
ಬೆಂಗಳೂರು : ರಾಜ್ಯದಲ್ಲಿ ಪಕ್ಷ ಸಂಘಟಿಸಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಮ್ಮಿಕೊಂಡಿರುವ ‘ಜನರೊಂದಿಗೆ ಜೆಡಿಎಸ್’ ರಾಜ್ಯ ಪ್ರವಾಸಕ್ಕೆ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಸಸಿಗೆ ನೀರೆರೆಯುವ ಮೂಲಕ ನಿಖಿಲ್ ಕುಮಾರಸ್ವಾಮಿ ನೇತೃತ್ವದ ರಾಜ್ಯ ಪ್ರವಾಸಕ್ಕೆ ಮುಖಂಡರು ಚಾಲನೆ ಕೊಟ್ಟರು. ಇದೇ ವೇಳೆ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಖದ್ದು ಮಿಸ್ಡ್ ಕಾಲ್ ನೀಡುವ ಮೂಲಕ ‘ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನ’ಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಸಂಘಟಿಸುವ ಉದ್ದೇಶದಿಂದ ಸೋಮವಾರದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ತುಮಕೂರು ಜಿಲ್ಲೆಯಿಂದ ಅಧಿಕೃತವಾಗಿ ಪ್ರವಾಸ ಆರಂಭ ಮಾಡುತ್ತೇನೆ. ಹಿರಿಯರು ಸೇರಿ ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರೊಂದಿಗೆ ಜನತಾದಳ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕರ್ತರ ಗುರುತಿಸುವ ಕೆಲಸ:
ಮೊದಲ ಹಂತದ ಪ್ರವಾಸದಲ್ಲಿ 58 ದಿನಗಳ ಕಾಲ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೇನೆ. ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ. ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುತ್ತೇನೆ. ಕನಿಷ್ಠ 50 ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಹೋಗೋಣ. ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು. ಪಕ್ಷ ಸಂಘಟನೆ ಜತೆಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತೆರೆದಿರುವ ಕೆಲಸ ಮಾಡಲಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್.ಪ್ರಸಾದ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಗೌಡ, ಶಾಸಕರಾದ ಶರಣಗೌಡ ಕಂದಕೂರ್, ಶಾರದಾ ಪೂರ್ಯನಾಯಕ್ ಸೇರಿ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಉಪಸ್ಥಿತರಿದ್ದರು.
ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ
ಜೆಡಿಎಸ್ ಪಕ್ಷ ಸಂಘಟಿಸಲು ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆಸಕ್ತರು 9964002028 ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟರೆ, ಒಂದು ಲಿಂಕ್ ಬರಲಿದೆ. ಈ ಲಿಂಕ್ ತೆರೆದು ಒಟಿಪಿ ಹಾಕಿದರೆ, ಸದಸ್ಯತ್ವ ಅರ್ಜಿ ತೆರೆದುಕೊಳ್ಳಲಿದೆ. ಈ ಅರ್ಜಿ ಭರ್ತಿ ಮಾಡಿ ಫೋಟೋ ಆಪ್ಲೋಡ್ ಮಾಡಿ ಸಬ್‌ಮಿಟ್ ಮಾಡಿದರೆ ಸದಸ್ಯತ್ವದ ಐಡಿ ಕಾರ್ಡ್ ಬರಲಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಜನರೊಂದಿಗೆ ಜೆಡಿಎಸ್’ ಹೆಸರಲ್ಲಿ ಹಮ್ಮಿಕೊಂಡಿರುವ ಪಕ್ಷದ ಸಂಘಟನಾ ರಾಜ್ಯ ಪ್ರವಾಸ ಮತ್ತು ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಗೌಡ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮತ್ತಿತರರಿದ್ದರು.
ಮೊದಲ ಹಂತದ ಪ್ರವಾಸದಲ್ಲಿ 58 ದಿನಗಳ ಕಾಲ ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ
ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರ ಭೇಟಿ. ತಳಮಟ್ಟದ ಕಾರ್ಯಕರ್ತರ ಗುರುತಿಸುವ ಕೆಲಸ
ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಹೊಸದಾಗಿ ಕನಿಷ್ಠ 50 ಲಕ್ಷ ಜನ ಸದಸ್ಯರ ಸೇರ್ಪಡೆ ಗುರಿ
ಪಕ್ಷ ಸಂಘಟನೆ ಜತೆಜತೆಗೆ ಪ್ರವಾಸದ ವೇಳೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತೆರೆದಿರುವ ಕೆಲಸ
ಜೆಡಿಎಸ್ ಮುಗಿಸುವ ವ್ಯಕ್ತಿ ಹುಟ್ಟಲ್ಲ: ಎಚ್‌ಡಿಡಿ
ಜೆಡಿಎಸ್ ಕುಟುಂಬದ ಪಕ್ಷವಲ್ಲ. ಇದು ನಿಷ್ಠಾವಂತ ಕಾರ್ಯಕರ್ತರ ಪಕ್ಷ. ನಾನು ಹೋದ ಬಳಿಕವೂ ಜೆಡಿಎಸ್ ಪಕ್ಷ ಇರಲಿದೆ, ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಎಂದಿಗೂ ಹುಟ್ಟಲು ಸಾಧ್ಯವಿಲ್ಲ.
ಎಚ್.ಡಿ.ದೇವೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.