
ರಾಮನಗರ (ಮಾ.26): ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಎನ್ ಒಸಿ ತೆಗೆದುಕೊಂಡು ಬರಲಿ. ಮರುದಿನವೇ ಕೇಂದ್ರದ ಅನುಮತಿಗೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿರವರು ಹೋರಾಟ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ರಾಮನಗರದ ಚಿಕ್ಕೇಗೌಡನದೊಡ್ಡಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೆನೆಗುದಿಗೆ ಬಿದ್ದ ಎತ್ತಿನ ಹೊಳೆ ಯೋಜನೆಗೆ ಮರುಜೀವ ಪಡೆಯಲು ದೇವೇಗೌಡರು ಸದನದಲ್ಲಿ ಅಂಗಲಾಚಿ ಬೇಡಿದ್ದಾರೆ. ದೇವೇಗೌಡರ ಹಿರಿತನಕ್ಕೆ ಕೇಂದ್ರ ನಾಯಕರು ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡ ಮತ್ತು ಕುಮಾರಸ್ವಾಮಿ ಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಸಿದ್ರಾಮಣ್ಣ ಕೇರಳದ ಮುಖ್ಯಮಂತ್ರಿನಾ?: ಮಾನ್ಯ ಸಿದ್ದರಾಮಯ್ಯನವರು ಕೇರಳದ ಮುಖ್ಯಮಂತ್ರಿಯೋ ಅಥವಾ ಕರ್ನಾಟಕದ ಮುಖ್ಯಮಂತ್ರಿಯೋ? ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅತಿವೃಷ್ಟಿಯಾಗಿತ್ತು. ಆಗ ರೈತರು ಪರಿಹಾರ ಕೇಳಿದ್ದರು, ಅವರ ಕೂಗು ಸಿದ್ದರಾಮಯ್ಯ ಅವರಿಗೆ ಕೇಳಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಗುಡುಗಿದರು. ರಾಜ್ಯ ಸರ್ಕಾರ ₹10 ಕೋಟಿ ಅನುದಾನ ನೀಡಿರುವ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು, ಕೇರಳದಲ್ಲಿ ಭೂಕುಸಿತದಿಂದ ಜನರಿಗೆ ನೋವಾದರೆ, ಅಲ್ಲಿನ ಸಿಎಂ ಪರಿಹಾರ ಘೋಷಣೆ ಮಾಡಬೇಕು. ಆದರೆ, ತಮ್ಮ ಕುರ್ಚಿ ಬಿಗಿ ಪಡಿಸಿಕೊಳ್ಳಲು, ಹೈಕಮಾಂಡ್ ವಿಶ್ವಾಸ ಗಳಿಸಲು ರಾಜ್ಯದ ತೆರಿಗೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .
ರಾಜ್ಯದ ಎರಡು ಬೈ ಎಲೆಕ್ಷನ್ ವಿಚಾರವಾಗಿ ಮಾತನಾಡಿದ ಅವರು, ಎರಡೂ ಕ್ಷೇತ್ರದ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ದೆಹಲಿಯಲ್ಲಿ ಅಧಿವೇಶನ ನಡೆಯುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಸಹ ಪ್ರಚಾರ ಮಾಡುತ್ತಾರೆ, ಜೆಡಿಎಸ್ ನಾಯಕರು ಕೂಡ ಹೋಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು. ದೇವೇಗೌಡ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಎನ್‌ಡಿಎ ನೇರ ಆಯ್ಕೆ ಮಾಡಲು ತೀರ್ಮಾನದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಇದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ. ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದರು.
ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಮತ್ತೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಕಳೆದ ಬಾರಿ ಜೆಡಿಎಸ್ ಚಿಹ್ನೆಯಲ್ಲಿ ನಿಂತು ಗೆದ್ದಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ , ಮುಖಂಡರಾದ ದೊರೆಸ್ವಾಮಿ, ಕೃಷ್ಣಮೂರ್ತಿ (ಕಿಟ್ಟಿ) ,ಚಂದ್ರಣ್ಣ, ಸಂತೋಷ್, ಶ್ರೀಮೂರ್ತಿ, ಮೋಹನ್ , ರವಿ ಮತ್ತಿತರರು ಹಾಜರಿದ್ದರು.
ರಾಮನಗರ ತಾಲೂಕಿನ ಕಸಬಾ ಹೋಬಳಿಯ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ಎಸ್ ಟಿಆರ್ ಆರ್ (ಸ್ಯಾಟಲೈಟ್ ಟೌನ್ ರಿಂಗ್ ರೋಡ್) ಯೋಜನೆಯ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರನ್ನು ಭೇಟಿ ಮಾಡಿದ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಹವಾಲುಗಳನ್ನು ಆಲಿಸಿದರು.
ರೈತರ ಎಲ್ಲಾ ಮನವಿಗಳಿಗೆ ಸ್ಪಂದಿಸಿ 40 ಜನ ಸದಸ್ಯರನ್ನು ಒಳಗೊಂಡ ನಿಯೋಗವನ್ನು ರಚನೆ ಮಾಡಿ, ಖುದ್ದಾಗಿ ದೆಹಲಿಯಲ್ಲಿ ಕೇಂದ್ರ ಸಚಿವರಾದ ಎಚ್.ಡಿ ಕುಮಾರಣ್ಣನವರನ್ನು ಭೇಟಿ ಮಾಡಿಸುತ್ತೇನೆ. ಭೂಸ್ವಾಧೀನದ ಪರಿಹಾರದ ಹಣವನ್ನ ಶೀಘ್ರವಾಗಿ ಕೇಂದ್ರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.