ಗರೀಬಿ ಹಠಾವೋ ಎಂದು ಹೇಳಿದ ಕಾಂಗ್ರೆಸ್ ಬಡವರ ಅಭಿವೃದ್ಧಿಗೆ ಏನನ್ನು ಮಾಡಲಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆ ಪಕ್ಷದ ಮುಖಂಡರ ಗರೀಬಿ ಹೋಯಿತೆ ಹೊರತು ಬಡವರಿಗೆ ಯಾವುದೇ ಅನುಕೂಲವಾಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ (ಮಾ.05): ಗರೀಬಿ ಹಠಾವೋ ಎಂದು ಹೇಳಿದ ಕಾಂಗ್ರೆಸ್ ಬಡವರ ಅಭಿವೃದ್ಧಿಗೆ ಏನನ್ನು ಮಾಡಲಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆ ಪಕ್ಷದ ಮುಖಂಡರ ಗರೀಬಿ ಹೋಯಿತೆ ಹೊರತು ಬಡವರಿಗೆ ಯಾವುದೇ ಅನುಕೂಲವಾಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ವಿಜಯ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರಿಗೆ ಮನೆ, ಶೌಚಾಲಯ, ನೀರು ಕೊಟ್ಟಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್‌ನ ಗರೀಬಿ ಹಠಾವೋ ಘೋಷಣೆಯಿಂದ ಗಾಂಧಿ ಕುಟುಂಬದ, ಖರ್ಗೆ ಕುಟುಂಬದ, ಡಿ.ಕೆ.ಶಿವಕುಮಾರ್ ಕುಟುಂಬದ ಗರೀಬಿ ಹೋಯಿತೇ ಹೊರತು ನಿಜವಾದ ಬಡವರಿಗೆ ಯಾವುದೇ ಸೌಲಭ್ಯ ಸಿಗಲಿಲ್ಲ ಎಂದು ಕಿಡಿಕಾರಿದ ಅವರು, ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ಪ್ರಚಾರ ಮಾಡುವ ಕಾಂಗ್ರೆಸ್‌ಗೆ ಅಂಬೇಡ್ಕರ್ ಕುರಿತು ಗೌರವವೇ ಇಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್‌ಗೆ ನಿಜವಾದ ಗೌರವ ನೀಡಿದರು ಎಂದರು.
ಬೆಂಗಳೂರಿಗೆ ರಾಮನಗರ ಹೆಬ್ಬಾಗಿಲು ಆಗಲಿ: ಸಚಿವ ಅಶ್ವತ್ಥ ನಾರಾಯಣ
ಕೆಂಪೇಗೌಡರ ಹೆಸರಿನಲ್ಲಿ ರಾಜಕೀಯ ಮಾಡಿದವರು ಏನನ್ನು ಮಾಡಲಿಲ್ಲ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದ್ದು ಬಿಜೆಪಿ. ಚನ್ನಪಟ್ಟಣದಲ್ಲಿ ನಿಜವಾದ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಬಿಜೆಪಿ ಅವಧಿಯಲ್ಲೇ. ತಾಲೂಕಿನ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇ ಯೋಗೇಶ್ವರ್. ಅವರ ಅವಧಿಯಲ್ಲಿ ಚನ್ನಪಟ್ಟಣದ ರಸ್ತೆಗಳು ಅಭಿವೃದ್ಧಿಯಾಯಿತು. ಹಾಗಾಗಿ ಈ ಬಾರಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ. ನೀವು ಪರಿವರ್ತನೆಗಾಗಿ ಬೆಂಬಲ ನೀಡಿ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುತ್ತಿರುವ ಯೋಗೇಶ್ವರ್ ನಿಮ್ಮ ಪರ ಹೋರಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಈ ಬಾರಿ ಕಮಲ ಅರಳುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ತಾಲೂಕಿನ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಏನಾದರೂ ಜಾರಿಯಾಗಿದ್ದರೆ ಅದು ಬಿಜೆಪಿ ಅವಧಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ನನ್ನ ಮೇಲೆ ಒತ್ತಡ ತಂದು ನೀರಾವರಿ ಯೋಜನೆ ಅನುಷ್ಠಾನವಾಗುವಂತೆ ಮಾಡಿದರು. ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ರಾತ್ರಿ ನಿದ್ದೆ ಮಾಡುವುದಿಲ್ಲ. ತಾಲೂಕಿನ ನೀರಾವರಿಗೆ ಕೊಡುಗೆ ನೀಡಿ ತಾಲೂಕು ನಳನಳಿಸುವಂತೆ ಮಾಡಿದ ಸಿಪಿವೈ ಬೆಂಬಲಿಸಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮಾಡುವುದಕ್ಕೆ ಬಲ ನೀಡಿ ಎಂದರು.
ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಯೋಗೇಶ್ವರ್ ಸಾಕಷ್ಟುಶ್ರಮ ವಹಿಸಿದರು. ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟುಶ್ರಮಿಸಿದ್ದಾರೆ. ಅವರಿಗೆ ಭಗೀರಥ ಎಂಬ ಇನ್ನೊಂದು ಹೆಸರಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿರುವ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.
