ಕೇಂದ್ರ ಸರ್ಕಾರದಿಂದ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿ: ಸಚಿವ ಚಲುವರಾಯಸ್ವಾಮಿ

Published : Aug 10, 2025, 09:12 AM ISTUpdated : Aug 11, 2025, 05:34 AM IST
N. Chaluvarayaswamy

ಸಾರಾಂಶ

ರಾಜ್ಯದಲ್ಲಿ ಯಾವುದೇ ರಸಗೊಬ್ಬರದ ಅಭಾವ ಉಂಟಾಗಿಲ್ಲ. ಕೇಂದ್ರದಿಂದ ಬಾಕಿ ಇರುವ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಬಿಜೆಪಿಯವರು ರಾಜ್ಯಕ್ಕೆ ಕೊಡಿಸಲಿ.

ನಾಗಮಂಗಲ (ಆ.10): ರಾಜ್ಯಕ್ಕೆ ನೀಡಬೇಕಿರುವ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದರೂ ಕೂಡ ಇರುವಷ್ಟು ಪ್ರಮಾಣದಲ್ಲಿ ಯಾವುದೇ ತೊಂದರೆಯಾಗದಂತೆ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಹೊರವಲಯದ ಎಪಿಎಂಸಿ ಆವರಣದಲ್ಲಿ ಬಿಎಸ್‌ಎಫ್ ಫೌಂಡೇಷನ್ ಹಾಗೂ ಭೂಸಿರಿ ರೈತ ಉತ್ಪಾದಕರ ಕಂಪನಿ ವತಿಯಿಂದ ಶನಿವಾರ ಆಯೋಜಿಸಿದ್ದ ರೈತರಿಗೆ ಬಿತ್ತನೆ ರಾಗಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 2 ವರ್ಷಗಳಿಂದ ಕೃಷಿ ಸಚಿವನಾಗಿ ರೈತ ಹಾಗೂ ಜನಪರ ಕೆಲಸ ಮಾಡುತ್ತಿರುವುದನ್ನು ಸಹಿಸದ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರು ಸರ್ಕಾರ ರಸಗೊಬ್ಬರವನ್ನು ಸರಿಯಾಗಿ ಪೂರೈಕೆ ಮಾಡಿಲ್ಲ ಎನ್ನುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಯಾವುದೇ ರಸಗೊಬ್ಬರದ ಅಭಾವ ಉಂಟಾಗಿಲ್ಲ. ಕೇಂದ್ರದಿಂದ ಬಾಕಿ ಇರುವ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಬಿಜೆಪಿಯವರು ರಾಜ್ಯಕ್ಕೆ ಕೊಡಿಸಲಿ. ಇದರಿಂದ ರೈತರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ರಸಗೊಬ್ಬರ ಸರಬರಾಜು ಮಾಡಬೇಕಿರುವುದು ಕೇಂದ್ರ ಸರ್ಕಾರದ ಕೆಲಸ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಹಾಗೂ ಭತ್ತದ ಬಿತ್ತನೆ ಬೀಜಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಸರ್ಕಾರದಿಂದ ನೀಡುವ ಬಿತ್ತನೆ ಬೀಜಗಳನ್ನು ಸಂಸ್ಕರಿಸಿ ಪ್ರಮಾಣಿಕರಿಸಲಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷ ಬೆಳೆದ ಬೆಳೆಯನ್ನೇ ಬಿತ್ತನೆಗೆಂದು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ಇಳುವರಿ ಹೆಚ್ಚು ಪಡೆಯಬೇಕೆಂದರೆ ಸಂಸ್ಕರಿಸಿ, ಪ್ರಮಾಣಿಕರಿಸಿದ ಬಿತ್ತನೆ ಬೀಜಗಳನ್ನು ಉಪಯೋಗಿಸಬೇಕು. ರೈತರು ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಲ್ಲಿ ನಷ್ಟ ಇರುವುದಿಲ್ಲ ಎಂದರು. ಈವರೆಗೂ ತುಂಬಾ ತಡವಾಗಿ ರಾಗಿ ಖರೀದಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮುಂದಿನ ಸೆಪ್ಟೆಂಬರ್‌ನಿಂದಲೇ ರಾಗಿ ಖರೀದಿ ನೋಂದಣಿ ಆರಂಭಿಸಿ ಡಿಸೆಂಬರ್‌ವರೆಗೆ ನೋಂದಣಿ ಮಾಡಿಕೊಳ್ಳಲಾಗುವುದು.

