
ಕನಕಪುರ (ಜ.13): ರೈತರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ಭೂ ಮಾಪನ ಪ್ರಕ್ರಿಯೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಿನೂತನ ತಂತ್ರಜ್ಞಾನದಡಿ ಮರು ಭೂ ಮಾಪನ ಮಾಡಿ ಸೂಕ್ತ ದಾಖಲೆಗಳನ್ನು ಒದಗಿಸುವ ಹೊಸ ಮಾದರಿ ಜಾರಿಗೆ ತಂದು ಇತಿಹಾಸ ನಿರ್ಮಿಸಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ಹಿಂದಿನಿಂದಲೂ ಹಳ್ಳಿಗಾಡಿನ ಜನಕ್ಕೆ ಜಮೀನು ಸರ್ವೆ ಕಾರ್ಯ ದುಸ್ತರವಾಗಿ ತೊಂದರೆ ಅನುಭವಿಸುತ್ತಿದ್ದರು.
ಇದನ್ನ ಮನಗಂಡ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಸೆಯಿಂದ ಮೊಟ್ಟ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೊಡ್ಡ ಆಲಹಳ್ಳಿಯಿಂದಲೇ ಆರಂಭಿಸಿ ಯಶಸ್ವಿಯಾಗಿದೆ ಎಂದು ಹೇಳಿದರು. ಹೋಬಳಿ ವ್ಯಾಪ್ತಿಯ 35 ಕಂದಾಯ ಗ್ರಾಮಗಳ ಪೈಕಿ 33 ಗ್ರಾಮಗಳಲ್ಲಿ ವಿನೂತನ ತಂತ್ರಜ್ಞಾನ (ರೋವರ್) ಮೂಲಕ ಸರ್ವೆ ಮಾಡಿ 23,469 ರೈತರ 97 ಸಾವಿರ ಎಕರೆ ಜಮೀನಿಗೆ ಹೊಸ ಪೋಡಿಯುಕ್ತ ದಾಖಲೆಗಳನ್ನು ನೀಡುವ ಮೂಲಕ ರಾಷ್ಟ್ರದಲ್ಲೇ ಹೊಸ ಮಾದರಿ ನಿರ್ಮಾಣ ಮಾಡಿದೆ. ಮುಂದಿನ ಪೀಳಿಗೆಗೆ ಅನುಕೂಲ ಆಗಲಿರುವುದರಿಂದ ಈ ಯೋಜನೆಯನ್ನು ರಾಮನಗರ ಜಿಲ್ಲೆ ಹಾಗೂ ರಾಜ್ಯಾದ್ಯಂತ ವಿಸ್ತರಣೆ ಮಾಡುವಂತೆ ಮನವಿ ಮಾಡಿ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಹೊಸ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ಡಿ.ಕೆ.ಶಿವಕುಮಾರ್ ಬಳಿ ಬರ್ತಾರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತ್ರವಲ್ಲದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಬರುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ವಿಜಯೇಂದ್ರ ಮತ್ತು ಡಿ.ಕೆ. ಶಿವಕುಮಾರ್ ಆತ್ಮೀಯತೆ ಹೊಂದಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ವಿಜಯೇಂದ್ರ ಮಾತ್ರವಲ್ಲದೆ ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ ಜತೆಗೆ ಆತ್ಮೀಯವಾಗಿದ್ದಾರೆ.
ಡಿ.ಕೆ.ಶಿವಕುಮಾರ್ ತಂಗಿ ಹೆಸರನಲ್ಲಿಯೂ ಐಶ್ವರ್ಯ ಭಾರೀ ವಂಚನೆ
ಅವರೂ ಕೆಲವೊಮ್ಮೆ ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು ಶಿವಕುಮಾರ್ ಬಳಿ ಬರುತ್ತಾರೆ ಎಂದು ತಿಳಿಸಿದರು. ವಿಜಯೇಂದ್ರ ಹಾಗೂ ಶಿವಕುಮಾರ್ ನಡುವೆ ಹೊಂದಾಣಿಕೆ ರಾಜಕೀಯದ ದಾಖಲೆಯಿದೆ ಎಂದು ಯತ್ನಾಳ್ ಹೇಳಿದ್ದಾರೆ. ಅಂಥ ದಾಖಲೆಗಳಿದ್ದರೆ ಅವರು ಬಿಡುಗಡೆ ಮಾಡಲಿ. ನಾವು ಬೇಡ ಎನ್ನುವುದಿಲ್ಲ. ಅವರೂ ಶಿವಕುಮಾರ್ ಭೇಟಿ ಮಾಡಿ ಉಭಯ ಕುಶಲೋಪರಿ ಮಾತನಾಡುತ್ತಾರೆ. ಆದರೂ ವಿಜಯೇಂದ್ರ ಬಗ್ಗೆ ಮಾತ್ರ ಏತಕ್ಕಾಗಿ ಹೇಳಿದ್ದಾರೆ ಗೊತ್ತಿಲ್ಲ. ಅದು ಅವರ ಆಂತರಿಕ ವಿಚಾರ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.