಕಲ್ಲು ತೂರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ಗಮನಕ್ಕೆ ತಂದರು. ನಾನು ಅಲ್ಲಿಂದಲೇ ಗೃಹ ಸಚಿವರು, ಎಡಿಜಿಪಿಗೆ ಕರೆ ಮಾಡಿ ಮಾತನಾಡಿದೆ. ಸುಮಾರು 10 ಸಲ ಎಸ್‌ಪಿಗೆ ಮಾತನಾಡಿದ್ದೆ ಎಂದು ವಿವರಿಸಿದರು. ಹಿಂದೆ ನಮ್ಮ ಸರ್ಕಾರ ಇದ್ದಾಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ಕೊಟ್ಟಿದ್ದರು. ಮೊಟ್ಟೆ ಎಸೆದರೆಂದು ದೊಡ್ಡ ರಾದ್ಧಾಂತ ಮಾಡಿದ್ದರು. ನಾವು ಅವರಿಗೆ ತುಂಬಾ ರಕ್ಷಣೆ ಕೊಟ್ಟಿದ್ದೆವು ಎಂದು ಹೇಳಿದರು.

ದತ್ತಾತ್ರೇಯ ಶಾಂತಪ್ಪ ಇಕ್ಕಲಗಿ ಎಂಬುವವರು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ವಿರುದ್ಧ ದೂರು ನೀಡಿದ್ದಾರೆ. ಅವರು ಸಮಾಜಸೇವಕ. ಅವರಿಗೆ ಕಾಂಗ್ರೆಸ್ ಸರ್ಕಾರವು ಈಚೆಗೆ ಅಂಬೇಡ್ಕರ್‌ ಪ್ರಶಸ್ತಿ ಕೊಟ್ಟಿದೆ. ಪ್ರಶಸ್ತಿ ಋಣ ತೀರಿಸಲು ಅವರು ದೂರು ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಛಲವಾದಿ, ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಹೊಲೆಯ, ದಲಿತ ಎಂಬ ಪದಗಳನ್ನು ತಮ್ಮ ಭಾಷಣದ ವೇಳೆ ಬಳಸಿದ್ದರೆ ನಾನೇ ಅವರ ಮೇಲೆ ದೂರು ನೀಡುತ್ತೇನೆ ಎಂದು ಸವಾಲೆಸೆದರು.

ಕಾಂಗ್ರೆಸ್ ಆಡಳಿತ ಗಾರ್ಬೇಜ್ ಗೆ ಸಮ: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗಾರ್ಬೇಜ್‌ ಪರಿಸ್ಥಿತಿ ಹೇಗಿದೆಯೋ ಕಾಂಗ್ರೆಸ್‌‍ ಸರ್ಕಾರದ ಆಡಳಿತವೂ ಗಾರ್ಬೇಜ್‌ಗೆ (ಕಸಕ್ಕೆ) ಸಮನಾಗಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಲಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ 40- 45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ಎಂದೂ ಕೂಡ ನೋಡಿರಲಿಲ್ಲ. ರಾಜ್ಯದಲ್ಲಿ ಸಂಪೂರ್ಣ ಅಭಿವೃದ್ಧಿ ಶೂನ್ಯ ಹಾಗೂ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅತ್ಯಂತ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಚಯಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಗಮನ ಕೊಡುತ್ತಿಲ್ಲ, ಹಿಂದುಳಿದವರು, ದಲಿತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಬದಲಾಗಿ ಇವರೆಲ್ಲವನ್ನೂ ಮರೆಮಾಚಿದ್ದಾರೆ. ದುಡ್ಡೆಷ್ಟು ಹೊಡೆದಿರಿ. ಆಸ್ತಿ ಎಷ್ಟು ಮಾಡಿದ್ದೀರಿ. ಜನರಿಗೆ ಎಷ್ಟು ತೆರಿಗೆ ಹಾಕಿದ್ದೀರಿ. ಬೆಲೆ ಏರಿಕೆ ಎಷ್ಟು ಮಾಡಿದಿರಿ. ದಲಿತರ ಹಣ ಎಷ್ಟು ಲೂಟಿ ಮಾಡಿದ್ದೀರಿ. ಎಷ್ಟು ಜನರ ಹನಿಟ್ರಾಪ್‌ ಮಾಡಿದಿರಿ? ಫೋನ್‌ ಟ್ಯಾಪಿಂಗ್‌ ಎಷ್ಟಾಗಿದೆ. ಎಂಬ ಚರ್ಚೆ ಆಗುವಂತಾಗಿದೆ. ಇದು ಆಡಳಿತವೇ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಈ ಸರ್ಕಾರ ಇರಲೇಬಾರದಿತ್ತು. ಇಂಥ ಪರಿಸ್ಥಿತಿಗೆ ರಾಜ್ಯವನ್ನು ತಳ್ಳುವ ಬದಲಾಗಿ ರಾಜೀನಾಮೆ ಕೊಟ್ಟು ಆ ಕಡೆ ಹೊರಟು ಹೋಗಬೇಕಿತ್ತು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