ಸತ್ತೇಗಾಲ ಯೋಜನೆಗೆ ಕೆಲವರು ಅಡಚಣೆ ಉಂಟು ಮಾಡುತ್ತಿದ್ದಾರೆ. ಇಲ್ಲವಾದರೆ ಕಳೆದ ಡಿಸೆಂಬರ್‌ನಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಬೇಕಿತ್ತು. ಏನೇ ಆದರೂ ಇನ್ನು ಕೆಲವೇ ದಿನಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿ ರಾಮನಗರ, ಚನ್ನಪಟ್ಟಣಕ್ಕೆ ನೀರು ಕೊಡ್ತೇವೆ. 2400 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ತರಲಾಗಿದೆ. ಇಡೀ ಜಿಲ್ಲೆಯಲ್ಲಿ ಮನೆಮನೆಗೂ ನೀರು ಕೊಡಿವ ಕೆಲಸ ಬಿಜೆಪಿ ಮಾಡುತ್ತಿದೆ. ರೇಷ್ಮೆ ಮಾರುಕಟ್ಟೆಯಾರೂ ಕಟ್ಟಲಿಲ್ಲ. ಆದರೆ ರೇಷ್ಮೆ ಮಾರುಕಟ್ಟೆಅಭಿವೃದ್ಧಿ ಮಾಡಿದ್ದು ನಮ್ಮ ಸರ್ಕಾರ. ಮಾವು ಸಂಸ್ಕರಣೆ ಘಟಕ ತಂದಿದ್ದು ನಾವು. ಕೈಗಾರಿಕೆ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಿದ್ದೇವೆ. ರಾಮನಗರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದ್ದೇವೆ. ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಆದ್ದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಯೋಗೇಶ್ವರ್ ಅವರನ್ನು ಆಶೀರ್ವದಿಸಿ ಎಂದು ಹೇಳಿದರು.
ಕಿಚಡಿ ಸರ್ಕಾರ ಬರಬಾರದು: ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಿಚಡಿ ಸರ್ಕಾರ ಬರಬಾರದು. ಸುಭದ್ರ ಸರ್ಕಾರ ರಚನೆ ಆಗಬೇಕು. ಕೇವಲ 10-15 ಸೀಟು ಗೆದ್ದು ಲಾಟರಿ ಎತ್ತುವವರಿಗೆ ಮತ ಹಾಕಬೇಡಿ. ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಸ್ಥಿರ ಸರ್ಕಾರ ಬರುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಕುಂಟೆತ್ತುಗಳು: ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಜೋಡೆತ್ತು ಎಂಬ ಹೆಸರಿನಲ್ಲಿ ಬರುತ್ತಾರೆ. ಆದರೆ ಅವರೆಡು ಕುಂಟೆತ್ತುಗಳು. ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಜೆಡಿಎಸ್‌ಗೆ ಮತ ಹಾಕಿದ ಹಾಗೆ. ಡಿಕೆಶಿ ಹಾಗೂ ಎಚ್ಡಿಕೆ ಕಳ್ಳ-ಮಳ್ಳ ಇದ್ದ ಹಾಗೆ. ಅವರಿಗೆ ಮತ ಹಾಕಬೇಡಿ. ಬರೀ ಮಾತನಾಡುತ್ತಾರೆ. ಜಾತಿ ಹೆಸರು ಹೇಳುತ್ತಾರೆ. ಕೆಂಪೇಗೌಡರ ಹೆಸರು ಹೇಳ್ತಾರೆ ಆದರೆ, ಒಂದು ಪ್ರತಿಮೆ ನಿರ್ಮಾಣ ಮಾಡಲಿಲ್ಲ. ಆದರೆ ಬೆಂಗಳೂರಿನಲ್ಲಿ ಪ್ರತಿಮೆ ನಿರ್ಮಿಸಿದ್ದು ಅಶ್ವಥ್ ನಾರಾಯಣ್. ಇದೀಗ ವಿಧಾನಸಭಾದಲ್ಲೂ ಪ್ರತಿಮೆ ನಿರ್ಮಾಣ ಮಾಡಲಿದ್ದೇವೆ. ನೀವು ಯೋಚನೆ ಮಾಡಿ. ದಿನವೂ ಸಿಗುವ ಅಭ್ಯರ್ಥಿ ಗೆಲ್ಲಿಸಿ. ವರ್ಷಕ್ಕೊಮ್ಮೆ, ತಿಂಗಳಿಗೊಮ್ಮೆ ಬರುವ ನಾಯಕರು ಬೇಡ ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಚಿರತೆ ದಾಳಿ: ಆಸ್ಪತ್ರೆಗೆ ದಾಖಲು
ಕಣ್ಣೀರೆ ಎಚ್‌ಡಿಕೆ ಸಾಧನೆ: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಮನೆಮನೆಗೆ ಹೋಗುತ್ತಿದ್ದು, ಕುಮಾರಸ್ವಾಮಿ ಅವರ ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ತಿಳಿಸುತ್ತಿದ್ದೇನೆ. ಕುಮಾರಸ್ವಾಮಿ ಅವರಿಗೂ ಚನ್ನಪಟ್ಟಣಕ್ಕೂ ಯಾವುದೇ ಸಂಬಂಧ ಇರಲಿಲ್ಲ. ತಿಂಗಳಿಗೊಮ್ಮೆ ಬರುತ್ತಿದ್ದರು. ಇಲ್ಲಿಂದ ಶಾಸಕರಾದ ಮೇಲೆ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕುಮಾರಸ್ವಾಮಿ ಅವರ ಸಾಧನೆ ಕೇವಲ ಕಣ್ಣೀರು ಮಾತ್ರ ಎಂದರು. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಮುಖಂಡರಾದ ಮಲವೇಗೌಡ ಇತರರಿದ್ದರು.