ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Jul 24, 2024, 8:49 AM IST

ಈಗ ಇಡೀ ರಾಜ್ಯದಲ್ಲಿ ಉತ್ತಮ ಮಳೆ, ಬಿತ್ತನೆ ಕಾರ್ಯ ನಡೆದು, ಎಲ್ಲ ಜಲಾಶಯಗಳು ತುಂಬುತ್ತಿವೆ. ಇದಕ್ಕೆ ಅವರು ಏನು ಹೇಳುತ್ತಾರೆ ಎಂದು ವಿಪಕ್ಷಗಳ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಟಾಂಗ್ ನೀಡಿದರು. 


ರಾಮನಗರ (ಜು.24): ಆ ಸಿದ್ದರಾಮಯ್ಯನ ಕಾಲಗುಣ ಸರಿ ಇಲ್ಲ, ಅವರು ಅಧಿಕಾರಕ್ಕೆ ಬಂದರೆ ಮಳೆ ಆಗಲ್ಲ ಅಂತ ಮೌಢ್ಯ ನಂಬುವವರು ಟೀಕೆ ಮಾಡುತ್ತಾರೆ. ಈಗ ಇಡೀ ರಾಜ್ಯದಲ್ಲಿ ಉತ್ತಮ ಮಳೆ, ಬಿತ್ತನೆ ಕಾರ್ಯ ನಡೆದು, ಎಲ್ಲ ಜಲಾಶಯಗಳು ತುಂಬುತ್ತಿವೆ. ಇದಕ್ಕೆ ಅವರು ಏನು ಹೇಳುತ್ತಾರೆ ಎಂದು ವಿಪಕ್ಷಗಳ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿ ಟಾಂಗ್ ನೀಡಿದರು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹಳ ಜನರು ಮೌಢ್ಯಗಳನ್ನು ನಂಬುತ್ತಾರೆ. ಸಿದ್ದರಾಮಯ್ಯನ ಕಾಲಗುಣದಿಂದ ಮಳೆ ಆಗುತ್ತಿಲ್ಲ ಎಂದೂ ಟೀಕೆ ಮಾಡುತ್ತಾರೆ. ಆದರೀಗ ನಾಡಿನಲ್ಲಿ ಉತ್ತಮವಾಗಿ ಮಳೆ, ಬಿತ್ತನೆಯಾಗಿದ್ದು, ಒಳ್ಳೆಯ ಫಸಲು ಬರುವ ನಿರೀಕ್ಷೆ ಇದೆ. ಎಲ್ಲ ಜಲಾಶಯಗಳು ಭರ್ತಿಯಾಗಿವೆ. ನನ್ನ ಕಾಲಗುಣದಿಂದ ಇದೆಲ್ಲ ಆಯಿತೆಂದು ಹೇಳಲು ಆಗುತ್ತದೆಯೇ. ಆ ಮಾತನ್ನು ನಾನು ಹೇಳುವುದಿಲ್ಲ. ಇಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ ಎಂದರು. ಪ್ರಕೃತಿ ಮುನಿಸಿಕೊಂಡರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದು ನಮ್ಮೆಲ್ಲರ ಕಣ್ಣ ಮುಂದಿದೆ. ಅದೇ ಪ್ರಕೃತಿ ನಮ್ಮ ಪರವಾಗಿದ್ದರೆ ಮಾತ್ರ ಮಳೆ ಬೆಳೆಯಾಗಲು, ಜಲಾಶಯ ತುಂಬಲು ಸಾಧ್ಯವಾಗುತ್ತದೆ. 

Latest Videos

undefined

ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ: ಶಾಸಕ ಸುನಿಲ್ ಕುಮಾರ್ ಆರೋಪ

ಆ ಚಾಮುಂಡೇಶ್ವರಿ ದೇವಿಯ ಕೃಪೆ ಇದ್ದರೆ ಮಳೆ, ಬೆಳೆ, ಸಮೃದ್ಧಿ, ಶಾಂತಿ ಎಲ್ಲವೂ ನೆಲೆಸಲಿದೆ. ಪ್ರಕೃತಿ ಮತ್ತು ಚಾಮುಂಡಿ ದೇವಿ ನಾಡಿನ ಜನರು, ನಮ್ಮ ಸರ್ಕಾರದ ಪರವಾಗಿದೆ ಎಂದು ಹೇಳಿದರು. ಶಾಸಕ ಇಕ್ಬಾಲ್ ಹುಸೇನ್ ರವರು ರಾಮನಗರ ಕ್ಷೇತ್ರಕ್ಕೆ ವಿಶೇಷ ಅನುದಾನ ಕೇಳಿದರೆ, ಬಾಲಕೃಷ್ಣರವರು ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ರಾಮನಗರ ಜಿಲ್ಲೆ ಮಾತ್ರವಲ್ಲದೆ ನಾಡಿನ 7 ಕೋಟಿ ಜನರನ್ನು ಅಭಿವೃದ್ಧಿ ಮಾಡುವ ಪ್ರಾಮಾಣಿಕ ಕೆಲಸವನ್ನು ಸರ್ಕಾರ ಮಾಡುತ್ತದೆ. ಚಾಮುಂಡೇಶ್ವರಿ ದೇವಿ ನಿಮ್ಮೆಲ್ಲರಿಗೂ ಆರೋಗ್ಯ,ಆಯಸ್ಸು ಕೊಡಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಈ ಮಣ್ಣಿನ ಗುಣ ಪವಿತ್ರವಾದದ್ದು, ಆದ್ದರಿಂದಲೇ ನಾವು ಪುಣ್ಯವಂತರು. ಇಲ್ಲಿ ಶ್ರೀ ರಾಮಚಂದ್ರನ ಪಾದಸ್ಪರ್ಶ ಇದೆ, ಪಶ್ಚಿಮ ದಿಕ್ಕಿನಲ್ಲಿ ಈಶ್ವರನ ದೇಗುಲ, 10 -12 ಶಕ್ತಿ ದೇವತೆಗಳು ನೆಲೆಸಿವೆ. ನಾವು ಪೂಜಿಸುವ ದೇವತೆಗಳು ನಮ್ಮನ್ನು ರಕ್ಷಣೆ ಮಾಡುತ್ತಿವೆ. ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಪಕ್ಷಾತೀತ, ಜಾತ್ಯತೀತವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ.ಆ ಚಾಮುಂಡಿ ದೇವಿಯೇ ನಮ್ಮೆಲ್ಲರನ್ನು ಒಗ್ಗೂಡಿಸಿದ್ದಾಳೆ ಎಂದರು.