ರೈತರು ಮಧ್ಯವರ್ತಿಗಳಿಗೆ ಮಣೆ ಹಾಕದೆ ನೇರವಾಗಿ ಬಂದು ರಾಗಿ ಮಾರಾಟ ಮಾಡಬೇಕು ಎಂದರು. ಈ ವರ್ಷ 7 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಹೊಂದಲಾಗಿದೆ. ಪ್ರತಿ ಕ್ವಿಂಟಲ್ ರಾಗಿಗೆ 4886 ರು. ದರದಲ್ಲಿ ರೈತರಿಂದ ಖರೀದಿಸಲಾಗುವುದು. ಹಾಗಾಗಿ ಯಾವೊಬ್ಬ ರೈತರೂ ಕೂಡ ಕಡಿಮೆ ದರದಲ್ಲಿ ಮಧ್ಯವರ್ತಿಗಳಿಗೆ ರಾಗಿ ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು. ಕಳೆದ ವರ್ಷಕ್ಕಿಂತ 689 ರು. ಹೆಚ್ಚು ಮೊತ್ತವನ್ನು ರಾಗಿಗೆ ಈ ವರ್ಷದಲ್ಲಿ ನೀಡಲಾಗುತ್ತಿದೆ. ವಿಶೇಷವಾಗಿ ಈ ಸಾಲಿನಿಂದ ಸಿರಿಧಾನ್ಯ ಖರೀದಿಗೂ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಸರ್ಕಾರದಿಂದ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಕಳೆದ ಸಾಲಿನಲ್ಲಿ ರಾಗಿ ಖರೀದಿ ಮಾಡಿದ 700 ಕೋಟಿ ರು. ಹಣದಲ್ಲಿ ಒಂದು ರುಪಾಯಿಯನ್ನು ಬಾಕಿ ಉಳಿಸಿಕೊಳ್ಳದೆ ಬಿಡುಗಡೆ ಮಾಡಲಾಗಿದೆ. ಸೋಮವಾರ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಜಮಾ ಆಗಲಿದೆ ಎಂದು ಹೇಳಿದರು. ಕೆಲಸ ಮಾಡುವವರನ್ನು ಹಾಗೂ ಕೆಲಸ ಮಾಡದವರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಮತ ಹಾಕುತ್ತಿರುವುದು ಸರಿಯಲ್ಲ. ನನಗೆ ಮತ ಹಾಕಿದ್ರೂ ಕೆಲಸ ಮಾಡುತ್ತೇನೆ, ಹಾಕಿಲ್ಲದಿದ್ದರೂ ಕೆಲಸ ಮಾಡುತ್ತೇನೆ. ಏನೂ ಕೆಲಸ ಮಾಡದೆ ಆರಾಮಾಗಿ 5 ವರ್ಷ ಅಧಿಕಾರ ಪೂರೈಸಿದವರಿಗೆ ಸಮಾನಾಗಿ ಭಾವಿಸದಿರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ರೈತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ್ದ ರೈತರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮನ್ಮುಲ್ ಅಧ್ಯಕ್ಷ ಶಿವಪ್ಪ, ಪುರಸಭೆ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ಸದಸ್ಯ ಸಂಪತ್‌ಕುಮಾರ್, ಭೂಸಿರಿ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಎಸ್.ವೆಂಕಟೇಶ್ ಸೇರಿ ನೂರಾರು ಮಂದಿ ರೈತರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು