ಖಾಸಗಿ ಬಸ್ಸು ನಿಲ್ದಾಣಕ್ಕೆ ನಾಮಕರಣ; ಬಿಜೆಪಿ ಕಾಂಗ್ರೆಸ್ ನಡುವೆ ಕಿತ್ತಾಟ

By Kannadaprabha News  |  First Published Feb 10, 2023, 1:08 PM IST

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ಸು ನಿಲ್ದಾಣಕ್ಕೆ ಹೆಸರಿಡುವ ವಿಚಾರಕ್ಕೆ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ಸದಸ್ಯರ ಮಧ್ಯೆ ತೀವ್ರ ವಾಗ್ವಾದ, ಪರಸ್ಪರ ಧಿಕ್ಕಾರದ ಘೋಷಣೆಗಳ ಕೂಗಿದ ಘಟನೆ ನಗರದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆಯಿತು.


ದಾವಣಗೆರೆ (ಫೆ.10) : ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ಸು ನಿಲ್ದಾಣಕ್ಕೆ ಹೆಸರಿಡುವ ವಿಚಾರಕ್ಕೆ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್‌ ಸದಸ್ಯರ ಮಧ್ಯೆ ತೀವ್ರ ವಾಗ್ವಾದ, ಪರಸ್ಪರ ಧಿಕ್ಕಾರದ ಘೋಷಣೆಗಳ ಕೂಗಿದ ಘಟನೆ ನಗರದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗುರುವಾರ ನಡೆಯಿತು.

ನಗರದ ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಜಯಮ್ಮ ಗೋಪಿನಾಯ್ಕ(Jayamma Gopinaik) ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಖಾಸಗಿ ಬಸ್ಸು ನಿಲ್ದಾಣಕ್ಕೆ ಹಿಂದೆ ನಗರಸಭೆ ಅವಧಿಯಲ್ಲಿ ಇಟ್ಟಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ(Dr Shamanur shivashankrappa) ಹೆಸರಿನ ಬದಲಿಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ(Former Prime Minister Atal Bihari Vajpayee) ಹೆಸರನ್ನು ಇಡಲು ಆಡಳಿತ ಪಕ್ಷ ಸಿದ್ಧತೆ ನಡೆಸಿಕೊಂಡಿದೆ ಎಂಬ ವಿಚಾರಕ್ಕೆ ಉಭಯ ಪಕ್ಷದ ಸದಸ್ಯರ ಮಧ್ಯೆ ವಾಕ್ಸಮರ ಏರ್ಪಟ್ಟಿತು.

Tap to resize

Latest Videos

 

ಕಾಂಗ್ರೆಸ್ ಕಾಲು ಮುರಿದ ಕುದುರೆ ಕೊಟ್ಟು ನನಗೆ ಅಧಿಕಾರ ನಡೆಸಲು ಬಿಟ್ಟರು; ಎಚ್‌ಡಿಕೆ

ಕಾಂಗ್ರೆಸ್‌ ಸದಸ್ಯ ಎ.ನಾಗರಾಜ ಮಾತನಾಡಿ, ಖಾಸಗಿ ಬಸ್ಸು ನಿಲ್ದಾಣಕ್ಕೆ ದಶಕಗಳ ಹಿಂದೆಯೇ ಶಾಮನೂರು ಶಿವಶಂಕರಪ್ಪ ಹೆಸರು ನಾಮಕರಣ ಮಾಡಲಾಗಿದೆ. ಈಗ ಬಿಜೆಪಿಯವರು ಮಾಜಿ ಪ್ರಧಾನಿ ವಾಜಪೇಯಿ ಹೆಸರಿಡಲು ಸಿದ್ಧತೆ ನಡೆಸಿದ್ದು, ಈ ಮೂಲಕ ಹಿರಿಯರಾದ ಶಾಮನೂರು ಶಿವಶಂಕರಪ್ಪನವರಿಗೆ ಅಗೌರವ ತರುವಂತೆ ವರ್ತಿಸುತ್ತಿದೆ. ಇದು ರಾಜಕೀಯ ಸಂಘರ್ಷಕ್ಕೆ ಆಸ್ಪದ ಮಾಡಿಕೊಡುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಸದಸ್ಯರಾದ ಮಾಜಿ ಮೇಯರ್‌ ಬಿ.ಜಿ.ಅಜಯಕುಮಾರ, ಎಸ್‌.ಟಿ.ವೀರೇಶ ಇತರರು, ಯಾವುದೇ ಬಡಾವಣೆ, ರಸ್ತೆಗೆ ಹೋದರೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೆಸರು ಕಾಣುತ್ತದೆ. ಶಾಮನೂರುರ ಬಗ್ಗೆ ನಮಗೆ ಅಪಾರ ಗೌರವವಿದೆ. ಹೊಸದಾಗಿ ನಿರ್ಮಾಣವಾದ ಖಾಸಗಿ ಬಸ್ಸು ನಿಲ್ದಾಣಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಹೆಸರಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ಜೀವಂತ ಇರುವವರ ಹೆಸರು ಬೇಡ:

