
ಮದ್ದೂರು (ಮಾ.13): ಇನ್ನು ನೂರು ವರ್ಷವಾಗಿದ್ದರೂ ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ತರಲಾಗುತ್ತಿರಲಿಲ್ಲ. ಕೃಷಿ ವಿಶ್ವವಿದ್ಯಾಲಯ ತಂದು ಜಿಲ್ಲೆಗೆ ಶಾಶ್ವತ ಕೊಡುಗೆ ನೀಡಿದ್ದೇವೆ. ಇನ್ನು ಲಕ್ಷ ಕೋಟಿ ಅನುದಾನ ತಂದರೂ ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಮನಾಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಸೋಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃತಕ ಬುದ್ಧಿಮತ್ತೆಯಿಂದ ದಿನೇ ದಿನೇ ಉದ್ಯೋಗ ಕಡಿತಗೊಳ್ಳುತ್ತಿದೆ. ಉದ್ಯೋಗಸ್ಥರೂ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿಯ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.
ನೂತನ ತಂತ್ರಜ್ಞಾನ ಬಳಸಿಕೊಂಡು ಯುವಕರು ಸಮಗ್ರ ಕೃಷಿ ಮಾಡಿದರೆ ತಿಂಗಳಿಗೆ 2 ರಿಂದ 3 ಲಕ್ಷ ರು. ಸಂಪಾದಿಸಬಹುದು. ಯಾರ ಗುಲಾಮರಾಗಿ ಉದ್ಯೋಗ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಕೃಷಿ ವಿವಿ ನೆರವಾಗಲಿದೆ ಎಂದರು.
ಗ್ಯಾಸ್ ಸಮಸ್ಯೆಗೆ ಪ್ರಧಾನಿ ಮೋದಿ ಅವರನ್ನು ಹೊಣೆ ಮಾಡಲಾಗುವುದಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ಯಾರ ಮಾತು ಕೇಳಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಮೋದಿ ವಿಶ್ವಗುರು, ಪ್ರಪಂಚದ ಎಲ್ಲರ ಸ್ನೇಹ ಗೆದ್ದಿದ್ದೇನೆ ಎನ್ನುವವರು ಇಂತಹ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಅಷ್ಟೇ ಎಂದು ಮೊನಚು ಮಾತಿನಿಂದ ತಿವಿದರು. ವಾಣಿಜ್ಯ ಸಿಲಿಂಡರ್‌ಗೆ ಈಗಾಗಲೇ ಸಮಸ್ಯೆಯಾಗಿದೆ. ಮುಂದಿನ 15 ದಿನದಲ್ಲಿ ಗೃಹಬಳಕೆ ಅಡುಗೆ ಅನಿಲಕ್ಕೂ ಸಮಸ್ಯೆ ಆಗಲಿದೆ. ಗ್ಯಾಸ್‌ಗೆ ಎದುರಾಗಿರುವ ಅಭಾವವನ್ನು ಕೇಂದ್ರ ಸರ್ಕಾರವೇ ಸಮಸ್ಯೆ ನೀಗಿಸಬೇಕು ಎಂದರು.
ಹೊಸದಾಗಿ ಆಯ್ಕೆಯಾದ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ. ಸಚಿವ ಸ್ಥಾನಕ್ಕೆ ಹೊಸಬರು, ಹಳಬರು ಎಂಬ ಬೇಧವಿಲ್ಲ. ಜಿವಾರು, ಕಮ್ಯೂನಿಟಿ ಎಲ್ಲವನ್ನು ನೋಡಿ ಸಚಿವ ಸ್ಥಾನ ನೀಡಬೇಕು. ನಮ್ಮ ಪಕ್ಷ ಮುಕ್ತವಾಗಿದೆ. ಸಿಎಂ, ಡಿಸಿಎಂ ಇಬ್ಬರು ಸೇರಿ ನಿರ್ಧಾರ ಮಾಡುತ್ತೆ. ಹಳಬರಿಗೆ ಕೋಕ್ ಕೊಡುವ ಬಗ್ಗೆ ಕೂಡ ಪಕ್ಷ ನಿರ್ಧರಿಸುತ್ತೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.