ಸಿದ್ದರಾಮಯ್ಯರವರು ಅಪರೂಪದ ಮುಖ್ಯಮಂತ್ರಿ. ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಬಡವರ ಪಾಲಿನ ಕಣ್ಮಣಿ. ಎಲ್ಲ ಜಾತಿ, ಧರ್ಮ, ವರ್ಗದ ಜನರ ಬಗ್ಗೆ ಆಲೋಚನೆ ಮಾಡುವವರು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಶಾದಿಭಾಗ್ಯ ಸೇರಿ ಅನೇಕ ಭಾಗ್ಯಗಳ ಮೂಲಕ ಎಲ್ಲ ವರ್ಗದ ಜನರಿಗೆ ಭಾಗ್ಯದ ಬಾಗಿಲು ತೆರೆದವರು. ಈಗ 5 ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರು ಗ್ಯಾರಂಟಿ ಸರದಾರರಾಗಿದ್ದಾರೆ ಎಂದು ಬಣ್ಣಿಸಿದರು.

ರಾಮನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ರವರು ನನಗೆ ಬೆನ್ನುಲುಬಾಗಿ ನಿಂತು ಕೆಲಸ ಮಾಡಲು ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ರಸ್ತೆ, ಚರಂಡಿ, ಯುಜಿಡಿ, ಶಾಲಾ ಕಟ್ಟಡ, ಕುಡಿಯುವ ನೀರು, ಬಡವರಿಗೆ ನಿವೇಶನ, ಸೂರು ಕಲ್ಪಿಸುವ ಕೆಲಸ ಆಗಬೇಕಿದೆ. ಇದಕ್ಕೆ ದೊಡ್ಡ ಮೊತ್ತದ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು. ನೀವು ಎರಡು ಬಾರಿ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದೀರಿ. ಆ ಆಶ್ವಾಸನೆಯನ್ನು ಈಡೇರಿಸಬೇಕು ಎಂದು ಇಕ್ಬಾಲ್ ಹುಸೇನ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ವರುಣದೇವನ ಕೃಪೆಯಿಂದಾಗಿ ಕೆಆರ್ ಎಸ್ ಭರ್ತಿಯಾಗಿದ್ದು, ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ. ಕೇಂದ್ರ ಸರ್ಕಾರದಿಂದಲೂ ಮೇಕೆದಾಟು ಯೋಜನೆಗೆ ಚಾಲನೆ ಸಿಗುವಂತಾಗಲಿ. ಮುಖ್ಯಮಂತ್ರಿಗಳು ರಾಮನಗರ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಸಹಕಾರ ನೀಡಬೇಕು ಎಂದು ಕೋರಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಹಳ ವರ್ಷಗಳಿಂದಲೂ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. 

ಸಿದ್ದರಾಮಯ್ಯ ಸರ್ಕಾರದಿಂದ ದಲಿತರ ಹಣ ಲೂಟಿ: ಆರ್.ಅಶೋಕ್ ಟೀಕೆ

ಪ್ರತಿ ಬಾರಿಯೂ ವರುಣ ದೇವ ಬಂದು ಆಶೀರ್ವಾದ ಮಾಡುವುದನ್ನು ಸಂಪ್ರದಾಯಿಕವಾಗಿ ನೋಡಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿವೆ. ತಾಯಿ ಚಾಮುಂಡೇಶ್ವರಿ ರೈತರ ಸಂಕಷ್ಟ ದೂರ ಮಾಡಿ ಸುಖ ನೆಮ್ಮದಿ ನೆಲೆಸುವಂತೆ ಆಶೀರ್ವಾದ ಮಾಡಲೆಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಗಾತ್ರದ ರೇಷ್ಮೆ ಹಾರ ಹಾಕಿ ಸನ್ಮಾನಿಸಿದರು. ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಕೆ.ರಾಜು, ಜಿಎಂ ಕಂಪನಿಯ ಜಯಂತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

click me!