ಮಾಜಿ ಮೇಯರ್‌ ಎಸ್‌.ಟಿ.ವೀರೇಶ ಮಾತನಾಡಿ, ಸುಪ್ರೀಂಕೋರ್ಚ್‌ ಆದೇಶದಂತೆ ಜೀವಂತ ವ್ಯಕ್ತಿಗಳ ಹೆಸರನ್ನು ಯಾವುದೇ ಸರ್ಕಾರಿ, ಸಾರ್ವಜನಿಕ ಕಟ್ಟಡಗಳಿಗೆ ನಾಮಕರಣ ಮಾಡುವಂತಿಲ್ಲ. ಹಾಗಾಗಿ ಪಾಲಿಕೆ ಸಭಾಂಗಣಕ್ಕೆ ಇಟ್ಟಿರುವ ಶಾಮನೂರು ಶಿವಶಂಕರಪ್ಪ ಹೆಸರನ್ನು ತೆಗೆಯಬೇಕು ಎಂಬುದಾಗಿ ಆಗ್ರಹಿಸಿದರು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರು. ಆಗ ಇಂತಹದ್ದೊಂದು ಆದೇಶವಿದ್ದರೆ ಕೊಡಿ ಎಂಬುದಾಗಿ ವಿಪಕ್ಷ ಸದಸ್ಯರು ಪಟ್ಟು ಹಿಡಿದರು.

ಆಗ ವಿಪಕ್ಷ ಸದಸ್ಯ ಎ.ನಾಗರಾಜ ಮಾತನಾಡಿ, 2005ರ ಸರ್ಕಾರಿ ಆದೇಶದ ಪ್ರತಿ ತರಲು ಕಾಲ ಹಿಡಿಯುತ್ತದೆ. ನಮಗೆ ಒಂದಿಷ್ಟುಸಮಯಾವಕಾಶ ನೀಡಿ. ಇದಕ್ಕೆ ಅವಕಾಶ ನೀಡದೇ, ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ನೀವು ಸರ್ಕಾರಿ ಬಸ್ಸು ನಿಲ್ದಾಣಕ್ಕೆ ಹೆಸರಿಡುವುದಕ್ಕೆ ನಮ್ಮ ಯಾರದೇ ವಿರೋಧವೂ ಇಲ್ಲ ಎಂದರು. ಅದಕ್ಕೆ ವಿಪಕ್ಷ ಸದಸ್ಯ ಜಿ.ಎಸ್‌.ಮಂಜುನಾಥ ಗಡಿಗುಡಾಳ್‌ ಧ್ವನಿಗೂಡಿಸಿದರು. ಆದರೆ, ಆಡಳಿತ ಪಕ್ಷದ ಸದಸ್ಯರು ಸರ್ಕಾರದ ಆದೇಶದ ಪ್ರತಿ, ದಾಖಲೆ ಈಗಲೇ ನೀಡಬೇಕೆಂದು ಪಟ್ಟು ಹಿಡಿದರು. ಕಡೆಗೆ ಬಿಜೆಪಿ ಸದಸ್ಯರು ವಿಷಯವನ್ನು ಸ್ಥಿರೀಕರಿಸಿ, ಸಭೆಯ ಬಹುಮತದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಒತ್ತಾಯಿಸಿದರು.

ತೀವ್ರ ವಾಕ್ಸಮರ:

ಆಡಳಿತ ಸದಸ್ಯರ ವರ್ತನೆಯಿಂದ ಆಕ್ರೋಶಕೊಂಡ ಕಾಂಗ್ರೆಸ್‌ ಸದಸ್ಯರು ಮೇಯರ್‌ ಜಯಮ್ಮ ಗೋಪಿನಾಯ್ಕ ಆಸೀನರಾಗಿದ್ದ ಸ್ಥಳದ ಮುಂಭಾಗಕ್ಕೆ ಹೋಗಿ, ಯಾವುದೇ ಕಾರಣಕ್ಕೂ ಖಾಸಗಿ ಬಸ್ಸು ನಿಲ್ದಾಣದ ಹೆಸರು ಬದಲಾವಣೆಗೆ ನಾವು ಬಿಡಲ್ಲ. ಹಿಂದಿನ ಸರ್ಕಾರದ ಆದೇಶವನ್ನು ಒಪ್ಪುವಂತೆ ಘೋಷಣೆ ಕೂಗುತ್ತಾ ತಾಕೀತು ಮಾಡಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಜೀವಂತ ವ್ಯಕ್ತಿಗಳ ಹೆಸರನ್ನು ಇಡಬಾರದೆಂಬುದಾಗಿ ಘೋಷಣೆ ಕೂಗಿದರು. ಇದೇ ಹೆಸರಿನ ವಿಚಾರಕ್ಕೆ ಸುಮಾರು 2 ಗಂಟೆ ಉಭಯ ಪಕ್ಷಗಳ ಮಧ್ಯೆ ತೀವ್ರ ವಾಕ್ಸಮರ ನಡೆಯಿತು.

ಮೇಯರ್‌ ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿಬಾಯಿ ಖಂಡೋಜಿ ರಾವ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೋಗಿ ಶಾಂತಕುಮಾರ, ರಾಕೇಶ ಜಾಧವ್‌, ಮಂಜುನಾಥ ನಾಯ್ಕ, ಎಚ್‌.ಉದಯಕುಮಾರ, ಸದಸ್ಯರಾದ ಮಾಜಿ ಮೇಯರ್‌ ಉಮಾ ಪ್ರಕಾಶ, ವೀಣಾ ನಂಜಪ್ಪ, ಆರ್‌.ಶಿವಾನಂದ, ಕೆ.ಪ್ರಸನ್ನಕುಮಾರ, ಕೆ.ಎಂ.ವೀರೇಶ, ಯಶೋಧ ಯೋಗೇಶ, ಶಿವಪ್ರಕಾಶ, ಚಾರ್ಲಿ ಪೈಲ್ವಾನ್‌, ಅಬ್ದುಲ್‌ ಲತೀಫ್‌ ಇತರರಿದ್ದರು.

Prajadhwani yatre: ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ: ಹರಿಪ್ರಸಾದ್‌ ವಾಗ್ದಾಳಿ

ನಗರಸಭೆ ಇದ್ದಾಗ 2005ರಲ್ಲಿ ಶಾಮನೂರು ಶಿವಶಂಕರಪ್ಪನವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಬಸ್ಸು ಏಜೆಂಟರ ಮನವಿ ಮೇರೆಗೆ ಸಾಮಾನ್ಯ ಸಭೆಯಲ್ಲಿ ಠರಾವ್‌ ಪಾಸ್‌ ಮಾಡಿ, ಶಾಮನೂರು ಹೆಸರಿಟ್ಟಿದ್ದೆವು. ಆಗ ನಾನೂ ನಗರಸಭೆ ಸದಸ್ಯನಿದ್ದೆ. ಒಮ್ಮೆ ಇಟ್ಟಿರುವ ಹೆಸರನ್ನು ತೆಗೆದು ಹಾಕಿ, ಹಿರಿಯ ಸಾಧಕರಿಗೆ ಕಳಂಕ ತರಬೇಡಿ. ಸರ್ಕಾರಿ ಬಸ್ಸು ನಿಲ್ದಾಣಕ್ಕೆ ಬೇರೆ ಯವುದಾದರೂ ಹೆಸರು ಇಡಿ.

ಎ.ನಾಗರಾಜ, ವಿಪಕ್ಷ ಕಾಂಗ್ರೆಸ್‌ ಸದಸ್ಯ.

ದೇಶಕ್ಕಾಗಿ ಹೋರಾಡಿದವರ ಹೆಸರಿಟ್ಟರೆ ಈಗಿನ ಯುವ ಪೀಳಿಗೆಗೆ ಹುಮ್ಮಸ್ಸು ಬರುತ್ತದೆ. ನಾವು ಖಾಸಗಿ ಬಸ್ಸು ನಿಲ್ದಾಣಕ್ಕೆ ಮಾಜಿ ಪ್ರಧಾನಿ ವಾಜಪೇಯಿ ಹೆಸರನ್ನು ಸೂಚಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಖಾಸಗಿ ಬಸ್ಸು ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೆಸರಿಡುವಂತೆ ಸಭೆಗೆ ಮನವಿ ಮಾಡಲಾಗಿದೆ. ಅದನ್ನು ಸ್ಥಿರೀಕರಿಸಬೇಕು.

ಬಿ.ಜಿ.ಅಜಯಕುಮಾರ, ಬಿಜೆಪಿ ಸದಸ್ಯ, ಮಾಜಿ ಮೇಯರ್‌

click me!