
ಮೈಸೂರು (ಜು.07): ನಮ್ಮ ತಂದೆಗೆ (ಜಿ.ಟಿ. ದೇವೇಗೌಡ) ಜೆಡಿಎಸ್ ಪಕ್ಷದ ನಿರ್ಧಾರಗಳ ಬಗ್ಗೆ ಕೆಲವು ಅಸಮಾಧಾನಗಳಿವೆ. ಈ ಕಾರಣದಿಂದ ಅವರು ಕೆಲವು ಕಾಲದಿನಿಂದ ದೂರ ಉಳಿದಿದ್ದಾರೆ. ಆದರೆ ಅವರನ್ನು ಮನವೊಲಿಸುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ. ಇದು ನನ್ನ ವೈಯಕ್ತಿಕ ವಿಷಯ ಅಲ್ಲದ ಕಾರಣ ಹೆಚ್ಚಿನ ಮಾತು ಬಿಟ್ಟಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರ ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಜಿ.ಟಿ ದೇವೇಗೌಡ ಅವರು ಪಕ್ಷದ ಚಟುವಟಿಕೆಯಿಂದ ದೂರವಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ, ಮೊದಲ ಬಾರಿಗೆ ಈ ಕುರಿತು ಮೌನ ಮುರಿದರು. ನಮ್ಮ ತಂದೆಗೆ ಜೆಡಿಎಸ್ ಪಕ್ಷದ ನಿರ್ಧಾರಗಳ ಬಗ್ಗೆ ಕೆಲವು ಅಸಮಾಧಾನಗಳಿವೆ. ಈ ಕಾರಣದಿಂದ ಅವರು ಕೆಲವು ಕಾಲದಿನಿಂದ ದೂರ ಉಳಿದಿದ್ದಾರೆ. ಆದರೆ ಅವರನ್ನು ಮನವೊಲಿಸುವ ಪ್ರಯತ್ನ ಪಕ್ಷದ ಹಿರಿಯರು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾನಂತು ಜೆಡಿಎಸ್‌ನಲ್ಲೇ ಇರುತ್ತೇನೆ:
'ನಾನು ಜೆಡಿಎಸ್‌ನಲ್ಲಿದ್ದೇನೆ ಮತ್ತು ಜೆಡಿಎಸ್‌ನಲ್ಲಿಯೇ ಮುಂದುವರೆಯುತ್ತೇನೆ. ಕಾಂಗ್ರೆಸ್ ಕಡೆಗೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಜನರು ನನ್ನನ್ನು ಜೆಡಿಎಸ್‌ನಿಂದ ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ. ನಮ್ಮ ನಾಯಕ ಎಚ್.ಡಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಿಖಿಲ್‌ಗೆ ನಾಯಕರ ಶಕ್ತಿ ಇದೆ
ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬಳಿಕ ಪಕ್ಷವನ್ನು ನಿಖಿಲ್ ಮುಂದುವರೆಸಲು ಶಕ್ತಿ ಹೊಂದಿದ್ದಾರೆ. ಅವರು ರಾಜ್ಯಾಧ್ಯಕ್ಷರಾಗಬೇಕೆಂಬ ಉದ್ದೇಶ ಪಕ್ಷದ ಶಾಸಕರಲ್ಲಿದೆ. ನಿಖಿಲ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದು ನಮ್ಮ ಕನಸು' ಎಂದು ಹೇಳಿದ ಅವರು, ಆಗಸ್ಟ್‌ನಲ್ಲಿ ನಿಖಿಲ್ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನೂ ಹಂಚಿಕೊಂಡರು.
ಮೈಸೂರು ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ನೂರಕ್ಕೆ ನೂರರಷ್ಟು ಅಕ್ರಮ ನಡೆದಿದ್ದು, ಈ ಕುರಿತು ಸಹಕಾರ ಸಚಿವ ರಾಜಣ್ಣ ಅವರೇ ಒಪ್ಪಿಕೊಂಡಿರುವುದಾಗಿ ಜೆಡಿಎಸ್ ಶಾಸಕ ಜಿ.ಡಿ ಹರೀಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. 'ಚುನಾವಣೆಯಲ್ಲಿ ಎಲ್ಲೆಲ್ಲಿ ಅಕ್ರಮ ಮತಗಳು ಸೇರಿವೆ ಎಂಬುದರ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದು, ಆ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಸಬೇಕೆಂದು ನಾವು ನ್ಯಾಯಾಲಯದಲ್ಲಿ ಕೇಳಲಿದ್ದೇವೆ ಎಂದು ಹೇಳಿದರು.
ರಾಜೀನಾಮೆ ಕೇಳುವುದಿಲ್ಲ, ಅದು ಅವರ ಆತ್ಮಸಾಕ್ಷಿಗೆ ಬಿಟ್ಟುಬಿಡುತ್ತೇನೆ:
ಸಹಕಾರ ಕ್ಷೇತ್ರವನ್ನೇ ಹಾಳು ಮಾಡುವ ರೀತಿಯಲ್ಲಿ ಸಚಿವ ರಾಜಣ್ಣ ಹೆಜ್ಜೆ ಇಟ್ಟಿದ್ದಾರೆ. ಇವರಿಗೆ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಗಂಭೀರ ವಾಗ್ಮೀಯದೊಂದಿಗೆ ಹರೀಶ್ ಗೌಡ ಕಿಡಿಕಾರಿದರು. "ನಾನು ರಾಜೀನಾಮೆ ಕೇಳುವುದಿಲ್ಲ, ಅದು ಅವರ ಆತ್ಮಸಾಕ್ಷಿಗೆ ಬಿಟ್ಟುಬಿಡುತ್ತೇನೆ. ಅವರು ಈ ಅಕ್ರಮದ ಬಗ್ಗೆ ಮಾಡಿದ ಹೇಳಿಕೆಯನ್ನೇ ಕೋರ್ಟ್‌ಗೆ ಸಲ್ಲಿಸೋಣ. ಸರ್ಕಾರವು ಮತಗಳನ್ನು ಸೇರಿಸದಿದ್ದರೆ ಇಬ್ಬರು ಶಾಸಕರು ಹಾಗೂ ಒಬ್ಬ ಮಾಜಿ ಶಾಸಕರು ಸೋತು ಹೋಗುತ್ತಿದ್ದರು. ಗೆದ್ದವರು ಕೇವಲ ಒಂದೊಂದು ಮತದಿಂದ ಜಯಗಳಿಸಿದ್ದಾರೆ. ಇದು ಅಕ್ರಮವಾಗಿ ಸೇರಿಸಲಾದ ಮತಗಳ ಫಲಿತಾಂಶ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.